ನವದೆಹಲಿ(ಮಾ.30): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ, ಆಸ್ಪ್ರೇಲಿಯಾ ಸರ್ಕಾರ 6 ತಿಂಗಳ ಲಾಕ್‌ಡೌನ್‌ ಘೋಷಿಸುವ ಸಾಧ್ಯತೆ ಇದ್ದು, ಯಾವುದೇ ಪ್ರವಾಸಿಗರು  ದೇಶಕ್ಕೆ ಪ್ರವೇಶಿಸಲು ಅನುಮತಿ ಇರುವುದಿಲ್ಲ ಎನ್ನಲಾಗಿದೆ. 

ಒಂದೊಮ್ಮೆ ಈ ನಿರ್ಧಾರ ಜಾರಿಗೆ ಬಂದರೆ ಭಾರತ ಕ್ರಿಕೆಟ್‌ ತಂಡದ ಆಸ್ಪ್ರೇಲಿಯಾ ಪ್ರವಾಸಕ್ಕೂ ಅಡ್ಡಿಯಾಗಲಿದೆ. ಈ ವರ್ಷ ಅಕ್ಟೋಬರ್‌ನಲ್ಲಿ ಟಿ20 ತ್ರಿಕೋನ ಸರಣಿಯ ಆಡಲು ಆಸ್ಪ್ರೇಲಿಯಾಗೆ ತೆರಳಬೇಕಿರುವ ಭಾರತ, ಬಳಿಕ ಟಿ20 ವಿಶ್ವಕಪ್‌ ಹಾಗೂ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಬೇಕಿದೆ. ಟಿ20 ವಿಶ್ವಕಪ್‌ ಟೂರ್ನಿಯನ್ನು ಸ್ಥಳಾಂತರಿಸುವ ಇಲ್ಲವೇ ರದ್ದುಗೊಳಿಸಲು ಐಸಿಸಿ ತೀರ್ಮಾನಿಸಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕೊರೋನಾದಿಂದಾಗಿ ಆಟಗಾರರಿಗೆ ವಿಶ್ರಾಂತಿ ಸಿಗುತ್ತಿದೆ ಎಂದ ಕೋಚ್ ರವಿಶಾಸ್ತ್ರಿ

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 18ರಿಂದ ಆರಂಭವಾಗಬೇಕಿದೆ. ಆದರೆ ಕೊರೋನಾ ವೈರಸ್ ಭೀತಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಚುಟುಕು ಕ್ರಿಕೆಟ್ ಹಬ್ಬಕ್ಕೆ ಕಂಠಕವಾಗುವ ಸಾಧ್ಯತೆಯಿದೆ. ಆಸ್ಟ್ರೇಲಿಯಾದಲ್ಲಿ ಪ್ರಸ್ತುತ 2 ಸಾವಿರಕ್ಕೂ ಅಧಿಕ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ 16 ಸಾವು ಸಂಭವಿಸಿದೆ. ಹೀಗಾಗಿ ಆಸ್ಟ್ರೇಲಿಯಾ ತನ್ನೆಲ್ಲಾ ಗಡಿಗಳನ್ನು ಮುಚ್ಚುವ ತೀರ್ಮಾನಕ್ಕೆ ಬಂದಿದೆ. 

ಕೊರೋನಾ ಭೀತಿ ನಡುವೆ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌?

ಕೊರೋನಾ ಭೀತಿಯಿಂದಾಗಿ ಈಗಾಗಲೇ ಕ್ರೀಡಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿವೆ. ಟೋಕಿಯೋ ಒಲಿಂಪಿಕ್ಸ್ 2021ಕ್ಕೆ ಮುಂದೂಡಲ್ಪಟ್ಟಿದೆ. ಇನ್ನು 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲಾಗಿದೆಯಾದರೂ, ಟೂರ್ನಿ ನಡೆಯುವುದು ಅನುಮಾನ ಎನಿಸಿದೆ.