Asianet Suvarna News Asianet Suvarna News

Ind vs NZ Mumbai Test: ಸಿರಾಜ್ ಬಿರುಗಾಳಿ, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ಕಿವೀಸ್‌..!

* ಮುಂಬೈ ಟೆಸ್ಟ್‌ನಲ್ಲಿ ಮಾರಕ ದಾಳಿ ನಡೆಸಿದ ಟೀಂ ಇಂಡಿಯಾ ಬೌಲರ್‌ಗಳು

* ಕೇವಲ 38 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್

* ಮೊಹಮ್ಮದ್‌ ಸಿರಾಜ್‌ಗೆ 3 ವಿಕೆಟ್‌, ಸ್ಪಿನ್ನರ್‌ಗಳಿಗೆ 3 ವಿಕೆಟ್

Ind vs NZ Mumbai Test India at top as New Zealand go 6 down for 38 on Day 2 Tea Break kvn
Author
Bengaluru, First Published Dec 4, 2021, 3:00 PM IST

ಮುಂಬೈ(ಡಿ.04): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಜಾಜ್‌ ಪಟೇಲ್‌ (Ajaz Patel) 10 ವಿಕೆಟ್‌ ಕಬಳಿಸಿ ಮಿಂಚಿದ ಬೆನ್ನಲ್ಲೇ, ಭಾರತೀಯ ಬೌಲರ್‌ಗಳು ಸಹಾ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆಯಿಟ್ಟಿವೆ. ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್‌ (Mohammed Siraj) ಆರಂಭದಲ್ಲೇ ಮೂರು ವಿಕೆಟ್‌ ಕಬಳಿಸುವ ಮೂಲಕ ಶಾಕ್ ನೀಡಿದ್ದಾರೆ. ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ ನ್ಯೂಜಿಲೆಂಡ್ ತಂಡವು (New Zealand Cricket Team) 6 ವಿಕೆಟ್‌ ಕಳೆದುಕೊಂಡು 38 ರನ್‌ ಬಾರಿಸಿದ್ದು, ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.

ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು (Indian Cricket Team) 325 ರನ್‌ಗಳಿಗೆ ಆಲೌಟ್‌ ಮಾಡಿ, ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ನ್ಯೂಜಿಲೆಂಡ್ ತಂಡಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಶಾಕ್ ನೀಡಿದರು. ಇಶಾಂತ್ ಶರ್ಮಾ (Ishant Sharma) ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಮೊಹಮ್ಮದ್ ಸಿರಾಜ್ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದ ವಿಲ್‌ ಯಂಗ್ 4 ರನ್‌ ಬಾರಿಸಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ಇದರ ಬೆನ್ನಲ್ಲೇ ಟಾಮ್‌ ಲೇಥಲ್ ಪುಲ್‌ ಮಾಡುವ ಯತ್ನದಲ್ಲಿ ಶ್ರೇಯರ್‌ ಅಯ್ಯರ್‌ಗೆ (Shreyas Iyer) ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಅನುಭವಿ ಬ್ಯಾಟರ್‌ ರಾಸ್ ಟೇಲರ್‌ (Ross Taylor) ಕೇವಲ 1 ರನ್‌ ಬಾರಿಸಿ ಸಿರಾಜ್‌ಗೆ ಮೂರನೇ ಬಲಿಯಾದರು.

ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದ ಐವರು ಬ್ಯಾಟರ್‌ಗಳು: ಹೌದು, ಕಿವೀಸ್ ಹಂಗಾಮಿ ನಾಯಕ ಟಾಮ್‌ ಲೇಥಮ್‌(10) ಕಿವೀಸ್ ಪರ ಇಲ್ಲಿಯವರೆಗಿನ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. ಇನ್ನುಳಿದಂತೆ ವಿಲ್ ಯಂಗ್(4), ಡೇರಲ್ ಮಿಚೆಲ್‌(8), ರಾಸ್ ಟೇಲರ್(1), ಹೆನ್ರಿ ನಿಕೋಲಸ್‌(7) ಹಾಗೂ ರಚಿನ್ ರವೀಂದ್ರ(4) ಹೀಗೆ ಅಗ್ರ ಕ್ರಮಾಂಕದ ಆರು ಬ್ಯಾಟರ್‌ಗಳ ಪೈಕಿ ಐವರು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದು, ಅಲ್ಪ ಮೊತ್ತಕ್ಕೆ ಆಲೌಟ್‌ ಆಗುವ ಭೀತಿಗೆ ಕುಸಿದಿದೆ. 

Ajaz Patel Pics 10 Wickets: ಇತಿಹಾಸ ಬರೆದ ಭಾರತ ಮೂಲದ ಕಿವೀಸ್‌ ಸ್ಪಿನ್ನರ್

ಮೊದಲ ಓವರ್‌ನಲ್ಲೇ ವಿಕೆಟ್‌ ಕಬಳಿಸಿದ ಅಶ್ವಿನ್-ಜಯಂತ್: ಮುಂಬೈ ಪಿಚ್‌ ಈಗಾಗಲೇ ಸ್ಪಿನ್ನರ್‌ಗಳಿಗೆ ನೆರವು ನೀಡುವ ಎಲ್ಲಾ ಸೂಚನೆ ನೀಡಿದ್ದು, ಕಿವೀಸ್‌ನ ಸ್ಪಿನ್ನರ್‌ ಅಜಾಜ್ ಪಟೇಲ್‌ 10 ವಿಕೆಟ್‌ ಕಬಳಿಸಿ ಮಿಂಚಿದ್ದರೇ, ಭಾರತದ ಮೂವರು ಸ್ಪಿನ್ನರ್‌ಗಳು ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ. ಅಕ್ಷರ್ ಪಟೇಲ್ (Axar Patel) ತಾವೆಸೆದ ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಡೇರಲ್ ಮಿಚೆಲ್ ವಿಕೆಟ್ ಕಬಳಿಸಿ ಮಿಂಚಿದರು. ಇದಾದ ಬಳಿಕ ರವಿಚಂದ್ರನ್ ಅಶ್ವಿನ್ ತಾವೆಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಹೆನ್ರಿ ನಿಕೋಲ್ಸ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಚಹಾ ವಿರಾಮಕ್ಕೂ ಮುನ್ನ ಎಸೆದ ಕೊನೆಯ ಓವರ್‌ನಲ್ಲಿ ಜಯಂತ್ ಯಾದವ್ ಕೂಡಾ ತಮ್ಮ ಖಾತೆಯ ಮೊದಲ ಓವರ್‌ನಲ್ಲೇ ರಚಿನ್ ರವೀಂದ್ರ ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ: 325/10
ಮಯಾಂಕ್ ಅಗರ್‌ವಾಲ್: 150
ಅಜಾಜ್ ಅಹಮ್ಮದ್: 119/10

ನ್ಯೂಜಿಲೆಂಡ್: 38/6

,ಟಾಮ್ ಲೇಥಮ್ : 10

ಮೊಹಮ್ಮದ್ ಸಿರಾಜ್: 19/3

(* ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ)


(* ಎರಡನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ

Follow Us:
Download App:
  • android
  • ios