ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದ್ದ ರಿಷಭ್ ಪಂತ್ ಅವರನ್ನು ಇರಾನಿ ಕಪ್‌ಗಾಗಿ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಸರ್ಫರಾಜ್ ಖಾನ್ ಉಪನಾಯಕರಾಗಿದ್ದು, ಅಕ್ಟೋಬರ್ 1 ರಿಂದ 5 ರವರೆಗೆ ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಪಂದ್ಯ ನಡೆಯಲಿದೆ. ರಣಜಿಯಲ್ಲಿ ಮಿಂಚಿದ ಯುವ ಆಟಗಾರರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ.
ಶ್ರೀನಗರ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಪ್ರಕಟಿಸಿದ 15 ಸದಸ್ಯರ ಟೀಮ್ ಇಂಡಿಯಾದಿಂದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಕೈಬಿಡಲಾಗಿತ್ತು. ಆದರೆ, ಇದೀಗ ಆಯ್ಕೆ ಸಮಿತಿಯು ಇರಾನಿ ಕಪ್‌ಗಾಗಿ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕರನ್ನಾಗಿ ಪಂತ್ ಅವರನ್ನು ನೇಮಿಸಿದೆ. ಸರ್ಫರಾಜ್ ಖಾನ್‌ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಅಕ್ಟೋಬರ್ 1 ರಿಂದ 5 ರವರೆಗೆ ಶ್ರೀನಗರದ ಶೇರ್-ಎ-ಕಾಶ್ಮೀರ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. 2025-26ರ ಸೀಸನ್‌ನಲ್ಲಿ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡವು ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಸೆಣಸಾಡಲಿದೆ.
ಕಳೆದ ರಣಜಿ ಸೀಸನ್‌ನಲ್ಲಿ ಮಿಂಚಿದ್ದ ಯುವ ಪ್ರತಿಭೆಗಳಿಗೆ ರೆಸ್ಟ್ ಆಫ್ ಇಂಡಿಯಾ ಸ್ಕ್ವಾಡ್‌ನಲ್ಲಿ ಅವಕಾಶ ಸಿಕ್ಕಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರ್. ಸ್ಮರಣ್ (950 ರನ್) ಮತ್ತು ಆಯುಷ್ ದೋಸೇಜಾ (949 ರನ್) ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸನತ್ ಸಾಂಗ್ವಾನ್ ಹಾಗೂ ಸುದೀಪ್ ಕುಮಾರ್ ಘರಾಮಿ ಕೂಡ ಪ್ರಮುಖ ಬ್ಯಾಟರ್‌ಗಳಾಗಿ ಆಯ್ಕೆಯಾಗಿದ್ದಾರೆ.
ಸರ್ಫರಾಜ್ ಖಾನ್ ಖಾನ್‌ಗೆ ಜಾಕ್‌ಪಾಟ್:
ಇತ್ತೀಚೆಗೆ ಲಂಕಾ ಎದುರಿನ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದು ಆ ಬಳಿಕ ಬೆಂಚ್ ಕಾಯಿಸಿದ್ದ ಮುಂಬೈ ಮೂಲದ ಕ್ರಿಕೆಟಿಗರ ಸರ್ಫರಾಜ್ ಖಾನ್‌ಗೆ ಜಾಕ್‌ಪಾಟ್ ಹೊಡೆದಿದೆ. ಇದೀಗ ಸರ್ಫರಾಜ್ ಖಾನ್ ರೆಸ್ಟ್ ಆಫ್ ಇಂಡಿಯಾ ತಂಡದ ಉಪನಾಯಕನಾಗಿ ಸೆಲೆಕ್ಟ್ ಆಗಿದ್ದಾರೆ. ರೆಸ್ಟ್ ಆಫ್ ಇಂಡಿಯಾ ಪರ ಮಿಂಚಿ ಟೀಂ ಇಂಡಿಯಾಗೆ ಮತ್ತೆ ಕಮ್‌ಬ್ಯಾಕ್ ಮಾಡಲು ಸರ್ಫರಾಜ್ ಖಾನ್ ಎದುರು ನೋಡುತ್ತಿದ್ದಾರೆ.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೇಗಿ ಆಕಾಶ್ ದೀಪ್ ಅವರನ್ನು ಫಿಟ್‌ನೆಸ್ ಆಧಾರದ ಮೇಲೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬೆನ್ನುನೋವಿನ ಕಾರಣದಿಂದ ಫೆಬ್ರವರಿಯಿಂದಲೇ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಆಕಾಶ್ ದೀಪ್, ಐಪಿಎಲ್ ಸೀಸನ್ ಕೂಡ ಮಿಸ್ ಮಾಡಿಕೊಂಡಿದ್ದರು. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಮಾನವ್ ಸುತಾರ್, ಸಾರಾಂಶ ಜೈನ್ ಮತ್ತು ಅನುಕೂಲ್ ರಾಯ್ ಸ್ಪಿನ್ನರ್‌ಗಳಾಗಿ ರೆಸ್ಟ್ ಆಫ್ ಇಂಡಿಯಾ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇರಾನಿ ಕಪ್‌ಗೆ ರೆಸ್ಟ್ ಆಫ್ ಇಂಡಿಯಾ ಸ್ಕ್ವಾಡ್:
ರಿಷಭ್ ಪಂತ್ (ನಾಯಕ-ವಿಕೆಟ್ ಕೀಪರ್), ಸರ್ಫರಾಜ್ ಖಾನ್ (ಉಪನಾಯಕ), ಸನತ್ ಸಾಂಗ್ವಾನ್, ಶಿಖರ್ ಮೋಹನ್, ಸುದೀಪ್ ಘರಾಮಿ, ಸ್ಮರಣ್ ರವಿಚಂದ್ರನ್, ಮಾನವ್ ಸುತಾರ್, ಸಾರಾಂಶ ಜೈನ್, ಆಕಾಶ್ ದೀಪ್ (ಫಿಟ್‌ನೆಸ್ ಆಧಾರದ ಮೇಲೆ), ಮುಖೇಶ್ ಕುಮಾರ್, ಮುಖೇಶ್ ಚೌಧರಿ, ಆರ್ಯನ್ ಜುಯಲ್ (ವಿಕೆಟ್ ಕೀಪರ್), ಆರ್ಯನ್ ಪಾಂಡೆ, ಅನುಕೂಲ್ ರಾಯ್, ಆಯುಷ್ ದೋಸೇಜಾ.


