2027-31ರ ಐಸಿಸಿ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ದ್ವಿಪಕ್ಷೀಯ ಏಕದಿನ ಪಂದ್ಯಗಳನ್ನು ಕಡಿತಗೊಳಿಸಿ ಟಿ20ಗೆ ಒತ್ತು ನೀಡಲು ಚಿಂತನೆ ನಡೆಸಲಾಗುತ್ತಿದೆ. ಇನ್ನೊಂದೆಡೆ, ಭಾರತದ ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದುಬೈ: 2027-31ರ ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ಯಾಲೆಂಡರ್‌ಅನ್ನು ಐಸಿಸಿ ರೂಪಿಸುತ್ತಿದ್ದು, ಇದರಲ್ಲಿ ದ್ವಿಪಕ್ಷೀಯ ಏಕದಿನ ಪಂದ್ಯಗಳನ್ನು ಕಡಿತಗೊಳಿಸಿ, ಟಿ20ಗೆ ಹೆಚ್ಚು ಒತ್ತು ನೀಡಲಿದೆ.

ಈ ಬಗ್ಗೆ ಚರ್ಚೆ ನಡೆಸಲು ಈ ವಾರ ದುಬೈನಲ್ಲಿ ಕ್ರಿಕೆಟ್ ಆಪರೇಷನ್ಸ್ ವರ್ಕ್‌ಶಾಪ್ ನಡೆಯಲಿದೆ. ಇದರ ಅಂತಿಮ ಯೋಜನೆಯನ್ನು ನವೆಂಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಪ್ರಸ್ತುತಪಡಿಸುವ ಸಾಧ್ಯತೆ ಇದೆ. ಸದ್ಯದ ವರದಿ ಪ್ರಕಾರ, 2027-31ರ ಅವಧಿಯಲ್ಲಿ ಏಕದಿನ ವಿಶ್ವಕಪ್‌ಗೆ ಈಗಿರುವಷ್ಟೇ ಆದ್ಯತೆ ನೀಡಿದರೂ ದ್ವಿಪಕ್ಷೀಯ ಏಕದಿನ ಸರಣಿಗಳನ್ನು ಕಡಿತಗೊಳಿಸಲಾಗುತ್ತದೆ. ಅದರ ಬದಲು ಟಿ20 ಸರಣಿಗಳನ್ನು ಹೆಚ್ಚೆಚ್ಚು ನಡೆಸುವ ಚಿಂತನೆ ನಡೆಯುತ್ತಿದೆ. ಉಳಿದಂತೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಈಗಿರುವ 9 ತಂಡಗಳನ್ನು ಮುಂದುವರಿಸುವುದೋ ಅಥವಾ ಇತರ ತಂಡಗಳನ್ನು ಸೇರಿಸುವುದೋ ಎಂಬುದರ ಬಗ್ಗೆ ಐಸಿಸಿ ಚರ್ಚೆ ನಡೆಸಲಿದೆ.

ಅಂ.ರಾ. ಕ್ರಿಕೆಟ್‌ನಲ್ಲಿ ಸ್ಮೃತಿ 11000 ರನ್‌ ಮೈಲುಗಲ್ಲು

ನಿಶಿನ್‌: ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11000 ರನ್‌ ಪೂರೈಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಭಾರತದ ಸ್ಮೃತಿ ಮಂಧನಾ ಪಾತ್ರರಾಗಿದ್ದಾರೆ. ಅವರು ಮಂಗಳವಾರ ಶ್ರೀಲಂಕಾ ವಿರುದ್ಧ ಏಷ್ಯನ್‌ ಗೇಮ್ಸ್‌ ಫೈನಲ್‌ ಪಂದ್ಯದಲ್ಲಿ ಈ ಮೈಲುಗಲ್ಲು ಸಾಧಿಸಿದರು. ಸ್ಮೃತಿ 9 ಟೆಸ್ಟ್‌ನಲ್ಲಿ 788 ರನ್‌, 120 ಏಕದಿನದಲ್ಲಿ 5411 ರನ್‌ ಹಾಗೂ 179 ಅಂ.ರಾ. ಟಿ20 ಪಂದ್ಯದಲ್ಲಿ 4867 ರನ್‌ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಗರಿಷ್ಠ ರನ್‌ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್(10,868 ರನ್‌) 2ನೇ ಸ್ಥಾನದಲ್ಲಿದ್ದಾರೆ.

