ಶಾರುಖ್ ಖಾನ್ ಯಾರಂದೇ ಪ್ಯಾಟ್ ಕಮಿನ್ಸ್‌ಗೆ ಗೊತ್ತಿರಲಿಲ್ಲವಂತೆ!
ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ಶಾರುಖ್ ಖಾನ್ ಕುರಿತಾಗಿ ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕರಾದ ಶಾರುಖ್ ಖಾನ್, ಜನಪ್ರಿಯ ಸೆಲಿಬ್ರಿಟಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಶಾರುಖ್ ಖಾನ್ ತಮ್ಮ ತಂಡವನ್ನು ಹುರಿದುಂಬಿಸುವ ಸಲುವಾಗಿ ಆಗಾಗ ಸ್ಟೇಡಿಯಂಗೆ ಬಂದು ಚಿಯರ್ ಅಪ್ ಮಾಡುವುದನ್ನು ನಾವು ನೀವೆಲ್ಲರೂ ನೋಡಿಯೇ ಇರುತ್ತೇವೆ. ಕಳೆದ ಆವೃತ್ತಿಯಲ್ಲಿ ಶಾರುಖ್ ಖಾನ್ ಸಹ ಒಡೆತದ ಕೋಲ್ಕತಾ ನೈಟ್ ರೈಡರ್ಸ್ ತಂಡವು, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಶಾರುಖ್ ಖಾನ್ ಒಡೆತನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎಂದು ಕರೆಸಿಕೊಳ್ಳುವ ಐಪಿಎಲ್‌ನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿವೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ತಂಡವು ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಮೂರನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು.
ಲಿಂಗ ಪರಿವರ್ತಿಸಿಕೊಂಡ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಮಗ: ಈಗ ಆರ್ಯನ್ ಅವನಲ್ಲ ಅವಳು!
ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ 2014ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ 2015ರಲ್ಲೂ ಕಮಿನ್ಸ್ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ಇದಾದ ನಂತರ 2020ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸಿಯು 15.5 ಕೋಟಿ ರುಪಾಯಿ ನೀಡಿ ರುಪಾಯಿ ನೀಡಿ ಮತ್ತೊಮ್ಮೆ ಪ್ಯಾಟ್ ಕಮಿನ್ಸ್ ಅವರನ್ನು ಕೆಕೆಆರ್ ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದಾದ ಬಳಿಕ 2021 ಹಾಗೂ 2022ರ ಐಪಿಎಲ್ ಟೂರ್ನಿಯಲ್ಲೂ ಕಮಿನ್ಸ್ ಕೆಕೆಆರ್ ತಂಡದ ಪರ ಕಣಕ್ಕಿಳಿದಿದ್ದರು.
ಇದೀಗ ನೀಳಕಾಯದ ವೇಗಿ ಪ್ಯಾಟ್ ಕಮಿನ್ಸ್, ಮೊದಲ ಬಾರಿಗೆ ಶಾರುಖ್ ಖಾನ್ ಅವರನ್ನು ಭೇಟಿಯಾದಾಗ, ಅವರು ಯಾರೆನ್ನುವುದೇ ಗೊತ್ತಿರಲಿಲ್ಲ ಎನ್ನುವ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. "ನಾನು ಮೊದಲ ಬಾರಿಗೆ ಶಾರುಖ್ ಖಾನ್ ಅವರನ್ನು ಭೇಟಿಯಾದಾಗ, ನಿಜ ಹೇಳಬೇಕೆಂದರೆ ಅವರು ಯಾರೆನ್ನುವುದೇ ಗೊತ್ತಿರಲಿಲ್ಲ. ನಾನಾಗ 18 ಅಥವಾ 19 ವರ್ಷದವನಾಗಿದ್ದೆ. ಅಲ್ಲಿಯವರೆಗೂ ನಾನು ಯಾವುದೇ ಬಾಲಿವುಡ್ ಸಿನಿಮಾವನ್ನು ನೋಡಿರಲಿಲ್ಲ. ನಾನು ಅವರನ್ನು ಭೇಟಿಯಾದಾಗ ಇವರೇನು ಇಷ್ಟು ಕೂಲ್ ಆಗಿದ್ದಾರೆ ಎಂದು ಅನಿಸಿತು. ಅವರ ಸುತ್ತಮುತ್ತ ಕೆಲವು ಭದ್ರತಾ ಸಿಬ್ಬಂದಿಗಳಿದ್ದರು. ಶಾರುಖ್ ಖಾನ್ ಯಾವಾಗಲೂ ತಮಾಷೆಯಾಗಿ, ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ತುಂಬಾ ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಅವರಿಗಿಂತ ಉತ್ತಮ ಓನರ್ ಮತ್ತೊಬ್ಬರಿಲ್ಲ ಎನ್ನಬಹುದು. ಯಾವುದೇ ಒತ್ತಡವಿಲ್ಲದೇ ಆಡಿ, ಆ ಕ್ಷಣವನ್ನು ಎಂಜಾಯ್ ಮಾಡಿ ಎಂದು ಯಾವಾಗಲೂ ಅವರು ಹೇಳುತ್ತಿದ್ದರು. ಸಾಕಷ್ಟು ಓನರ್‌ಗಳು ಒತ್ತಡವನ್ನು ಆಟಗಾರರ ಮೇಲೆ ಹೇರುತ್ತಾರೆ, ಆದರೆ ಶಾರುಖ್ ಆಟಗಾರರ ಮೇಲೆ ಯಾವುದೇ ಒತ್ತಡ ಬೀಳದಂತೆ ನೋಡಿಕೊಳ್ಳುತ್ತಿದ್ದರು" ಎಂದು ಪ್ಯಾಟ್ ಕಮಿನ್ಸ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಐಪಿಎಲ್ ಹರಾಜಿಗೆ ಕ್ಷಣಗಣನೆ ಬೆನ್ನಲ್ಲೇ ಸ್ಪೋಟಕ ಟಿ20 ಶತಕ ಸಿಡಿಸಿ ದಾಖಲೆ ಬರೆದ ಫಿಲ್ ಸಾಲ್ಟ್
ಇನ್ನು ಪ್ಯಾಟ್ ಕಮಿನ್ಸ್, ರಾಷ್ಟ್ರೀಯ ತಂಡದ ಮಹತ್ವದ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ 2023ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಇನ್ನು ಇದಾದ ಬಳಿಕ 2024ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಬರೋಬ್ಬರಿ 20.5 ಕೋಟಿ ರುಪಾಯಿ ನೀಡಿ ಪ್ಯಾಟ್ ಕಮಿನ್ಸ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಕೆಕೆಆರ್ ಎದುರು ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.