ಪಾಕಿಸ್ತಾನ ಯಾವ ರೀತಿ ಕುತಂತ್ರ ಮಾಡುತ್ತೆ ಅನ್ನೋ ಸ್ಫೋಟಕ ರಹಸ್ಯವನ್ನು ಮಾಜಿ MHA ಅಧಿಕಾರಿ ಬಹಿರಂಗಪಡಿಸಿದ್ದಾರೆ. ಶೋಯೆಬ್ ಅಕ್ತರ್ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಭಾರತಕ್ಕೆ ಹೇಗೆ ಡ್ರಗ್ಸ್ ಸಪ್ಲೈ ಮಾಡಿದ್ರು? ಪಾಕಿಸ್ತಾನದ ಕರಾಳ ಮುಖ ಬಯಲಾಗಿದೆ.
ನವದೆಹಲಿ (ಜು.15) ಪಾಕಿಸ್ತಾನದ ಕ್ರಿಕೆಟಿಗರು ಭಾರತಕ್ಕೆ ಡ್ರಗ್ಸ್ ಸಪ್ಲೈ ಮಾಡಿದ ಘಟನೆ ಬಯಲಾಗಿದೆ. ಹೀಗೆ ಡ್ರಗ್ಸ್ ಸಪ್ಲೈ ಮಾಡಿದಾಗ ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಶೋಯೆಬ್ ಅಕ್ತರ್ ಹಾಗೂ ಮೊಹಮ್ಮದ್ ಆಸಿಫ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆಯೂ ಬಯಲಾಗಿದೆ. ವಿಶೇಷ ಅಂದರೆ ಇದೇ ಡ್ರಗ್ಸ್ ಕಾರಣದಿಂದ ಶೋಯೆಬ್ ಅಕ್ತರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಕ್ರಿಕೆಟಿಗರು 2 ವರ್ಷ ಬ್ಯಾನ್ ಆಗಿದ್ದರು. ಈ ಸ್ಫೋಟಕ ರಹಸ್ಯಗಳನ್ನು ಭಾರತದ ಗೃಹ ಸಚಿವಾಲಯದ ಮಾಜಿ ಭದ್ರತಾ ಅಧಿಕಾರಿ ಆರ್‌ವಿಎಸ್ ಮಣಿ ಬಹಿರಂಗಪಡಿಸಿದ್ದಾರೆ.ಭಾರತದಲ್ಲಿ ಯುಪಿಎ ಅಧಿಕಾರವಧಿಯಲ್ಲಿ ನಡೆದ ಹಲವು ಅಕ್ರಮಗಳನ್ನು ಮಣಿ ಬಯಲು ಮಾಡಿದ್ದಾರೆ. ಇದೀಗ ದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ಎಎನ್ಐ (ANI)ಸ್ಮಿತಾ ಪ್ರಕಾಶ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಆರ್‌ವಿಎಸ್ ಮಣಿ, ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿದ್ದ ಅಕ್ರಮಗಳ ಕುರಿತು ದಾಖಲೆಗಳ ಸಮೇತ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೇವಲ ಪಾಕಿಸ್ತಾನ ಕ್ರಿಕೆಟಿಗರು ಮಾತ್ರವಲ್ಲ, ಭಾರತ ಪ್ರವಾಸ ಮಾಡುತ್ತಿದ್ದ ಪಾಕಿಸ್ತಾನದ ಬಹುತೇಕ ಎಲ್ಲಾ ಅಧಿಕಾರಿಗಳು ಡ್ರಗ್ಸ್ ಹಿಡಿದೇ ಬರುತ್ತಿದ್ದರು. ಸಚಿವರು, ರಾಜತಾಂತ್ರಿಕ ಅಧಿಕಾರಿಗಳಿಗೆ ವಿಶೇಷ ವ್ಯವಸ್ಥೆ ಇರುವ ಕಾರಣ ಇವರ ಮೂಲಕ ಸುಲಭವಾಗಿ ಭಾರತಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎಂದು ಆರ್‌ವಿಎಸ್ ಮಣಿ ಹೇಳಿದ್ದಾರೆ. ಇದೇ ವೇಳೆ 2006ರಲ್ಲಿ ಶೋಯೆಬ್ ಅಕ್ತರ್, ಮೊಹಮ್ಮದ್ ಅಸೀಸ್ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಕ್ರಿಕೆಟ್ ಸರಣಿಗಾಗಿ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಡ್ರಗ್ಸ್ ಹಿಡಿದುಕೊಂಡೇ ಬಂದಿದ್ದರು ಎಂದಿದ್ದಾರೆ.