ಮಹಿಳಾ ಕ್ರಿಕೆಟ್‌ನಲ್ಲಿ ಸತತ 2ನೇ ಸಲವೂ ಚಿನ್ನ

ನಿಶಿನ್‌(ಜಪಾನ್‌): 20ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಕೊನೆಗೂ ಚಿನ್ನದ ಪದಕ ಗೆದ್ದಿದೆ. ಮಂಗಳವಾರ ಮಹಿಳಾ ಕ್ರಿಕೆಟ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 147 ರನ್‌ಗಳಿಂದ ಗೆಲುವು ಸಾಧಿಸಿದ ಭಾರತೀಯ ಆಟಗಾರ್ತಿಯರು ಬಂಗಾರದ ಪದಕ ಕೊರಳಿಗೇರಿಸಿಕೊಂಡರು. ಇದರೊಂದಿಗೆ ದೇಶದ ಪದಕ ಗಳಿಕೆ 7ಕ್ಕೆ ಏರಿಕೆಯಾಗಿದೆ. ಈ ಮೂಲಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿದಿದೆ. ಇದರ ಹೊರತಾಗಿ ವುಶು, ಬ್ಯಾಡ್ಮಿಂಟನ್‌ನಲ್ಲೂ ಭಾರತ ಪದಕ ಖಚಿತಪಡಿಸಿಕೊಂಡಿದೆ.

ಏಷ್ಯಾಡ್‌ನಲ್ಲಿ 2010ರಲ್ಲಿ ಮೊದಲ ಬಾರಿ ಕ್ರಿಕೆಟ್ ಆಡಿಸಲಾಗಿತ್ತು. 2010, 2014ರ ಮಹಿಳಾ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಗೆದ್ದಿದ್ದರೆ, 2022, 2026ರಲ್ಲಿ ಭಾರತ ಚಾಂಪಿಯನ್‌ ಆಗಿದೆ. ಹರ್ಮನ್‌ಪ್ರೀತ್‌ ಕೌರ್‌ ಪಡೆ ಈ ಬಾರಿ ಚಿನ್ನ ಗೆಲ್ಲುವ ಫೇವರಿಟ್‌ ಎನಿಸಿಕೊಂಡೇ ಗೇಮ್ಸ್‌ಗೆ ಕಾಲಿಟ್ಟಿತ್ತು. ಅದರಂತೆ ಫೈನಲ್‌ನಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಗೆದ್ದಿತು.ಮೊದಲು ಬ್ಯಾಟ್‌ ಮಾಡಿದ ಭಾರತ 3 ವಿಕೆಟ್‌ ನಷ್ಟದಲ್ಲಿ 216 ರನ್‌ ಗಳಿಸಿತು. ಸ್ಮೃತಿ ಮಂಧನಾ 79, ಶಫಾಲಿ ವರ್ಮಾ 48, ರಿಚಾ ಘೋಷ್‌ ಔಟಾಗದೆ 49 ರನ್‌ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಲಂಕಾ 15.4 ಓವರ್‌ಗಳಲ್ಲಿ 69 ರನ್‌ಗೆ ಆಲೌಟಾಯಿತು. ದೀಪ್ತಿ ಶರ್ಮಾ 3, ಶ್ರೇಯಾಂಕ, ಶ್ರೀ ಚರಣಿ, ಶಫಾಲಿ ತಲಾ 2 ವಿಕೆಟ್‌ ಪಡೆದರು. ಇನ್ನು, ಬಾಂಗ್ಲಾದೇಶವನ್ನು ಸೋಲಿಸಿದ ಪಾಕಿಸ್ತಾನ ಕಂಚಿನ ಪದಕ ತನ್ನದಾಗಿಸಿಕೊಂಡಿತು.