ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಕುತೂಹಲದ ಘಟ್ಟ ತಲುಪಿದೆ. ದಿಲೀಪ್ ದೋಶಿ ಅವರ ನಿಧನಕ್ಕೆ ಸಂತಾಪ ಸೂಚಿಸಲು ಆಟಗಾರರು ಕಪ್ಪುಪಟ್ಟಿ ಧರಿಸಿದ್ದರು. ಐದನೇ ದಿನದಾಟದಲ್ಲಿ ಗೆಲುವಿಗಾಗಿ ಭಾರತಕ್ಕೆ 10 ವಿಕೆಟ್, ಇಂಗ್ಲೆಂಡಿಗೆ 350 ರನ್‌ಗಳ ಅವಶ್ಯಕತೆಯಿದೆ.

ಲಂಡನ್: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯವು ಇದೀಗ ರೋಚಕ ಘಟ್ಟ ತಲುಪಿದೆ. ಮೊದಲ ಟೆಸ್ಟ್‌ ಪಂದ್ಯದ ಕೊನೆಯ ದಿನದಾಟದಲ್ಲಿ ಯಾವ ಫಲಿತಾಂಶ ಬೇಕಿದ್ದರೂ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಲೀಡ್ಸ್‌ನಲ್ಲಿ ಮೊದಲ ಟೆಸ್ಟ್ ಗೆಲ್ಲಲು ಆತಿಥೇಯ ಇಂಗ್ಲೆಂಡ್ ತಂಡವು 350 ರನ್ ಗಳಿಸಬೇಕಿದೆ. ಇನ್ನು ಭಾರತಕ್ಕೆ ಮೊದಲ ಟೆಸ್ಟ್‌ ಗೆಲ್ಲಲು 10 ವಿಕೆಟ್‌ ಕಬಳಿಸಬೇಕಿದೆ. ಹೀಗಿರುವಾಗಲೇ ಭಾರತ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ಇಂದಿನ ದಿನದಾಟ ಆರಂಭಕ್ಕೂ ಮುನ್ನ ತೋಳಿಗೆ ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದರು. ಇದರ ಜತೆಗೆ ಒಂದು ನಿಮಿಷ ಮೌನಾಚರಣೆ ಮಾಡಿದರು.

ಕೊನೆಯ ದಿನದಾಟದಲ್ಲಿ ಮಳೆ ಕೂಡಾ ಅಡ್ಡಿಯಾಗುವ ಸಾಧ್ಯತೆಯಿದೆ. ನಾಲ್ಕನೇ ದಿನದಾಟದಂತ್ಯಕ್ಕೆ 371 ರನ್ ಗುರಿ ಪಡೆದಿರುವ ಇಂಗ್ಲೆಂಡ್ ತಂಡವು ವಿಕೆಟ್ ನಷ್ಟವಿಲ್ಲದೇ 21 ರನ್ ಗಳಿಸಿತ್ತು. ಇದೀಗ ಐದನೇ ದಿನದಾಟಕ್ಕೂ ಮೊದಲು ಉಭಯ ತಂಡಗಳ ಆಟಗಾರರು ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿಲೀಪ್‌ ದೋಶಿ(77) ಲಂಡನ್‌ನಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾದರು. ಇವರಿಗೆ ಸಂತಾಪ ಸೂಚಿಸುವ ಸಲುವಾಗಿ ಉಭಯ ತಂಡಗಳ ಆಟಗಾರರು ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿದಿದ್ದಾರೆ.

ಈ ವಿಚಾರವನ್ನು ಖಚಿತಪಡಿಸಿರುವ ಬಿಸಿಸಿಐ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಸಂತಾಪ ಸೂಚಿಸಿದೆ. 'ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ಲಂಡನ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

Scroll to load tweet…

ಅಷ್ಟಕ್ಕೂ ಯಾರು ಈ ದಿಲೀಪ್ ದೋಶಿ?

ಎಡಗೈ ಸ್ಪಿನ್ನರ್‌ ಆಗಿದ್ದ ದೋಶಿ ಭಾರತ ಪರ 33 ಟೆಸ್ಟ್‌, 15 ಏಕದಿನ ಪಂದ್ಯಗಳನ್ನು ಆಡಿದ್ದರು. ಟೆಸ್ಟ್‌ನಲ್ಲಿ 114, ಏಕದಿನದಲ್ಲಿ 22 ವಿಕೆಟ್‌ ಕಿತ್ತಿದ್ದರು. ಭಾರತ ಪರ ಅಷ್ಟೇ ಅಲ್ಲದೇ ಬೆಂಗಾಲ್‌, ಸೌರಾಷ್ಟ್ರ, ಇಂಗ್ಲೆಂಡ್‌ ಕೌಂಟಿಯಲ್ಲಿ 3 ತಂಡಗಳ ಪರ 238 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ಅವರು, ಒಟ್ಟು 898 ವಿಕೆಟ್‌ ಕಬಳಿಸಿದ್ದರು.

