ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಟಿ20 ತಂಡದ ನಾಯಕತ್ವದಿಂದ ಸಲ್ಮಾನ್ ಅಲಿ ಆಘಾ ಅವರನ್ನು ಕೆಳಗಿಳಿಸಿ, ಸಾಹಿಬ್ಜಾದಾ ಫರ್ಹಾನ್‌ಗೆ ಮಣೆಹಾಕಿದೆ. ಬಾಬರ್ ಅಜಮ್, ಶಾಹೀನ್ ಅಫ್ರಿದಿ ಸೇರಿದಂತೆ ಪ್ರಮುಖರನ್ನು ಟಿ20 ತಂಡದಿಂದ ಕೈಬಿಡಲಾಗಿದೆ. ಮುಂಬರುವ ಶ್ರೀಲಂಕಾ ಟಿ20 ಸರಣಿ ಹಾಗೂ ತ್ರಿಕೋನ ಸರಣಿಗೆ ಹೊಸ ತಂಡಗಳನ್ನು ಪ್ರಕಟಿಸಲಾಗಿದೆ.

Big Shake-Up in Pakistan T20 Team! ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಟಿ20 ತಂಡದಲ್ಲಿ ಭಾರೀ ಬದಲಾವಣೆ ಮಾಡಿದೆ. ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ತಂಡ ಕಳಪೆ ಪ್ರದರ್ಶನ ನೀಡಿದ್ದರಿಂದ ಸಲ್ಮಾನ್ ಅಲಿ ಆಘಾ ಅವರನ್ನು ಕ್ಯಾಪ್ಟನ್ ಸ್ಥಾನದಿಂದ ಪಿಸಿಬಿ ಕಿತ್ತುಹಾಕಿದೆ. ಈಗ ಓಪನಿಂಗ್ ಬ್ಯಾಟರ್ ಸಾಹಿಬ್ಜಾದಾ ಫರ್ಹಾನ್ ಅವರನ್ನು ಹೊಸ ಟಿ20 ನಾಯಕನನ್ನಾಗಿ ನೇಮಿಸಿದೆ. ಅಷ್ಟೇ ಅಲ್ಲ, ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದಲೂ ಸಲ್ಮಾನ್ ಆಘಾ ಅವರನ್ನು ಹೊರಗಿಡಲಾಗಿದೆ.

ಸಲ್ಮಾನ್ ಅಘಾ ಅವರ ತಲೆದಂಡಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಾವುದೇ ಕಾರಣ ನೀಡಿಲ್ಲ. 2028ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಜಂಟಿಯಾಗಿ ಆಯೋಜಿಸುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಕಟ್ಟು ಉದ್ದೇಶದಿಂದ ಅಘಾ ಅವರಿಗೆ ಗೇಟ್‌ಪಾಸ್ ನೀಡಿದೆ ಎನ್ನಲಾಗಿದೆ. ಸಲ್ಮಾನ್ ಅಘಾ ನಾಯಕತ್ವದಲ್ಲಿ ಪಾಕಿಸ್ತಾ ತಂಡವು 50 ಟಿ20 ಪಂದ್ಯಗಳನ್ನಾಡಿ 31 ಪಂದ್ಯಗಳನ್ನು ಜಯಿಸಿತ್ತು. ಆದರೆ ಈ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಘಾ ನೇತೃತ್ವದಲ್ಲಿ ಪಾಕಿಸ್ತಾನ ತಂಡವು ಸೆಮೀಸ್‌ಗೇರಲು ವಿಫಲವಾಗಿತ್ತು.

ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದ ಸಾಹಿಬ್ಜಾದಾ ಫರ್ಹಾನ್‌ಗೆ ಈಗ ನಾಯಕತ್ವ ಒಲಿದಿದೆ. ಇನ್ನೊಂದೆಡೆ, ತಂಡದ ಪ್ರಮುಖ ಆಟಗಾರರಾದ ಬಾಬರ್ ಅಜಮ್, ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರನ್ನು ಪಿಸಿಬಿ ಟಿ20 ತಂಡದಿಂದ ಕೈಬಿಟ್ಟಿದೆ. ವಿಕೆಟ್ ಕೀಪರ್ ಉಸ್ಮಾನ್ ಖಾನ್ ಕೂಡ ಟಿ20 ತಂಡದಿಂದ ಔಟ್ ಆಗಿದ್ದಾರೆ.

