ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ, ಎಂಎಸ್ ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡುವ ಬಗ್ಗೆ ಅನಿಶ್ಚಿತತೆ ಮೂಡಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ, ತಮ್ಮ ದೇಹ ಮೊದಲಿನಂತಿಲ್ಲ ಎಂದು ಆಪ್ತ ಸ್ನೇಹಿತ ಸುರೇಶ್ ರೈನಾಗೆ ತಿಳಿಸಿದ್ದಾರೆ. ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಧೋನಿಯ ಭವಿಷ್ಯದ ನಿರ್ಧಾರವನ್ನು ಮ್ಯಾನೇಜ್‌ಮೆಂಟ್‌ಗೆ ಬಿಟ್ಟಿದ್ದಾರೆ, ಇದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಚೆನ್ನೈ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ, ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಧೋನಿ ಈ ಸೀಸನ್‌ನ ಯಾವುದೇ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಈ ಸೀಸನ್‌ನಲ್ಲಿ ಚೆಪಾಕ್‌ನಲ್ಲಿ ನಡೆದ ಚೆನ್ನೈನ ಕೊನೆಯ ಪಂದ್ಯದಲ್ಲಿ ಧೋನಿ ಆಡುತ್ತಾರೆ ಮತ್ತು ತಮ್ಮ ತವರಿನ ಅಂಗಳದಲ್ಲೇ ನಿವೃತ್ತಿ ಘೋಷಿಸುತ್ತಾರೆ ಎಂಬ ವರದಿಗಳಿದ್ದವು. ಆದರೆ, ಪಂದ್ಯಕ್ಕೂ ಮುನ್ನ ಮತ್ತೆ ಗಾಯಗೊಂಡಿದ್ದು ಅವರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.

ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಧೋನಿ ಡ್ರೆಸ್ಸಿಂಗ್ ರೂಮ್‌ನಲ್ಲೇ ಇದ್ದರು. ಪಂದ್ಯದ ನಂತರ, ತಂಡದ ಫೋಟೋಶೂಟ್ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು 'ಲ್ಯಾಪ್ ಆಫ್ ಹಾನರ್' ವೇಳೆ ಧೋನಿ ಮೈದಾನಕ್ಕೆ ಇಳಿದಿದ್ದರು.
ಧೋನಿ ಜತೆ ರೈನಾ ನಡೆಸಿದ ಸಂಭಾಷಣೆ ಬಹಿರಂಗ
ಈ ಪಂದ್ಯದ ವೇಳೆ ಕಾಮೆಂಟೇಟರ್ ಆಗಿದ್ದ ಮಾಜಿ ಕ್ರಿಕೆಟಿಗ ಹಾಗೂ ಧೋನಿಯ ಆಪ್ತ ಸ್ನೇಹಿತ ಸುರೇಶ್ ರೈನಾ, ಧೋನಿ ಜೊತೆ ನಡೆಸಿದ ಸಂಭಾಷಣೆಯನ್ನು ಸ್ಟಾರ್ ಸ್ಪೋರ್ಟ್ಸ್ ಬಹಿರಂಗಪಡಿಸಿದೆ. ಮುಂದಿನ ಐಪಿಎಲ್ ಸೀಸನ್‌ನಲ್ಲಿ ಧೋನಿ ಮತ್ತೆ ಆಡುತ್ತಾರಾ ಎಂಬ ಪ್ರಶ್ನೆಗೆ ರೈನಾ ಉತ್ತರ ಪಡೆದರು. ಆದರೆ ಧೋನಿ ನೀಡಿದ ಉತ್ತರ ಅಭಿಮಾನಿಗಳ ಎದೆಬಗೆಯುವಂತಿತ್ತು.
"ನಾನು ಧೋನಿಗೆ ಹೇಳಿದೆ, 'ನೀನು ಈ ಸೀಸನ್‌ನಲ್ಲಿ ಬರೀ ಒಂದು ಮಿಸ್ಡ್ ಕಾಲ್ ಕೊಟ್ಟಿದ್ದೀಯಾ. ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಆಗಲ್ಲ. ಹಾಗಾಗಿ ಮುಂದಿನ ವರ್ಷ ನೀನು ಖಂಡಿತವಾಗಿಯೂ ವಾಪಸ್ ಬರಲೇಬೇಕು' ಅಂತ. ಅದಕ್ಕೆ ಧೋನಿ, 'ನನ್ನ ದೇಹ ಮೊದಲಿನ ಹಾಗೆ ಇಲ್ಲ' ಎಂದು ಉತ್ತರಿಸಿದರು. ಆಗ ನಾನು, 'ನಾವಿದನ್ನೆಲ್ಲ ನಂಬಲ್ಲ, ನೀನು ಮುಂದಿನ ವರ್ಷ ಆಡಲೇಬೇಕು' ಎಂದು ಹೇಳಿದೆ. ಉಳಿದಿದ್ದೆಲ್ಲಾ ಧೋನಿಯ ವೈಯಕ್ತಿಕ ನಿರ್ಧಾರ. ಆದರೂ ಧೋನಿ ಸಕಾರಾತ್ಮಕವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ರೈನಾ ಹೇಳಿದರು.
ವಯಸ್ಸು ಮತ್ತು ಗಾಯದ ಸಮಸ್ಯೆ ಕಾಡುತ್ತಿರುವ ಕಾರಣ, 44 ವರ್ಷದ ಧೋನಿಗೆ ಮುಂದಿನ ವರ್ಷ ಚೆನ್ನೈ ಜೆರ್ಸಿಯಲ್ಲಿ ಮತ್ತೆ ಕಣಕ್ಕಿಳಿಯುವುದು ಕಷ್ಟವಾಗಬಹುದು ಎಂಬುದನ್ನು ಈ ಉತ್ತರ ಸೂಚಿಸುತ್ತದೆ. ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರಿಗೂ ಧೋನಿಯ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದುರಾದವು.
"ಅದು ಚೆನ್ನೈ ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳಬೇಕಾದ ನಿರ್ಧಾರ. ಧೋನಿಯ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದು ನನಗೆ ತಿಳಿದಿದೆ. ಈ ಸೀಸನ್‌ನಲ್ಲಿ ಅವರು ಆಡದಿದ್ದರೂ, ಯಾವಾಗಲೂ ತಂಡದ ಜೊತೆಗಿದ್ದರು. ಇದು ಯುವ ಆಟಗಾರರಿಗೆ ದೊಡ್ಡ ಆತ್ಮವಿಶ್ವಾಸ ನೀಡುತ್ತದೆ. ತಂಡದಲ್ಲಿ ಈಗಲೂ ಅವರ ಪ್ರಭಾವ ದೊಡ್ಡದಿದೆ. ಅವರ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರವನ್ನು ಮ್ಯಾನೇಜ್‌ಮೆಂಟ್ ಪ್ರಕಟಿಸಲಿದೆ" ಎಂದು ಫ್ಲೆಮಿಂಗ್ ಸ್ಪಷ್ಟಪಡಿಸಿದರು. ಗುರುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಅವರದ್ದೇ ತವರಿನಲ್ಲಿ ಚೆನ್ನೈ ಮುಂದಿನ ಪಂದ್ಯವನ್ನಾಡಲಿದೆ. ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಚೆನ್ನೈಗೆ ಈ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಅನಿವಾರ್ಯವಾಗಿದೆ.


