ಬಹುನಿರೀಕ್ಷಿತ ಐಪಿಎಲ್‌ನ 19ನೇ ಆವೃತ್ತಿಯು ಮಾ.28 ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ತಮ್ಮ ತಂಡಗಳೊಂದಿಗೆ ಅಭ್ಯಾಸ ಆರಂಭಿಸಿದ್ದು, ಬಿಸಿಸಿಐ ಈ ಬಾರಿ ತಂಡಗಳಿಗೆ ಕೆಲವು ಹೊಸ ಮಾರ್ಗಸೂಚಿಗಳನ್ನು ನೀಡಿದೆ.

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್‌ನ 19ನೇ ಆವೃತ್ತಿಯ ಟೂರ್ನಿ ಮಾ.28ಕ್ಕೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಇದಕ್ಕಾಗಿ ಬಹುತೇಕ ಎಲ್ಲಾ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಆದರೆ ಪೂರ್ಣ ಪ್ರಮಾಣದ ಶಿಬಿರವನ್ನು ಕೆಲ ತಂಡಗಳು ಇನ್ನಷ್ಟೇ ಆರಂಭಿಸಬೇಕಿವೆ.

ಹಾಲಿ ಚಾಂಪಿಯನ್‌ ಆರ್‌ಸಿಬಿ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಫೆಬ್ರವರಿಯಲ್ಲೇ ಅಭ್ಯಾಸ ಶುರು ಮಾಡಿದ್ದವು. ಚೆನ್ನೈ ಸೂಪರ್‌ ಕಿಂಗ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ಸೇರಿದಂತೆ ಇನ್ನೂ ಕೆಲ ತಂಡಗಳು ಈ ತಿಂಗಳ ಆರಂಭದಲ್ಲಿ ಶಿಬಿರ ಆರಂಭಿಸಿವೆ. ಮುಂಬೈ ಇಂಡಿಯನ್ಸ್, ಗುಜರಾತ್‌ ಟೈಟಾನ್ಸ್‌ ದಿನಗಳ ಹಿಂದಷ್ಟೇ ಸಿದ್ಧತೆ ಶುರು ಮಾಡಿಕೊಂಡಿದೆ. ಟಿ20 ವಿಶ್ವಕಪ್‌ ಆಡದ ಮತ್ತು ಭಾರತದ ಕೆಲ ದೇಸಿ ಕ್ರಿಕೆಟಿಗರಷ್ಟೇ ಈ ಶಿಬಿರಗಳಲ್ಲಿ ಪಾಲ್ಗೊಂಡಿದ್ದರು. ಆದರೆ ವಿದೇಶಿ ಆಟಗಾರರನ್ನೊಳಗೊಂಡ ಪೂರ್ಣ ಪ್ರಮಾಣದ ಶಿಬಿರವನ್ನು ಈಗ ಕೆಲ ತಂಡಗಳಷ್ಟೇ ಆರಂಭಿಸಿವೆ. ವಿದೇಶಿಗರ ಆಗಮನ ವಿಳಂಬ ಕಾರಣದಿಂದಾಗಿ ‘ಫುಲ್‌ ಸ್ಕ್ವಾಡ್‌’ ಶಿಬಿರ ಕೂಡಾ ತಡವಾಗಿ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

ವಿರಾಟ್ ಕೊಹ್ಲಿ ಶೀಘ್ರ ಆಗಮನ:

ಆರ್‌ಸಿಬಿ ತಂಡ ಮುಂಬೈನಲ್ಲಿ ಕೆಲ ದಿನಗಳಿಂದ ಅಭ್ಯಾಸ ನಡೆಸುತ್ತಿದೆ. ಕೃನಾಲ್‌ ಪಾಂಡ್ಯ, ವೆಂಕಟೇಶ್‌ ಅಯ್ಯರ್‌, ಜಿತೇಶ್‌ ಶರ್ಮಾ ಸೇರಿದಂತೆ ಕೆಲ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಈ ವಾರ ಕೋಚ್‌, ಕೆಲ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ತಮ್ಮ ಅಭ್ಯಾಸದ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದ ಮಾಜಿ ನಾಯಕ, ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಇನ್ನಷ್ಟೇ ಚಿನ್ನಸ್ವಾಮಿಗೆ ಆಗಮಿಸಬೇಕಿದೆ. ಇನ್ನು 2-3 ದಿನಗಳಲ್ಲಿ ಅವರು ತಮ್ಮ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ

ಎರಡು ತಿಂಗಳ ಬಳಿಕ ರೋಹಿಕ್‌ ಅಖಾಡಕ್ಕೆ

ತಾರಾ ಕ್ರಿಕೆಟಿಗ ರೋಹಿತ್‌ ಶರ್ಮಾ ಅವರು 2 ತಿಂಗಳ ಬಳಿಕ ಮತ್ತೆ ಕ್ರಿಕೆಟ್‌ ಅಂಗಳಕ್ಕೆ ಮರಳಿದ್ದಾರೆ. ಜನವರಿಯಲ್ಲಿ ಅವರು ಕೊನೆ ಬಾರಿ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಪಂದ್ಯಗಳನ್ನಾಡಿದ್ದರು. ಆ ಬಳಿಕ ಮಂಗಳವಾರ ಅವರು ಮುಂಬೈ ಇಂಡಿಯನ್ಸ್‌ ಜೊತೆ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ದೂಲ್‌ ಠಾಕೂರ್‌ ಬೌಲಿಂಗ್‌ನಲ್ಲಿ ರೋಹಿತ್‌ ಶರ್ಮಾ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಮುಂಬೈ ಫ್ರಾಂಚೈಸಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ.

ತಂಡಗಳಿಗೆ ಬಿಸಿಸಿಐ ಕೆಲ ಮಾರ್ಗಸೂಚಿ

ಐಪಿಎಲ್‌ಗೂ ಮುನ್ನ ಬಿಸಿಸಿಐ ಎಲ್ಲಾ ತಂಡಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳ ಪ್ರಕಾರವೇ ಅಭ್ಯಾಸ ನಡೆಸಬೇಕೆಂದು ತಿಳಿಸಲಾಗಿದೆ. ಯಾವುದೇ ತಂಡವು ಅಭ್ಯಾಸದ ವೇಳೆ ತನ್ನ ಪ್ರತಿಸ್ಪರ್ಧಿ ತಂಡ ಬಳಸಿದ ಪಿಚ್ ಅಥವಾ ನೆಟ್‌ ಬಳಸುವಂತಿಲ್ಲ. ಪ್ರತಿ ಸೆಷನ್‌ಗೂ ಹೊಸ ಪಿಚ್‌ ನೀಡಬೇಕು. ಪ್ರತಿ ತಂಡವು ಗರಿಷ್ಠ 2 ಅಭ್ಯಾಸ ಪಂದ್ಯ ಮಾತ್ರ ಆಡಬಹುದು ಮತ್ತು ಅದಕ್ಕಾಗಿ ಮಂಡಳಿಯಿಂದ ಪೂರ್ವಾನುಮತಿ ಕಡ್ಡಾಯ. ಫ್ಲಡ್‌ಲೈಟ್‌ಗಳ ಅಡಿಯಲ್ಲಿ ನಡೆಯುವ ಅಭ್ಯಾಸ ಪಂದ್ಯಗಳು 3.5 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ನಿಯಮ ರೂಪಿಸಿದೆ.