ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವು ಹೀನಾಯ ಸೋಲು ಕಂಡಿದೆ. ಸತತ ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದರೂ, ಈ ಕಳಪೆ ಪ್ರದರ್ಶನವು ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಸ್ಥಾನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು: ಭಾರತ ಕ್ರಿಕೆಟ್ ತಂಡವು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಹೀನಾಯ ಸೋಲು ಕಾಣುವ ಮೂಲಕ ಬರಿಗೈನಲ್ಲಿ ತವರಿಗೆ ವಾಪಾಸ್ಸಾಗಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ಆಡಿದ 10 ಪಂದ್ಯಗಳ ಪೈಕಿ ಭಾರತ ತಂಡವು ಕೇವಲ ಒಂದು ಪಂದ್ಯವನ್ನಷ್ಟೇ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಐರ್ಲೆಂಡ್ ಎದುರು ಭಾರತ ಟಿ20 ಸರಣಿಯನ್ನು 2-0 ಅಂತರದಲ್ಲಿ ಸೋಲು ಅನುಭವಿಸಿದರೆ, ಇಂಗ್ಲೆಂಡ್ ಎದುರು ಟಿ20 ಸರಣಿಯಲ್ಲಿ 4-0 ಅಂತರದ ಹೀನಾಯ ಸೋಲು ಕಂಡಿತು. ಇನ್ನು ಏಕದಿನ ಸರಣಿಯಲ್ಲೂ ಭಾರತ 2-1 ಅಂತರದ ಸೋಲು ಕಂಡಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ.
ಭಾರತ ತಂಡವು ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. 2024ರ ಐಸಿಸಿ ಟಿ20 ವಿಶ್ವಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಜಯಿಸಿದೆ. ಇವೆಲ್ಲವೂ ನಿಜಕ್ಕೂ ಪ್ರಶ್ನಾತೀತ ಸಾಧನೆಯೇ ಸರಿ. ಆದರೆ ಇತ್ತೀಚಿಗಿನ ಭಾರತ ತಂಡದ ದ್ವಿಪಕ್ಷೀಯ ಸರಣಿಯಲ್ಲಿನ ಭಾರತದ ಪ್ರದರ್ಶನ ನೋಡಿದರೆ, ಇದು ನಿಜಕ್ಕೂ ಚಾಂಪಿಯನ್ ತಂಡವಾ ಎನ್ನುವ ಪ್ರಶ್ನೆ ಕಾಡದೇ ಇರದು. ಇದೀಗ ಭಾರತ ತಂಡವು 2027ರ ಏಕದಿನ ವಿಶ್ವಕಪ್‌ಗೆ ಸಿದ್ದತೆ ಆರಂಭಿಸಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಬಯಲಾಯ್ತು ಟೀಂ ಇಂಡಿಯಾ ಬಂಡವಾಳ:
ಐರ್ಲೆಂಡ್ ಎದುರು ಆಘಾತಕಾರಿ ಟಿ20 ಸರಣಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಭಾರತ ತಂಡದ ನಿಜವಾದ ವೀಕ್ನೆಸ್ ಏನು ಎನ್ನುವುದು ಜಗತ್ತಿನ ಮುಂದೆ ಅನಾವರಣವಾಗಿದೆ. ಇಂಗ್ಲೆಂಡ್ ಎದುರು ಟಿ20 ಸರಣಿಯಲ್ಲಿ ಒಂದೂ ಪಂದ್ಯ ಗೆಲ್ಲದ ಭಾರತ ತಂಡ, ಏಕದಿನ ಸರಣಿಯಲ್ಲೂ 2-1 ಅಂತರದ ಸೋಲು ಕಂಡಿತು. ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕದ ಹೊರತಾಗಿಯೂ ಭಾರತ ತಂಡ ಗೆಲ್ಲಲಿಲ್ಲ.
ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್ ಅವರಂತಹ ಅನುಭವಿ ವೇಗಿಗಳು ಲಭ್ಯವಿದ್ದರೂ ಅವರನ್ನು ಕೈಬಿಟ್ಟು ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್ ಅವರಂತಹ ಅನನುಭವಿ ವೇಗಿಗಳನ್ನು ಇಂಗ್ಲೆಂಡ್‌ಗೆ ಕರೆದೊಯ್ದಿದ್ದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಮಾಡಿದ ಮಹಾ ಯಡವಟ್ಟು ಎನ್ನುವುದು ಎಂತಹವರಿಗಾದರೂ ಗೊತ್ತಾಗುತ್ತಿದೆ. ಏಕದಿನ ಸರಣಿಯಲ್ಲಿ ಭಾರತೀಯ ಬೌಲರ್‌ಗಳು ಒಮ್ಮೆಯೂ ಜೋ ರೂಟ್ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶವೇ ಸಿಗಲಿಲ್ಲ. ಇದೀಗ ಈ ರೀತಿ ಸೋಲು ಕಾಣುತ್ತಿರುವ ಭಾರತ ತಂಡವನ್ನು ಹೆಡ್ ಕೋಚ್ ಗೌತಮ್ ಗಂಭೀರ್ ಮುಳುಗಿಸಿ ಬಿಡ್ತಾರಾ ಎನ್ನುವ ಆತಂಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ.
ಗೌತಮ್ ಗಂಭೀರ್ ಇನ್ನೆಷ್ಟು ಸಮಯ ಟೀಂ ಇಂಡಿಯಾ ಕೋಚ್ ಆಗಿರ್ತಾರೆ?
ಇದೀಗ ಇಂಗ್ಲೆಂಡ್ ಎದುರಿನ ಸರಣಿ ಸೋಲಿನ ಬೆನ್ನಲ್ಲೇ ಇದೀಗ ಭಾರತ ತಂಡವು ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲು ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಹೀಗಿದ್ದೂ ಸದ್ಯಕ್ಕಂತೂ ಗಂಭೀರ್ ಸ್ಥಾನ ಭದ್ರವಾಗಿದೆ. ಯಾಕೆಂದರೆ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕವಷ್ಟೇ ಭಾರತ ತಂಡವು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2026ರ ಟಿ20 ವಿಶ್ವಕಪ್ ಜಯಿಸಿದೆ.
ಸದ್ಯ ಗೌತಮ್ ಗಂಭೀರ್ ಅವರ ಟೀಂ ಇಂಡಿಯಾ ಹೆಡ್ ಕೋಚ್ ಒಪ್ಪಂದದ ಅವಧಿ 2027ರವರೆಗೂ ಇದೆ. 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ ಒಂದು ವರ್ಷವಿರುವುದರಿಂದ, ಬಲಿಷ್ಠ ತಂಡ ಕಟ್ಟಲು ಗಂಭೀರ್‌ಗೆ ಇನ್ನೂ ಕೆಲ ಕಾಲಾವಕಾಶವಿದೆ. ಇದೀಗ ಜಿಂಬಾವ್ವೆ ಎದುರಿನ ಸರಣಿ ಬಳಿಕ ಟೀಂ ಇಂಡಿಯಾ, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಪ್ರದರ್ಶನವನ್ನು ಹಾಗೂ ಗಂಭೀರ್ ಪಾತ್ರವನ್ನು ಬಿಸಿಸಿಐ ಗಮನಿಸಲಿದೆ. ಸದ್ಯಕ್ಕಂತೂ ಗಂಭೀರ್ ತಲೆ ಮೇಲೆ ಯಾವುದೇ ತೂಗುಗತ್ತಿಯಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ಇದೇ ರೀತಿಯ ಕೆಟ್ಟ ಪ್ರದರ್ಶನ ತೋರಿದರೆ ಗಂಭೀರ್ ಭಾರತ ತಂಡದ ಹೆಡ್ ಕೋಚ್ ಆಗಿ ಮುಂದುವರೆಯುವುದು ಸುಲಭವಿಲ್ಲ.