ಏಕದಿನ ಸರಣಿಗೆ ಸ್ಥಾನ ಉಳಿಸಿಕೊಂಡ ಬಾಬರ್ ಅಜಂ:

ಆದರೆ, ಇಂಗ್ಲೆಂಡ್ ಮತ್ತು ಶ್ರೀಲಂಕಾ ಒಳಗೊಂಡ ಏಕದಿನ ತ್ರಿಕೋನ ಸರಣಿಗೆ ಬಾಬರ್, ಹ್ಯಾರಿಸ್ ಮತ್ತು ಶಾಹೀನ್ ಆಯ್ಕೆಯಾಗಿದ್ದಾರೆ. ಈ ಏಕದಿನ ತಂಡವನ್ನು ಶಾಹೀನ್ ಶಾ ಅಫ್ರಿದಿ ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ 9 ಸಿಕ್ಸರ್ ಸಿಡಿಸಿ ಮಿಂಚಿದ್ದ ಯುವ ಆಟಗಾರ ರಜಾವುಲ್ಲಾ ಅವರನ್ನು ಏಕದಿನ ಮತ್ತು ಟಿ20 ಎರಡೂ ತಂಡಗಳಿಗೂ ಆಯ್ಕೆ ಸಮಿತಿ ಸೇರಿಸಿಕೊಂಡಿದೆ.

ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಅಕ್ಟೋಬರ್ 9 ರಂದು ರಾವಲ್ಪಿಂಡಿಯಲ್ಲಿ ಶುರುವಾಗಲಿದೆ. ಅಕ್ಟೋಬರ್ 11 ಮತ್ತು 13 ರಂದು ಎರಡು ಮತ್ತು ಮೂರನೇ ಟಿ20 ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಇಂಗ್ಲೆಂಡ್ ಮತ್ತು ಶ್ರೀಲಂಕಾ ಭಾಗವಹಿಸುವ ಏಳು ಪಂದ್ಯಗಳ ಏಕದಿನ ತ್ರಿಕೋನ ಸರಣಿ ನಡೆಯಲಿದೆ. ರಾವಲ್ಪಿಂಡಿ ಮತ್ತು ಲಾಹೋರ್ ಈ ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಪಾಕಿಸ್ತಾನ ಟಿ20 ತಂಡ: 

ಸಾಹಿಬ್ಜಾದಾ ಫರ್ಹಾನ್ (ಕ್ಯಾಪ್ಟನ್), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಅರಾಫತ್ ಮಿನ್ಹಾಸ್, ಫಖರ್ ಜಮಾನ್, ಹಸನ್ ನವಾಜ್, ಖವಾಜಾ ನಾಫೆ (ವಿಕೆಟ್ ಕೀಪರ್), ಮಾಜ್ ಸದಾಕತ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಮೊಹಮ್ಮದ್ ಇಮ್ರಾನ್ ರಂಧಾವಾ, ನಸೀಮ್ ಶಾ, ರಜಾವುಲ್ಲಾ, ಸೈಮ್ ಅಯೂಬ್, ಶಾದಾಬ್ ಖಾನ್, ಸುಫಿಯಾನ್ ಮುಖೀಮ್.

ಪಾಕಿಸ್ತಾನ ಏಕದಿನ ತಂಡ: 

ಶಾಹೀನ್ ಶಾ ಅಫ್ರಿದಿ (ಕ್ಯಾಪ್ಟನ್), ಅಬ್ರಾರ್ ಅಹ್ಮದ್, ಅರಾಫತ್ ಮಿನ್ಹಾಸ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ನವಾಜ್, ಮೊಹಮ್ಮದ್ ಗಾಜಿ ಘೋರಿ (ವಿಕೆಟ್ ಕೀಪರ್), ನಸೀಮ್ ಶಾ, ರಜಾವುಲ್ಲಾ, ಸಾದ್ ಬೇಗ್ (ವಿಕೆಟ್ ಕೀಪರ್), ಸೈಮ್ ಅಯೂಬ್, ಸಲ್ಮಾನ್ ಅಲಿ ಆಘಾ, ಶಾದಾಬ್ ಖಾನ್, ಸುಫಿಯಾನ್ ಮುಖೀಮ್.