Asianet Suvarna News Asianet Suvarna News

Ajaz Patel Pics 10 Wickets: ಇತಿಹಾಸ ಬರೆದ ಭಾರತ ಮೂಲದ ಕಿವೀಸ್‌ ಸ್ಪಿನ್ನರ್

* ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಸರಿಗಟ್ಟಿದ ಅಜಾಜ್ ಪಟೇಲ್‌

* ಭಾರತ ಎದುರು ಎಲ್ಲಾ 10 ವಿಕೆಟ್ ಉರುಳಿಸಿದ ಅಜಾಜ್ ಪಟೇಲ್

* ಜಿಮ್ ಲೇಕರ್, ಅನಿಲ್ ಕುಂಬ್ಳೆ ಬಳಿಕ ಅಜಾಜ್ ಐತಿಹಾಸಿಕ ಸಾಧನೆ

Ind vs NZ Mumbai Test Ajaz Patel 3rd Bowler in History to Clinch 10 Wickets in an Test Innings kvn
Author
Bengaluru, First Published Dec 4, 2021, 1:22 PM IST

ಮುಂಬೈ(ಡಿ.04): ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಜಾಜ್ ಪಟೇಲ್ (Ajaz Patel) 10 ವಿಕೆಟ್‌ ಕಬಳಿಸುವ ಮೂಲಕ ದಿಗ್ಗಜ ಕ್ರಿಕೆಟಿಗರಾದ ಜಿಮ್‌ ಲೇಕರ್ (Jim Laker) ಹಾಗೂ ಅನಿಲ್‌ ಕುಂಬ್ಳೆ (Anil Kumble) ಸಾಲಿಗೆ ಸೇರ್ಪಡೆಯಾಗಿದ್ದಾರೆ. 144 ವರ್ಷಗಳ ಸುದೀರ್ಘ ಕ್ರಿಕೆಟ್ ಇತಿಹಾಸ ಹೊಂದಿರುವ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿದ ಮೂರನೇ ಸ್ಪಿನ್ನರ್ ಎನ್ನುವ ಐತಿಹಾಸಿಕ ದಾಖಲೆಗೆ ಅಜಾಜ್ ಪಟೇಲ್ ಬಾಜನರಾಗಿದ್ದಾರೆ. ಮುಂಬೈ ಮೂಲದ ಅಜಾಜ್ ಪಟೇಲ್ ಐತಿಹಾಸಿಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ (Team India) ಮೊದಲ ಇನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಸರ್ಪಪತನ ಕಂಡಿದೆ.

ಈ ಮೊದಲು 1956ರಲ್ಲಿ ಇಂಗ್ಲೆಂಡ್‌ನ ಆಫ್‌ ಸ್ಪಿನ್ನರ್ ಜಿಮ್ ಲೇಕರ್, ಆಸ್ಟ್ರೇಲಿಯಾ ವಿರುದ್ದ 10 ವಿಕೆಟ್‌ ಕಬಳಿಸಿದ್ದರು. ಇದಾದ ಬಳಿಕ 1999ರಲ್ಲಿ ಕನ್ನಡದ ಅನಿಲ್‌ ಕುಂಬ್ಳೆ ದೆಹಲಿಯ ಫಿರೋಜ್‌ ಶಾ ಕೋಟ್ಲಾ(ಈಗಿನ ಅರುಣ್‌ ಜೇಟ್ಲಿ ಮೈದಾನ) ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ಎಲ್ಲಾ 10 ವಿಕೆಟ್ ಕಬಳಿಸಿ ಸಂಭ್ರಮಿಸಿದ್ದರು. ಇದೀಗ ಈ ಇಬ್ಬರು ದಿಗ್ಗಜ ಸ್ಪಿನ್ನರ್‌ಗಳ ಸಾಲಿಗೆ ಅಜಾಜ್ ಪಟೇಲ್ ಸೇರ್ಪಡೆಯಾಗಿದ್ದಾರೆ. 

ಇಲ್ಲಿನ ವಾಂಖೆಡೆ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ 221 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಎರಡನೇ ದಿನವೂ ಅಜಾಜ್ ಪಟೇಲ್ ಆಘಾತ ನೀಡಿದರು. ಎರಡನೇ ದಿನದಾಟದಲ್ಲಿ ತಾವೆಸೆದ ಮೊದಲ ಓವರ್‌ನಲ್ಲೇ ಅಜಾಜ್ ಪಟೇಲ್ ಸತತ 2 ವಿಕೆಟ್ ಕಬಳಿಸುವ ಮೂಲಕ ಶಾಕ್‌ ನೀಡಿದರು. ಇದಾದ ಬಳಿಕವು ಒಂದು ತುದಿಯಲ್ಲಿ ನಿರಂತರ ಬೌಲಿಂಗ್ ದಾಳಿ ನಡೆಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.

Ind vs NZ Mumbai Test: ಆರಂಭಿಕ ಆಘಾತದ ನಡುವೆಯೂ ತಂಡಕ್ಕೆ ಆಸರೆಯಾದ ಅಕ್ಷರ್-ಮಯಾಂಕ್‌ ಜೋಡಿ

ಒಂದು ಕಡೆ ಮಯಾಂಕ್ ಅಗರ್‌ವಾಲ್‌ ಆಕರ್ಷಕ 150 ರನ್‌ ಚಚ್ಚಿದರೆ, ಅಕ್ಷರ್ ಪಟೇಲ್‌ 52 ರನ್‌ ಬಾರಿಸಿ ಮಿಂಚಿದರೆ, ಕಿವೀಸ್‌ ಪರ ಅಜಾಜ್ ಪಟೇಲ್‌ 10 ವಿಕೆಟ್‌ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದರು. ಈ ಮೊದಲು ಭಾರತದ ಪಿಚ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸ್ಪಿನ್ನರ್ ಎನ್ನುವ ದಾಖಲೆ ಆಸ್ಟ್ರೇಲಿಯಾದ ನೇಥನ್ ಲಯನ್ ಅವರ ಹೆಸರಿನಲ್ಲಿತ್ತು. 2017ರಲ್ಲಿ ನೇಥನ್ ಲಯನ್‌ ಲಯನ್‌ 50 ರನ್‌ ನೀಡಿ ಭಾರತದ 8 ವಿಕೆಟ್ ಕಬಳಿಸಿದ್ದರು. ಇದೀಗ ಅಜಾಜ್ ಪಟೇಲ್‌ 119 ರನ್‌ ನೀಡಿ ಎಲ್ಲಾ 10 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 1988ರಲ್ಲಿ ಮುಂಬೈನಲ್ಲಿ ಜನಿಸಿದ್ದ ಅಜಾಜ್‌ ಪಟೇಲ್ ಇದೀಗ ಮುಂಬೈನ ವಾಂಖೆಡೆ ಮೈದಾನದಲ್ಲೇ 10 ವಿಕೆಟ್ ಕಬಳಿಸುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿದು 2438ನೇ ಪಂದ್ಯವಾಗಿದ್ದು, ಮೂರನೇ ಬಾರಿಗೆ ಇನಿಂಗ್ಸ್‌ನಲ್ಲಿ ಬೌಲರ್‌ರೊಬ್ಬರು 10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

Follow Us:
Download App:
  • android
  • ios