IPL 2022: ನಮ್ಮಲ್ಲೇ ಐಪಿಎಲ್ ನಡೆಸಿ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಹ್ವಾನ..!
* ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಆಯೋಜಿಸುವಂತೆ ಬಿಸಿಸಿಐಗೆ ಮನವಿ
* 6 ಮೈದಾನಗಳಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವುದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಫರ್
* ಬಿಸಿಸಿಐ ಪ್ಲ್ಯಾನ್ ‘ಬಿ’ ಸಿದ್ಧಪಡಿಸುತ್ತಿದೆ ಎನ್ನುವುದರ ಬೆನ್ನಲ್ಲೇ ಹರಿಣಗಳ ಕ್ರಿಕೆಟ್ ಮಂಡಳಿಯಿಂದ ಪ್ರಸ್ತಾಪ
ನವದೆಹಲಿ(ಜ.26): 2022ರ ಐಪಿಎಲ್ (IPL 2022) ಆವೃತ್ತಿಯನ್ನು ಭಾರತದಲ್ಲೇ ನಡೆಸುವಂತೆ ತಂಡಗಳ ಮಾಲಿಕರಿಂದ ಒತ್ತಡ ಎದುರಾಗಿದ್ದರೂ ಕೋವಿಡ್ ಪ್ರಕರಣಗಳು (Coronavirus) ಹೆಚ್ಚಾಗಿ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸಬೇಕಾದ ಪರಿಸ್ಥಿತಿ ಎದುರಾದರೆ ಏನು ಮಾಡುವುದು ಎನ್ನುವ ಪ್ರಶ್ನೆಗೆ ಬಿಸಿಸಿಐ (BCCI) ಉತ್ತರ ಹುಡುಕಾಟ ಆರಂಭಿಸಿದೆ. ಬಿಸಿಸಿಐ ಪ್ಲ್ಯಾನ್ ‘ಬಿ’ ಸಿದ್ಧಪಡಿಸುತ್ತಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ(Cricket South Africa), ಐಪಿಎಲ್ ಆಯೋಜನೆಗೆ ಸಿದ್ಧವಿರುವುದಾಗಿ ಬಿಸಿಸಿಐ ಅನ್ನು ಸಂಪರ್ಕಿಸಿದ್ದು, ಟೂರ್ನಿ ನಡೆಸಲು ಬೇಕಿರುವ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡುವುದಾಗಿ ಪ್ರಸ್ತಾಪವಿರಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಬಿಸಿಸಿಐ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಐಪಿಎಲ್ ಸ್ಥಳಾಂತರದ ಬಗ್ಗೆ ಈಗಾಗಲೇ ಚರ್ಚೆ ಆರಂಭಿಸಿದ್ದು, ಫೆಬ್ರವರಿ 20ರ ವೇಳೆಗೆ ಬಿಸಿಸಿಐ ತನ್ನ ನಿರ್ಧಾರವನ್ನು ತಿಳಿಸುವುದಾಗಿ ತಂಡಗಳ ಮಾಲಿಕರಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ.ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಐಪಿಎಲ್ ಪಂದ್ಯಗಳನ್ನು ನಡೆಸಲು ಜೋಹಾನ್ಸ್‌ಬರ್ಗ್, ಪ್ರಿಟೋರಿಯಾ, ಬೆನೊನಿ, ಪಾಟ್‌ಶೆಫ್‌ಸ್ಟೋರಮ್, ಕೇಪ್‌ಟೌನ್ ಹಾಗೂ ಪಾರ್ಲ್‌ನಲ್ಲಿರುವ ಕ್ರೀಡಾಂಗಣಗಳನ್ನು ಬಿಟ್ಟುಕೊಡುವುದಾಗಿ ತಿಳಿಸಿದೆ ಎನ್ನಲಾಗಿದೆ.
