ದೆಹಲಿಯಲ್ಲಿ ನಡೆದ 'ಕೊಹ್-ಎ-ಜಫರ್' ಕಾರ್ಯಕ್ರಮದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಕ್ರಿಕೆಟಿಗರ ನಡುವಿನ ಒಂದು ಸನ್ನಿವೇಶ ಎದುರಾಗಿದೆ. ಇಶಾನ್ ಕಿಶನ್ ಮಾತನಾಡಿ "ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್ ಎಂದು ಮಾತು ಆರಂಭಿಸಿದರು. ಇದಕ್ಕೆ ಅಪ್ಘಾನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
ಭಾರತ ಮತ್ತು ಅಫ್ಘಾನಿಸ್ತಾನ ದೇಶಗಳ ನಡುವಿನ ಬಾಂಧವ್ಯ ಕೇವಲ ಮೈದಾನದ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿರದೆ, ಆಟಗಾರರ ನಡುವಿನ ವೈಯಕ್ತಿಕ ಸ್ನೇಹ ದಿನದಿಂದ ದಿನಕ್ಕೆ ಇನ್ನಷ್ಟು ಆಳವಾಗುತ್ತಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಈ ಸುಂದರ ಬಾಂಧವ್ಯ ಹಾಗೂ ಪರಸ್ಪರ ಗೌರವದ ಅಪರೂಪದ ಕ್ಷಣಗಳು ಎದ್ದುಬಾಣ್ದವು.
ದೆಹಲಿಯಲ್ಲಿ ‘ಕೊಹ್-ಎ-ಜಫರ್’ ವಿಶೇಷ ಕಾರ್ಯಕ್ರಮ!
ಪ್ರಸ್ತುತ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ದೆಹಲಿಯಲ್ಲಿ ಟಿ20 ಕ್ರಿಕೆಟ್ ಸರಣಿ ನಡೆಯುತ್ತಿದ್ದು, ಪಂದ್ಯಗಳು ಭಾರತದ ನೆಲದಲ್ಲಿ ನಡೆಯುತ್ತಿದ್ದರೂ ಈ ಸರಣಿಯ ಅಧಿಕೃತ ಆತಿಥ್ಯವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೇ ವಹಿಸಿಕೊಂಡಿದೆ. ಸರಣಿಯ ಭಾಗವಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ನವದೆಹಲಿಯಲ್ಲಿ 'ಕೊಹ್-ಎ-ಜಫರ್' ಎಂಬ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇದಿಕೆಯು ಎರಡೂ ದೇಶಗಳ ಕ್ರಿಕೆಟಿಗರ ನಡುವಿನ ಆತ್ಮೀಯತೆ ಮತ್ತು ಕ್ರೀಡಾ ಸೌಹಾರ್ದತೆಯನ್ನು ಜಗತ್ತಿಗೆ ತೋರಿಸುವ ವೇದಿಕೆಯಾಗಿ ಮಾರ್ಪಟ್ಟಿತು.
ವೇದಿಕೆಯಲ್ಲಿ ರಾರಾಜಿಸಿದ ಇಶಾನ್ ಕಿಶನ್ ಶೈಲಿ!
ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಭಾರತೀಯ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ನಾಯಕ ಶ್ರೇಯಸ್ ಅಯ್ಯರ್ ಮತ್ತು ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಭಾಗವಹಿಸಿದ್ದರು. ಅಫ್ಘಾನಿಸ್ತಾನದ ಪರವಾಗಿ ತಂಡದ ನಾಯಕ ಇಬ್ರಾಹಿಂ ಜದ್ರಾನ್, ಅನುಭವಿ ಆಟಗಾರ ಮೊಹಮ್ಮದ್ ನಬಿ ಮತ್ತು ಗುಲ್ಬಾದಿನ್ ನೈಬ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂವಾದದ ವೇಳೆ ಪ್ರೇಕ್ಷಕರಿಂದ ಇಶಾನ್ ಕಿಶನ್ ಅವರಿಗೆ ಒಂದು ಕುತೂಹಲಕಾರಿ ಪ್ರಶ್ನೆ ಎದುರಾಯಿತು: "ಅಫ್ಘಾನಿಸ್ತಾನ ಆಟಗಾರರ ಉತ್ಸಾಹ ಮತ್ತು ಶ್ರಮದಲ್ಲಿ ನಿಮ್ಮನ್ನು ಹೆಚ್ಚು ಪ್ರಭಾವಿಸಿದ ಸಂಗತಿ ಯಾವುದು?" ಈ ಪ್ರಶ್ನೆಗೆ ಉತ್ತರಿಸಲು ಮೈಕ್ ಹಿಡಿದ ಇಶಾನ್ ಕಿಶನ್, ಅಫ್ಘಾನ್ ಸಂಸ್ಕೃತಿಯ ಗೌರವಾರ್ಥವಾಗಿ ತಮ್ಮ ಮಾತನ್ನು "ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್...!!" ಎಂದು ಅಲ್ಲಾಹನ ಹೆಸರಿನಲ್ಲಿಯೇ ಪ್ರಾರಂಭಿಸಿದರು.
ಮುಖತುಂಬಾ ನಕ್ಕ ಅಪ್ಘನ್ ಆಟಗಾರರು!
ಇಶಾನ್ ಕಿಶನ್ ಅವರ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಗೌರವದ ಮಾತುಗಳನ್ನು ಕೇಳಿದ ತಕ್ಷಣವೇ ವೇದಿಕೆಯಲ್ಲಿದ್ದ ಅಫ್ಘಾನ್ ಆಟಗಾರರು ಆಶ್ಚರ್ಯಚಕಿತರಾಗಿ ಮುಖತುಂಬಾ ನಕ್ಕರು. ಭಾರತೀಯ ನಾಯಕ ಶ್ರೇಯಸ್ ಅಯ್ಯರ್ ಮತ್ತು ಅಭಿಷೇಕ್ ಶರ್ಮಾ ಕೂಡ ಈ ಸನ್ನಿವೇಶವನ್ನು ಆನಂದಿಸಿ ಮಂದಹಾಸ ಬೀರಿದರು. ಮೈದಾನದ ಹೊರಗೆ ಆಟಗಾರರು ಪರಸ್ಪರರ ಸಂಸ್ಕೃತಿಯನ್ನು ಎಷ್ಟು ಗೌರವಿಸುತ್ತಾರೆ ಎಂಬುದಕ್ಕೆ ಈ ಕ್ಷಣ ಸಾಕ್ಷಿಯಾಯಿತು.
ಅಫ್ಘಾನ್ ಆಟಗಾರರ ಗೆಲುವಿನ ಹಸಿವನ್ನು ಹೊಗಳಿದ ಇಶಾನ್!
ತಮ್ಮ ಮಾತನ್ನು ಮುಂದುವರಿಸಿದ ಇಶಾನ್ ಕಿಶನ್, ಅಫ್ಘಾನಿಸ್ತಾನ ಕ್ರಿಕೆಟಿಗರ ವೃತ್ತಿಪರತೆ ಮತ್ತು ಶ್ರಮವನ್ನು ಮನಸಾರೆ ಹೊಗಳಿದರು. "ಅಫ್ಘಾನಿಸ್ತಾನ ತಂಡದ ವಿರುದ್ಧ ಆಡುವುದು ನಮಗೆ ಸದಾ ಖುಷಿ ಕೊಡುವ ವಿಷಯ. ನಮ್ಮಲ್ಲಿಯ ಅನೇಕ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸರಣಿಗಳಲ್ಲಿ ಅವರೊಂದಿಗೆ ಒಂದೇ ತಂಡದಲ್ಲಿ ಸುದೀರ್ಘವಾಗಿ ಆಡಿದ್ದಾರೆ. ಹೀಗಾಗಿ ಅವರು ಮೈದಾನದ ಹೊರಗೆ ಎಷ್ಟು ಅದ್ಭುತ ಮತ್ತು ಸಜ್ಜನ ವ್ಯಕ್ತಿಗಳು ಎಂಬುದು ನಮಗೆ ನಿಕಟವಾಗಿ ತಿಳಿದಿದೆ" ಎಂದರು.