ಅಕ್ಟೋಬರ್ 17ರ ಪಂದ್ಯಕ್ಕೂ ಮೊದಲು ಸಿಕ್ಕಿಬಿದ್ದ ಕ್ರಿಕೆಟಿಗರು
2006ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸ ಮಾಡಿತ್ತು. ಈ ವೇಳೆ ಶೋಯೆಬ್ ಅಕ್ತರ್, ಮೊಹಮ್ಮದ್ ಅಸೀಫ್ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಡ್ರಗ್ಸ್ ಹಿಡಿದು ಭಾರತಕ್ಕೆ ಬಂದಿದ್ದರು. ಅಕ್ಟೋಬರ್ 17 ರಂದು ಜೈಪುರದಲ್ಲಿ ಮೊದಲ ಪಂದ್ಯ ಆಡಬೇಕಿತ್ತು. ಇದಕ್ಕೂ ಮೊದಲು ಡೋಪಿಂಗ್ ಟೆಸ್ಟ್ ಮಾಡಿದಾಗ ಅಕ್ತರ್, ಆಸಿಫ್ ಸಿಕ್ಕಿ ಬಿದಿದ್ದರು. ಇತ್ತ ಭಾರತದ ಅಧಿಕಾರಿಗಳ ಕೈಗೆ ಶೋಯೆಬ್ ಅಕ್ತರ್ ಹಾಗೂ ಮೊಹಮ್ಮದ್ ಅಸೀಫ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ತನಿಖೆ ವೇಳೆ ಅಕ್ತರ್ ಹಾಗೂ ಆಸಿಫ್ ಇಬ್ಬರೂ ತಪ್ಪೊಪ್ಪಿಕೊಂಡಿದ್ದರು. ಬಳಿಕ ಪಾಕಿಸ್ತಾನ ಹೈಕಮಿಷನ್‌ಗೆ ವಾರ್ನಿಂಗ್ ನೀಡಿ ಇಬ್ಬರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು. ಇತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಬ್ಬರನ್ನು 2 ವರ್ಷ ಬ್ಯಾನ್ ಮಾಡಿತ್ತು.
ಪಾಕಿಸ್ತಾನದಿಂದ ಭಾರತಕ್ಕೆ ಬರುವ ಕ್ರಿಕೆಟ್ ತಂಡ ಇರಬಹುದು, ಸರ್ಕಾರ ಮಟ್ಟದ ಡಿಲಿಗೇಶನ್ ಇರಬಹುದು, ಪ್ರಮುಖವಾಗಿ ಡ್ರಗ್ಸ್ ಹಿಡಿದು ಬರುತ್ತಿದ್ದರು. ಪಾಕಿಸ್ತಾನದ ಆದಾಯದ ಪ್ರಮುಖ ಮೂಲವೇ ಈ ಡ್ರಗ್ಸ್ ಆಗಿತ್ತು. ಇಲ್ಲಿ ಅಕ್ರಮವಾಗಿ ಡ್ರಗ್ಸ್ ಜಾಲಕ್ಕೆ ಹಸ್ತಾಂತರ ಮಾಡಲಾಗುತ್ತಿತ್ತು. ಈ ಹಣದಿಂದ ಭಾರತದ ವಿರುದ್ಧ ಉಗ್ರರ ದಾಳಿಗೆ ಬಳಕೆ ಮಾಡಲಾಗುತ್ತಿತ್ತು ಎಂದು ಆರ್‌ವಿಎಸ್ ಮಣಿ ಹೇಳಿದ್ದಾರೆ.
ಪಾಕ್ ಕೋಚ್ ಅನುಮಾನಸ್ಪದ ಸಾವು
ಪಾಕಿಸ್ತಾನ ಕ್ರಿಕೆಟಿಗರು, ಡಿಲಿಗೇಶನ್ ಮೂಲಕ ಮೂಲಕ ಡ್ರಗ್ಸ್ ಪೂರೈಕೆ ಪಾಕಿಸ್ತಾನದ ಐಎಸ್ಐ ಸೇರಿದಂತೆ ಸರ್ಕಾರದ ಪ್ರಮುಖ ಕೆಲಸವಾಗಿತ್ತು. ಇದನ್ನು ಪಾಕಿಸ್ತಾನದ ಕೋಚ್ ಬಾಬ್ ವೂಲ್ಮರ್ ಕಟುವಾಗಿ ವಿರೋಧಿಸಿದ್ದರು. ಪರಿಣಾಮ 2007ರ ಮಾರ್ಚ್ 18 ರಂದು ಬಾಬ್ ವೂಲ್ಮರ್ ಹೊಟೆಲ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇವೆಲ್ಲಾ ಡಾಟ್ ಕನೆಕ್ಟ್ ಮಾಡಿದರೆ ನಿಮಗೆ ಪಾಕಿಸ್ತಾನದ ಷಡ್ಯಂತ್ರ, ಅಂದಿನ ಭಾರತ ಸರ್ಕಾರದ ಸಹಕಾರ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದಿದ್ದಾರೆ.
ಶೇ.30ರಷ್ಟು ಭಾರತದ ಮೇಲಿನ ಉಗ್ರ ದಾಳಿಗೆ ಡ್ರಗ್ಸ್ ಹಣ
ಭಾರತದಲ್ಲಿ ಪಾಕಿಸ್ತಾನ ನಡೆಸುವ ದಾಳಿಗೆ ಶೇಕಡಾ 30ರಷ್ಟು ಹಣ ಇದೇ ರೀತಿ ಭಾರತಕ್ಕೆ ಅಕ್ರಮವಾಗಿ ಡ್ರಗ್ಸ್ ಪೂರೈಕೆ ಮಾಡುವ ಹಣ ಸಂದಾಯ ಮಾಡಲಾಗುತ್ತದೆ.