ಜೋಹಾನ್ಸ್‌ಬರ್ಗ್‌ನಲ್ಲಿ ತಂಡಗಳಿಗೆ ಬಯೋಬಬಲ್ ವ್ಯವಸ್ಥೆ ಮಾಡಲಿದ್ದು, ಅಲ್ಲಿಂದ ರಸ್ತೆ ಮೂಲಕ ಪ್ರಿಟೋರಿಯಾ, ಬೆನೊನಿ, ಪಾಟ್‌ಶೆಫ್‌ಸ್ಟೋರಮ್‌ಗೆ ತೆರಳಬಹುದಾಗಿದೆ. ಇನ್ನು ಕೇಪ್‌ಟೌನ್ ಹಾಗೂ ಪಾರ್ಲ್ ಅಕ್ಕಪಕ್ಕದಲ್ಲಿದ್ದು, ಕೆಲ ಪಂದ್ಯಗಳನ್ನು ಆ ಎರಡು ನಗರಗಳಲ್ಲಿ ನಡೆಸಿದರೆ ವಿಮಾನ ಪ್ರಯಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದು ಎಂದು ತಿಳಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಗ್ಗದ ದರಕ್ಕೆ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕೊಡಿಸುವುದಾಗಿಯೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಭರವಸೆ ನೀಡಿದೆ ಎನ್ನಲಾಗಿದೆ.
2009ರಲ್ಲಿ ಸಂಪೂರ್ಣ ಐಪಿಎಲ್ ಟೂರ್ನಿಗೆ ಆತಿಥ್ಯ ವಹಿಸಿದ್ದ ದಕ್ಷಿಣ ಆಫ್ರಿಕಾ: 2009ರ ಐಪಿಎಲ್ ಸಂದರ್ಭದಲ್ಲೇ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ಎರಡನೇ ಆವೃತ್ತಿಯ ಸಂಪೂರ್ಣ ಐಪಿಎಲ್ ಟೂರ್ನಿಯು ದಕ್ಷಿಣ ಆಫ್ರಿಕಾಗೆ ಸ್ಥಳಾಂತರವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಫೈನಲ್‌ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ದ ಮುಗ್ಗರಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಇನ್ನು 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಕೆಲವು ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ನಡೆದಿದ್ದರು.
Lucknow Super Giants: ಕೆ.ಎಲ್. ರಾಹುಲ್ ನೇತೃತ್ವದ ಹೊಸ ಐಪಿಎಲ್ ತಂಡದ ಹೆಸರು ಅನಾವರಣ..!
ಯುಎಇ ಬಗ್ಗೆ ನಿರಾಸಕ್ತಿ: ಈ ಬಾರಿ ಯುಎಇಗೆ ಟೂರ್ನಿಯನ್ನು ಸ್ಥಳಾಂತರಿಸಲು ಬಿಸಿಸಿಐ ಮನಸು ಮಾಡುತ್ತಿಲ್ಲ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ದುಬಾರಿ ವೆಚ್ಚ. 2020, 2021ರಲ್ಲಿ ಯುಎಇನಲ್ಲಿ ಐಪಿಎಲ್ ನಡೆದಿತ್ತು. ಸುಮಾರು 3 ತಿಂಗಳು ಯುಎಇನಲ್ಲಿ ವಾಸ್ತವ್ಯ ಹೂಡಿದ್ದ ತಂಡಗಳು ಹೋಟೆಲ್‌ಗಳಿಗೇ ಹೆಚ್ಚು ಹಣ ವೆಚ್ಚ ಮಾಡಿದ್ದವು. ಅಲ್ಲದೇ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ 2020ರಲ್ಲಿ 100 ಕೋಟಿ ರುಪಾಯಿ, 2021ರಲ್ಲಿ 50 ಕೋಟಿ ರುಪಾಯಿ ಹಣ ಪಾವತಿಸಿತ್ತು. ಈ ಬಾರಿ ಆ ಮೊತ್ತವನ್ನು ಕಡಿತಗೊಳಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
ಇದಷ್ಟೇ ಅಲ್ಲದೇ ಯುಎಇನಲ್ಲಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಸಂಜೆಯ ವೇಳೆಗೆ ಹೆಚ್ಚು ಇಬ್ಬನಿ ಬೀಳುವುದರಿಂದ ಟಾಸ್ ಗೆದ್ದ ತಂಡ ಬಹುತೇಕ ಪ್ರಾಬಲ್ಯ ಮೆರೆಯುವ ಸಾಧ್ಯತೆಯಿದೆ. ಇದರ ಜತೆಗೆ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ತಂಡವು ಸಾಕಷ್ಟು ಪರದಾಡಿದ್ದನ್ನು ಕ್ರಿಕೆಟ್ ಜಗತ್ತು ಕಂಡಿದೆ. ಹೀಗಾಗಿ ಯುಎಇನಲ್ಲಿ ಐಪಿಎಲ್ ಆಯೋಜನೆಗೆ ಐಪಿಎಲ್ ಫ್ರಾಂಚೈಸಿಗಳು ಕೂಡಾ ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿದೆ.