ಕೊರೋನಾದಿಂದಾಗಿ ಆಟಗಾರರಿಗೆ ವಿಶ್ರಾಂತಿ ಸಿಗುತ್ತಿದೆ ಎಂದ ಕೋಚ್ ರವಿಶಾಸ್ತ್ರಿ
ಕೊರೋನಾ ವೈರಸ್ ಬಂದಿದ್ದರಿಂದ ಕ್ರಿಕೆಟಿಗರಿಗೆ ವಿಶ್ರಾಂತಿ ಸಿಗುತ್ತಿದೆ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಇದರ ಜತೆಗೆ ನ್ಯೂಜಿಲೆಂಡ್ ವಿರುದ್ಧದ ಸೋಲಿಗೂ ಬಿಡುವಿಲ್ಲದೇ ಕ್ರಿಕೆಟ್ ಆಡಿದ್ದೇ ಕಾರಣ ಎಂದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮಾ.29): ಕೊರೋನಾ ಸೋಂಕಿನ ಭೀತಿಯಿಂದಾಗಿ ಕ್ರೀಡಾ ಜಗತ್ತು ಸ್ತಬ್ಧಗೊಂಡಿದ್ದು, ಕ್ರೀಡಾಪಟುಗಳಿಗೆ ಬಿಡುವು ಸಿಕ್ಕಿದೆ. ಇದರಿಂದ ಭಾರತೀಯ ಕ್ರಿಕೆಟಿಗರಿಗೆ ಅಗತ್ಯ ವಿಶ್ರಾಂತಿ ಸಿಗುತ್ತಿದೆ ಎಂದು ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಧೋನಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ..!
ಕಳೆದ ವರ್ಷ ಮೇನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಬಳಿಕ ಸುಮಾರು 10ರಿಂದ 11 ದಿನಗಳಷ್ಟೇ ಮನೆಯಲ್ಲಿ ಕಳೆದಿದ್ದ ಶಾಸ್ತ್ರಿ, ಆಟಗಾರರು ಬಹಳ ದಣಿದಿದ್ದರು ಎಂದಿದ್ದಾರೆ. ‘ನ್ಯೂಜಿಲೆಂಡ್ ಪ್ರವಾಸದ ಕೊನೆಗೊಳ್ಳುವ ಸಮಯದಲ್ಲಿ ಆಟಗಾರರು ದಣಿದಿದ್ದರು. ಕೆಲವರು ಮಾನಸಿಕವಾಗಿ ಕುಗ್ಗಿದ್ದರು. ದೈಹಿಕ ಸಾಮರ್ಥ್ಯ, ಗಾಯದ ಸಮಸ್ಯೆಗಳು ಎದುರಾಗಿದ್ದವು. ಸರಿಯಾದ ಸಮಯದಲ್ಲಿ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ’ ಎಂದು ಶಾಸ್ತ್ರಿ ಹೇಳಿದ್ದಾರೆ.
ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!
ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾ ನಿರಂತರವಾಗಿ ಕ್ರಿಕೆಟ್ ಸರಣಿಗಳನ್ನಾಡಿತ್ತು. ಅದರಲ್ಲೂ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ, 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್ ಆಡಿತ್ತು. ಇದರ ಬೆನ್ನಲ್ಲೇ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಟೀಂ ಇಂಡಿಯಾ ಸಜ್ಜಾಗಿತ್ತು. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಎರಡನೇ ಪಂದ್ಯ ಆರಂಭಕ್ಕೂ ಮುನ್ನ ಕೊರೋನಾ ಭೀತಿಯಿಂದಾಗಿ ಏಕದಿನ ಸರಣಿ ದಿಢೀರ್ ಆಗಿ ರದ್ದಾಗಿತ್ತು.
ಅಪ್ಪನ ಜತೆ ಟಿಕ್ ಟಾಕ್ ಮಾಡಿ ಟ್ರೋಲ್ ಆದ ಚಹಲ್..!
ಇನ್ನು ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಇಂದಿನಿಂದ(ಮಾ.29) ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಬೇಕಿತ್ತು. ಆದರೆ ಐಪಿಎಲ್ ಅಭಿಮಾನಿಗಳಿಗೂ ಕೊರೋನಾ ಸದ್ಯ ತಣ್ಣೀರೆರಚಿದ್ದು, ಏಪ್ರಿಲ್ 15ಕ್ಕೆ ಟೂರ್ನಿ ಮುಂದೂಡಲ್ಪಟ್ಟಿದೆ. ಹೀಗಿರುವಾಗ ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರಂದು ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿದ್ದು, ಆಟಗಾರರು ವಿಶ್ರಾಂತಿಗೆ ಜಾರಿದ್ದಾರೆ.