ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇಂದು ನಡೆಯಲಿರುವ ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವತ್ತ ಭಾರತ ಚಿತ್ತ ನೆಟ್ಟಿದ್ದು, ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಹರಾರೆ: ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇನ್ನೊಂದೆಡೆ ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ತಂಡವು ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ನರಿಗೆ ಶಾಕ್ ಕೊಡಲು ಎದುರು ನೋಡುತ್ತಿದೆ. ಇಂದು ಅಂದರೆ ಜುಲೈ 25ರಂದು ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯವು ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಭಾರತೀಯ ಕಾಲಮಾನ ಸಂಜೆ 4.30ರಿಂದ ಆರಂಭವಾಗಲಿದೆ

ಇನ್ನು ಎರಡನೇ ಟಿ20 ಪಂದ್ಯದಲ್ಲೂ ಕ್ರಿಕೆಟ್ ಅಭಿಮಾನಿಗಳ ಕಣ್ಣು 15 ವರ್ಷದ ವೈಭವ್ ಸೂರ್ಯವಂಶಿ ಮೇಲಿದೆ. ಯಾಕೆಂದರೆ ಬಿಹಾರ ಮೂಲದ ಯುವ ಕ್ರಿಕೆಟಿಗ ಜಿಂಬಾಬ್ವೆ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದರು. ಹೀಗಾಗಿ ಎರಡನೇ ಟಿ20 ಪಂದ್ಯದಲ್ಲೂ ವೈಭವ್ ಅಬ್ಬರಿಸುವ ನಿರೀಕ್ಷೆಯಿದೆ. ಬನ್ನಿ ನಾವಿಂದು ಎರಡನೇ ಟಿ20 ಪಂದ್ಯವನ್ನು ಎಲ್ಲಿ ಹಾಗೂ ಹೇಗೆ ಫ್ರೀ ಆಗಿ ಟಿವಿಯಲ್ಲಿ ವೀಕ್ಷಣೆ ಮಾಡಬಹುದು ಎನ್ನುವುದನ್ನು ನೋಡೋಣ.

ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯವು ಸ್ಟಾರ್ ಸ್ಪೋರ್ಟ್ಸ್‌ ಅಥವಾ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುತ್ತಿಲ್ಲ. ಇದಕ್ಕೆ ಬದಲಾಗಿ ಹೊಸ ಚಾನೆಲ್ ಆಗಿರುವ ಯುನೈಟ್8 ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಅಂದಹಾಗೆ ಜಿಯೋ ಫೈಬರ್‌ ಸಂಪರ್ಕ ಹೊಂದಿರುವವರು ಉಚಿತವಾಗಿ ಯುನೈಟ್8 ಚಾನೆಲ್‌ನಲ್ಲಿ ಭಾರತ-ಜಿಂಬಾಬ್ವೆ ಟಿ20 ಮ್ಯಾಚ್ ವೀಕ್ಷಿಸಬಹುದು.

ಇನ್ನು ಓಟಿಟಿ ಲೈವ್ ಸ್ಟ್ರೀಮಿಂಗ್ ಎಲ್ಲಿ ಪ್ರಸಾರವಾಗಲಿದೆ?

ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯವು ಸೋನಿ ಲಿವ್ ಅಥವಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗುವುದಿಲ್ಲ. ಇದಕ್ಕೆ ಬದಲಾಗಿ ಓಟಿಟಿ ಫ್ಲಾಟ್‌ಫಾರಂ ಆದ ಫ್ಯಾನ್‌ಕೋಡ್‌ನಲ್ಲಿ 35 ರುಪಾಯಿ ರೀಚಾರ್ಜ್‌ ಮಾಡಿಕೊಂಡು ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಫ್ಯಾನ್‌ಕೋಡ್‌ ಮೂಲಕ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿಯೂ ಪಂದ್ಯ ವೀಕ್ಷಿಸಬಹುದಾಗಿದೆ.

ಉಚಿತವಾಗಿ ಭಾರತ-ಜಿಂಬಾಬ್ವೆ ಎರಡನೇ ಟಿ20 ಮ್ಯಾಚ್ ವೀಕ್ಷಿಸೋದು ಹೇಗೆ?

ಒಂದು ವೇಳೆ ನೀವು ಒಂದೇ ಒಂದು ರುಪಾಯಿ ಖರ್ಚಿಲ್ಲದೇ ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಮ್ಯಾಚ್ ವೀಕ್ಷಿಸಬೇಕೆಂದಿದ್ದರೇ, ಡಿಟಿಎಚ್‌ ಹೊಂದಿರುವವರು ಡಿಡಿ ಸ್ಪೋರ್ಟ್ಸ್‌ನಲ್ಲಿ ಉಚಿತವಾಗಿ ಈ ಟಿ20 ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಡಿಡಿ ಫ್ರಿ ಡಿಶ್ ಹೊಂದಿರುವವರು ಯಾವುದೇ ಸಬ್‌ಸ್ಕ್ರಿಪ್ಷನ್ ಇಲ್ಲದೆಯೇ ಉಚಿತವಾಗಿ ಮನೆಯಲ್ಲಿಯೇ ಕುಳಿತು ಮ್ಯಾಚ್ ವೀಕ್ಷಿಸಬಹುದಾಗಿದೆ.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:

ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ, ಮಯಾಂಕ್ ಯಾದವ್.

ಜಿಂಬಾಬ್ವೆ: ಬ್ರಿಯಾನ್ ಬೆನ್ನೆಟ್, ಬೆನ್ ಕರ್ರನ್, ಡಿಯೊನ್ ಮೇಯರ್ಸ್‌, ಸಿಕಂದರ್ ರಾಜಾ, ರಿಯಾನ್ ಬುರ್ಲ್‌,ವೆಸ್ಲೆ ಮಧುವೆರೆ, ತಡಿವನ್ಸೆ ಮರುಮನಿ, ಬ್ರಾಡ್ ಇವಾನ್ಸ್, ನ್ಯೂಮನ್ ನ್ಯುಮುಹರಿ, ರಿಚರ್ಡ್‌ ಗರಾವಾ, ಬ್ಲೆಸ್ಸಿಂಗ್ ಮುಜರಾಬಾನಿ.

ಪಂದ್ಯ ಆರಂಭ: ಸಂಜೆ 4.30ಕ್ಕೆ

ನೇರ ಪ್ರಸಾರ: ಯುನೈಟ್‌ 8 ಸ್ಪೋರ್ಟ್ಸ್‌/ಫ್ಯಾನ್‌ ಕೋಡ್‌