ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವು ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಜಯದ ಲಯ ಮುಂದುವರಿಸುವ ಗುರಿ ಹೊಂದಿದೆ. ಮೊದಲ ಪಂದ್ಯದ ಹೀರೋಗಳಾದ ವೈಭವ್ ಸೂರ್ಯವಂಶಿ ಮತ್ತು ಮಯಾಂಕ್ ಅಗರ್‌ವಾಲ್ ಮೇಲೆ ನಿರೀಕ್ಷೆ ಹೆಚ್ಚಿದ್ದು, ಪಂದ್ಯದ ಸಮಯ ಹಾಗೂ ನೇರ ಪ್ರಸಾರದ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಹರಾರೆ: ತಮ್ಮ ನಾಯಕತ್ವದಲ್ಲಿ ಮೊದಲ ಜಯ ಸಾಧಿಸಿ ನಿಟ್ಟುಸಿರುವ ಬಿಟ್ಟಿರುವ ಶ್ರೇಯಸ್ ಅಯ್ಯರ್, ಜಯದ ಲಯವನ್ನು ಮುಂದುವರಿಸುವ ಗುರಿಯೊಂದಿಗೆ ಶನಿವಾರ ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಐರ್ಲೆಂಡ್ ವಿರುದ್ಧ 0-2, ಇಂಗ್ಲೆಂಡ್ ವಿರುದ್ಧ 0-4 ಅಂತರದಲ್ಲಿ ಸರಣಿ ಸೋಲು ಕಂಡಿದ್ದ ಹಾಲಿ ವಿಶ್ವ ಚಾಂಪಿಯನ್ ತಂಡ, ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಗೆದ್ದು ಸಮಾಧಾನಪಟ್ಟುಕೊಂಡಿತ್ತು.
ಮೊದಲ ಪಂದ್ಯದಲ್ಲಿ 19 ಎಸೆತದಲ್ಲಿ 50 ರನ್ ಸಿಡಿಸಿದ್ದ ವೈಭವ್ ಸೂರ್ಯವಂಶಿ ಹಾಗೂ ಆಕರ್ಷಕ ಬೌಲಿಂಗ್ ಸ್ಪೆಲ್ ಮೂಲಕ 18 ರನ್‌ಗೆ 2 ವಿಕೆಟ್ ಕಿತ್ತಿದ್ದ ವೇಗಿ ಮಯಾಂಕ್ ಅಗರ್‌ವಾಲ್ ಮತ್ತೊಮ್ಮೆ ಮಿಂಚಲು ಎದುರು ನೋಡುತ್ತಿದ್ದಾರೆ. 2 ಹಾಗೂ 3ನೇ ಪಂದ್ಯಗಳ ನಡುವೆ ದಿನಗಳ ಅಂತರವಿಲ್ಲ. 3ನೇ ಪಂದ್ಯ ಭಾನುವಾರ ನಡೆಯಲಿದೆ.
ಬದಲಾದ ಸಮಯದಲ್ಲಿ ಭಾರತ-ಜಿಂಬಾಬ್ವೆ ಮ್ಯಾಚ್:
ಸಾಮಾನ್ಯವಾಗಿ ಟೀಂ ಇಂಡಿಯಾದ ಟಿ20 ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಅಥವಾ 7.30ಕ್ಕೆ ಆರಂಭವಾಗುತ್ತವೆ. ಎಲ್ಲ ಕ್ರಿಕೆಟ್ ಪ್ರೇಮಿಗಳು ಟಿ20 ಮ್ಯಾಚ್ ಕಣ್ತುಂಬಿಕೊಳ್ಳಲು ಸಂಜೆ ಮೇಲೆ ಬಿಡುವು ಮಾಡಿಕೊಳ್ಳುತ್ತಾರೆ. ಆದರೆ ಇದೀಗ ಮೊದಲ ಪಂದ್ಯದಂತೆ ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯವು ಭಾರತೀಯ ಕಾಲಮಾನ ಸಂಜೆ 4.30ರಿಂದ ಆರಂಭವಾಗಲಿದೆ. ಇದಕ್ಕೂ ಅರ್ಧಗಂಟೆ ಮೊದಲು ಅಂದರೆ ಭಾರತೀಯ ಕಾಲಮಾನ ಸಂಜೆ 4 ಗಂಟೆಗೆ ಉಭಯ ತಂಡಗಳ ನಡುವೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಹೊಸ ಚಾನೆಲ್‌ನಲ್ಲಿ ನೇರಪ್ರಸಾರ:
ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ20 ಸರಣಿಯ ಮಾಧ್ಯಮ ಪ್ರಸಾರದ ಹಕ್ಕನ್ನು ಯುನೈಟ್8 ಚಾನೆಲ್ ಪಡೆದುಕೊಂಡಿದೆ. ಹೀಗಾಗಿ ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್ ಅಥವಾ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುವುದಿಲ್ಲ. ಈ ಬಾರಿ ಜಿಯೋ ಫೈಬರ್ ಸಂಪರ್ಕ ಹೊಂದಿರುವವರು ಯುನೈಟ್8 (Unite8) ಚಾನೆಲ್‌ನಲ್ಲಿ ಈ ಮ್ಯಾಚ್ ವೀಕ್ಷಿಸಬಹುದು. ಇದರ ಜತೆಗೆ ಡಿಡಿ ಸ್ಪೋರ್ಟ್ಸ್ ಹಾಗೂ ಓಟಿಟಿಯಲ್ಲಿ ಫ್ಯಾನ್‌ಕೋಡ್‌ನಲ್ಲೂ ಟಿ20 ಮ್ಯಾಚ್‌ಗಳನ್ನು ವೀಕ್ಷಿಸಬಹುದಾಗಿದೆ.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:
ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ, ಮಯಾಂಕ್ ಯಾದವ್.
ಜಿಂಬಾಬ್ವೆ: ಬ್ರಿಯಾನ್ ಬೆನ್ನೆಟ್, ಬೆನ್ ಕರ್ರನ್, ಡಿಯೊನ್ ಮೇಯರ್ಸ್, ಸಿಕಂದರ್ ರಾಜಾ, ರಿಯಾನ್ ಬುರ್ಲ್,ವೆಸ್ಲೆ ಮಧುವೆರೆ, ತಡಿವನ್ಸೆ ಮರುಮನಿ, ಬ್ರಾಡ್ ಇವಾನ್ಸ್, ನ್ಯೂಮನ್ ನ್ಯುಮುಹರಿ, ರಿಚರ್ಡ್ ಗರಾವಾ, ಬ್ಲೆಸ್ಸಿಂಗ್ ಮುಜರಾಬಾನಿ.
ಪಂದ್ಯ ಆರಂಭ: ಸಂಜೆ 4.30ಕ್ಕೆ
ನೇರ ಪ್ರಸಾರ: ಯುನೈಟ್ 8 ಸ್ಪೋರ್ಟ್ಸ್/ಫ್ಯಾನ್ ಕೋಡ್