ಮೊಹಮ್ಮದ್ ನಬಿ ಮಾರ್ಗದರ್ಶನದ ನೆನಪು!
ಅಫ್ಘಾನ್‌ನ ಅನುಭವಿ ಆಟಗಾರ ಮೊಹಮ್ಮದ್ ನಬಿ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡ ಇಶಾನ್, "ನಾನು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ ನಬಿ ಭಾಯ್ ಅವರೊಂದಿಗೆ ಕಳೆಯುವ ಅವಕಾಶ ಸಿಕ್ಕಿತ್ತು. ಬ್ಯಾಟಿಂಗ್ ಅಭ್ಯಾಸದ ಸಮಯದಲ್ಲಿ ಅವರು ನನಗೆ ಸಾಕಷ್ಟು ತಾಂತ್ರಿಕ ಸಹಾಯ ಮಾಡಿಕೊಟ್ಟಿದ್ದಾರೆ. ಮುಖ್ಯವಾಗಿ ವಿಭಿನ್ನ ಶೈಲಿಯ ಬೌಲರ್‌ಗಳನ್ನು ಎದುರಿಸುವಾಗ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಹೇಗೆ ತಂತ್ರ ರೂಪಿಸಬೇಕು ಎಂಬುದನ್ನು ನನಗೆ ಹೇಳಿಕೊಡುತ್ತಿದ್ದರು" ಎಂದು ಕೃತಜ್ಞತೆ ಸಲ್ಲಿಸಿದರು.
ದೃಢನಿಶ್ಚಯ ಮತ್ತು ಗೆಲುವಿನ ಹಸಿವು!
ಅಫ್ಘಾನಿಸ್ತಾನ ತಂಡದ ಕ್ರಿಕೆಟ್ ಆಟದ ಬಗ್ಗೆ ಮಾತನಾಡುತ್ತಾ, "ಅಫ್ಘಾನ್ ಕ್ರಿಕೆಟಿಗರಲ್ಲಿ ನಮಗೆ ಅತ್ಯಂತ ಪ್ರಭಾವಶಾಲಿಯಾಗಿ ಕಾಣುವುದು ಅವರ ದೃಢನಿಶ್ಚಯ ಮತ್ತು ಗೆಲ್ಲಲೇಬೇಕೆಂಬ ಹಸಿವು. ನಾವು ಅವರ ವಿರುದ್ಧ ಮೈದಾನಕ್ಕಿಳಿದಾಗಲೆಲ್ಲಾ ಅವರು ಕೊನೆಯ ಕ್ಷಣದವರೆಗೂ ಬಿಟ್ಟುಕೊಡದೆ ಹೋರಾಡುತ್ತಾರೆ. ಬ್ಯಾಟಿಂಗ್ ಇರಲಿ ಅಥವಾ ಬೌಲಿಂಗ್ ಇರಲಿ, ಪ್ರತಿಯೊಂದು ಹಂತದಲ್ಲೂ ವಿಕೆಟ್ ಪಡೆಯಲು ಮತ್ತು ರನ್ ಗಳಿಸಲು ಸಂಪೂರ್ಣ ಶ್ರಮ ಹಾಕುತ್ತಾರೆ" ಎಂದು ಅವರ ಆಟದ ವೈಖರಿಯನ್ನು ಮುಕ್ತವಾಗಿ ಶ್ಲಾಘಿಸಿದರು. ಈ ಕಾರ್ಯಕ್ರಮವು ಭಾರತ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಬಾಂಧವ್ಯಕ್ಕೆ ಹೊಸ ಮೆರುಗು ನೀಡಿದ್ದು, ಕ್ರೀಡೆಯು ಗಡಿಗಳನ್ನು ಮೀರಿ ಹೇಗೆ ಜನರನ್ನೂ ಹಾಗೂ ಸಂಸ್ಕೃತಿಗಳನ್ನು ಒಂದಾಗಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಯಿತು.