ಕುತೂಹಲಘಟ್ಟದಲ್ಲಿ ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್:

ವಿಕೆಟ್ ನಷ್ಟವಿಲ್ಲದೇ 21 ರನ್‌ಗಳೊಂದಿಗೆ ಕೊನೆಯ ದಿನದಾಟ ಆರಂಭಿಸಿರುವ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿದೆ. ಮೊದಲ 18 ಓವರ್ ಅಂತ್ಯದ ವೇಳೆಗೆ ಆತಿಥೇಯ ಇಂಗ್ಲೆಂಡ್ ತಂಡವು 63 ರನ್ ಬಾರಿಸಿದ್ದು, ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಇನ್ನೂ 308 ರನ್‌ಗಳ ಅಗತ್ಯವಿದೆ. ಆರಂಭಿಕ ಬ್ಯಾಟರ್ ಬೆನ್ ಡಕೆಟ್ 34 ಹಾಗೂ ಜಾಕ್ ಕ್ರಾಲಿ 23 ರನ್ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಇನ್ನು ಇದಕ್ಕೂ ಮೊದಲು ನಾಲ್ಕನೇ ದಿನದಾಟದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬಾರಿಸಿದ ಅಕರ್ಷಕ ಶತಕಗಳ ನೆರವಿನಿಂದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 364 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಭಾರತ ಪಂದ್ಯವೊಂದರಲ್ಲಿ 5 ಶತಕ!

ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 5 ಶತಕಕ್ಕೆ ಸಾಕ್ಷಿಯಾಗಿದೆ. ಇದು ಜಂಟಿ ವಿಶ್ವ ದಾಖಲೆ ಕೂಡ ಹೌದು. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮೂವರು, 2ನೇ ಇನ್ನಿಂಗ್ಸ್‌ನಲ್ಲಿ ಇಬ್ಬರು ಶತಕ ಸಿಡಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 101, ಶುಭ್‌ಮನ್ ಗಿಲ್ 147, ರಿಷಭ್ ಪಂತ್ 134 ರನ್ ಗಳಿಸಿದರು. 2ನೇ ಇನ್ನಿಂಗ್ನಲ್ಲಿ ರಾಹುಲ್ 137, ಪಂತ್ 118 ರನ್ ದಾಖಲಿಸಿದರು. ಭಾರತ ಇದಕ್ಕೂ ಮುನ್ನ 4 ಬಾರಿ ಟೆಸ್ಟ್‌ ಪಂದ್ಯದಲ್ಲಿ 4 ಶತಕಗಳನ್ನು ದಾಖಲಿಸಿತ್ತು. 2007ರಲ್ಲಿ ಬಾಂಗ್ಲಾ ವಿರುದ್ಧ ಮೀರ್‌ಪುರ್‌ನಲ್ಲಿ 2009ರಲ್ಲಿ ಶ್ರೀಲಂಕಾ ವಿರುದ್ಧ ಅಹಮದಾಬಾದ್‌ನಲ್ಲಿ, 2010ರಲ್ಲಿ ದ.ಆಫ್ರಿಕಾ ವಿರುದ್ಧ ಕೋಲ್ಕತಾದಲ್ಲಿ ಹಾಗೂ 2017ರಲ್ಲಿ ಶ್ರೀಲಂಕಾ ವಿರುದ್ಧ ನಾಗ್ಪುರದಲ್ಲಿ ಭಾರತ 4 ಶತಕಗಳನ್ನು ದಾಖಲಿಸಿತ್ತು.

ಭಾರತಕ್ಕೂ ಮೊದಲು ವೆಸ್ಟ್‌ ಇಂಡೀಸ್ ವಿರುದ್ಧ 1955ರಲ್ಲಿ ಆಸ್ಟ್ರೇಲಿಯಾ, 2001ರಲ್ಲಿ ಬಾಂಗ್ಲಾ ವಿರುದ್ಧ ಪಾಕಿಸ್ತಾನ, 2007ರಲ್ಲಿ ವಿಂಡೀಸ್ ವಿರುದ್ಧ ಇಂಗ್ಲೆಂಡ್, 2013ರಲ್ಲಿ ಬಾಂಗ್ಲಾ ವಿರುದ್ಧ ಲಂಕಾ, 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಪಂದ್ಯವೊಂದರಲ್ಲಿ 5 ಶತಕ ದಾಖಲಿಸಿದ್ದವು. ಆಸ್ಟ್ರೇಲಿಯಾ, ಭಾರತ ಮಾತ್ರ ತವರಿನಾಚೆ ಈ ಸಾಧನೆ ಮಾಡಿದ ದೇಶಗಳು ಎನಿಸಿವೆ.