IPL Auction 2022: ಈ ಮೂವರು ವಿಂಡೀಸ್ ಸ್ಟಾರ್ ಆಟಗಾರರು ಅನ್‌ಸೋಲ್ಡ್ ಆಗಬಹುದು..!
ಬೆಂಗಳೂರು: 2022ನೇ ಸಾಲಿನ ಐಪಿಎಲ್ (IPL 2022) ಆಟಗಾರರ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಒಟ್ಟು 10 ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ (IPL Mega Auction) ಪಾಲ್ಗೊಳ್ಳುತ್ತಿದ್ದು, ಇದೇ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದೆ. ಮೆಗಾ ಹರಾಜಿಗೆ ದೇಶಿ ಹಾಗೂ ವಿದೇಶಿ ಆಟಗಾರರು ಸೇರಿ ಒಟ್ಟು 1,214 ಆಟಗಾರರು ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ 41 ಆಟಗಾರರು ವೆಸ್ಟ್ ಇಂಡೀಸ್ ಮೂಲದವರಾಗಿದ್ದಾರೆ. ಈ ಪೈಕಿ ಮೂವರು ತಾರಾ ಆಟಗಾರರು ಹರಾಜಿನಲ್ಲಿ ಅನ್‌ಸೋಲ್ಡ್ ಆಗುವ ಸಾಧ್ಯತೆಯಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಎರಡು ಬಾರಿ ಐಸಿಸಿ ಟಿ20 ವಿಶ್ವಕಪ್ ಗೆದ್ದಕೊಂಡ ಏಕೈಕ ರಾಷ್ಟ್ರವೆಂದರೆ ಅದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲಿ ಟಿ20 ಸ್ಪೆಷಲಿಸ್ಟ್ ಆಟಗಾರರ ದಂಡೇ ಇದೆ. ಅದರಲ್ಲೂ ಗೇಲ್, ಬ್ರಾವೋ, ಪೊಲ್ಲಾರ್ಡ್, ನರೈನ್, ರಸೆಲ್ ಈಗಾಗಲೇ ಐಪಿಎಲ್‌ನಲ್ಲೀ ದೂಳೆಬ್ಬಿಸಿದ್ದಾರೆ.
ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿ ದಾಖಲೆ ಬರೆದಿರುವ ಕ್ರಿಸ್ ಗೇಲ್ 2022ನೇ ಸಾಲಿನ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಗೇಲ್ ಅವರಿಲ್ಲದೇ ಈ ಬಾರಿ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ನಡೆಯಲಿದೆ.
ಇದೆಲ್ಲದರ ಹೊರತಾಗಿಯೂ ಈ ಬಾರಿಯ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಈ ಮೂವರು ಆಟಗಾರರು ಹರಾಜಾಗದೇ ಉಳಿಯುವ ಸಾಧ್ಯತೆಯಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ಶಾಯ್ ಹೋಪ್
ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಶಾಯ್ ಹೋಪ್, ವಿಂಡೀಸ್ ಪರ 18 ಟಿ20 ಪಂದ್ಯಗಳನ್ನಾಡಿದ್ದಾರೆ. ಶಾಯ್ ಹೋಪ್ ಕೂಡಾ ಐಪಿಎಲ್ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಇದುವರೆಗೂ ಒಮ್ಮೆಯೂ ಯಾವೊಂದು ಫ್ರಾಂಚೈಸಿಯು ಶಾಯ್ ಹೋಪ್ ಅವರನ್ನು ಖರೀದಿಸಲು ಒಲವು ತೋರಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಹೋಪ್ ಸ್ಟ್ರೈಕ್ ರೇಟ್ (116.84) ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಹೀಗಾಗಿ ಶಾಯ್ ಹೋಪ್ ಅವರು ಈ ಬಾರಿಯು ಅನ್‌ಸೋಲ್ಡ್ ಆಗುವ ಸಾಧ್ಯತೆ ಹೆಚ್ಚು.
2. ಶೆಲ್ಡನ್ ಕಾಟ್ರೆಲ್
ಗಾಯದ ಸಮಸ್ಯೆ ಪದೇ ಪದೇ ಬಾಧಿಸದೇ ಹೋಗಿದ್ದರೆ, ಶೆಲ್ಡನ್ ಕಾಟ್ರೆಲ್ ವಿಂಡೀಸ್‌ನ ಮಾರಕ ವೇಗಿಗಳಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದರು. ಫಿಟ್ನೆಸ್ ಸಮಸ್ಯೆಯಿಂದಾಗಿಯೇ ಇದೀಗ ಎಡಗೈ ವೇಗಿ ವಿಂಡೀಸ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.
2020ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಕಾಟ್ರೆಲ್ ಅವರನ್ನು ಖರೀದಿಸಿತ್ತು. ಆದರೆ ಆರು ಪಂದ್ಯಗಳಿಂದ 176 ರನ್ ನೀಡಿ ಕೇವಲ 6 ವಿಕೆಟ್ ಮಾತ್ರ ಕಬಳಿಸಿದ್ದರು. ಕಳೆದ ಆವೃತ್ತಿಯಲ್ಲಿ ಅನ್‌ಸೋಲ್ಡ್ ಆಗಿದ್ದ ಕಾಟ್ರೆಲ್, ಈ ಬಾರಿ ಕೂಡಾ ಹರಾಜಾಗದೇ ಉಳಿದರೆ ಅಚ್ಚರಿಪಡುವಂತಿಲ್ಲ.
3. ಡ್ಯಾರನ್ ಬ್ರಾವೋ
ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನ ಶ್ರೇಷ್ಠ ಆಲ್ರೌಂಡರ್ ಎನಿಸಿಕೊಂಡಿದ್ದರೆ, ಅವರ ಸೋದರ ಸಂಬಂಧಿ ಡ್ಯಾರನ್ ಬ್ರಾವೋ ಚುಟುಕು ಕ್ರಿಕೆಟ್‌ನಲ್ಲಿ ಅಂತಹ ಪರಿಣಾಮಕಾರಿ ಪ್ರದರ್ಶನ ತೋರಲು ವಿಫಲರಾಗಿದ್ದಾರೆ.
ಈ ಹಿಂದೆ ಡೆಕ್ಕನ್ ಚಾರ್ಜರ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ಡ್ಯಾರನ್ ಬ್ರಾವೋ ಹೆಚ್ಚು ಕಮಾಲ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಕೂಡಾ ಯಾವ ಫ್ರಾಂಚೈಸಿಯು ಡ್ಯಾರನ್ ಬ್ರಾವೋ ಅವರನ್ನು ಖರೀದಿಸುವ ಸಾಧ್ಯತೆ ಕಡಿಮೆಯಿದೆ.