ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತ ಕ್ರಿಕೆಟ್ ತಂಡ ಈಗ ವೆಸ್ಟ್‌ಇಂಡೀಸ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಬೌಲಿಂಗ್ ಪಡೆ ವಿಂಡೀಸ್ ಬ್ಯಾಟರ್‌ಗಳನ್ನು ಹೇಗೆ ಎದುರಿಸಲಿದೆ ಎಂಬ ಕುತೂಹಲವಿದೆ.
ಲಖನೌ: ಕೆಲ ದಿನಗಳ ಹಿಂದಷ್ಟೇ ಜಪಾನ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ಪುರುಷರ ಕ್ರಿಕೆಟ್ ತಂಡ, ಈಗ ವೆಸ್ಟ್‌ಇಂಡೀಸ್ ವಿರುದ್ಧ ಟಿ20 ಸರಣಿಗೆ ಸಜ್ಜಾಗಿದೆ. ಮಂಗಳವಾರದಿಂದ ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ.
ವಿಂಡೀಸ್ ವಿರುದ್ಧ ಇತ್ತೀಚೆಗೆ ಕೊನೆಗೊಂಡ ಏಕದಿನ ಸರಣಿಯಲ್ಲಿ ಆಡಿದ್ದ ನಿತೀಶ್ ಕುಮಾರ್, ಕುಲ್ದೀಪ್ ಯಾದವ್, ನಮನ್‌ಧೀರ್ ಈಗ ಟಿ20ಯಲ್ಲೂ ಆಡಲಿದ್ದಾರೆ. ಉಳಿದಂತೆ ಏಷ್ಯಾಡ್‌ನಲ್ಲಿ ಆಡಿದ್ದ ಬಹುತೇಕ ಆಟಗಾರರೇ ಈ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಆದರೆ ಜಸ್‌ಪ್ರೀತ್ ಬುಮ್ರಾಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಸಂಜು, ಅಭಿಷೇಕ್, ವೈಭವ್ ಒಟ್ಟಿಗೆ ಆಡೋದು ಡೌಟ್
ಏಷ್ಯಾಡ್ ಕಠಿಣ ಪಿಚ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಒತ್ತು ನೀಡುವ ನಿಟ್ಟಿನಲ್ಲಿ ಭಾರತ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಮೂವರನ್ನೂ ಆಡಿಸಿತ್ತು. ವೈಭವ್-ಅಭಿಷೇಕ್ ಆರಂಭಿಕರಾಗಿ ಆಡಿದ್ದರೆ, ಸಂಜು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ವಿಂಡೀಸ್ ಸರಣಿಯಲ್ಲಿ ಮೂವರನ್ನೂ ಒಟ್ಟಿಗೆ ಆಡಿಸುವ ಸಾಧ್ಯತೆಯಿಲ್ಲ. ಅಭಿಷೇಕ್ ಆರಂಭಿಕ ಸ್ಥಾನ ಭದ್ರವಾಗಿದ್ದು, ಅವರ ಜೊತೆ ಸಂಜು ಆಡಬಹುದು. ಹೀಗಾದರೆ ವೈಭವ್‌ಗೆ ಸ್ಥಾನವಿಲ್ಲ. ಉಳಿದಂತೆ ನಾಯಕ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ತಿಲಕ್ ವರ್ಮಾ, ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್ ತಂಡದಲ್ಲಿದ್ದಾರೆ.
ತಂಡದಲ್ಲಿ ಅನನುಭವಿ ಬೌಲಿಂಗ್ ಪಡೆ ಇದ್ದು, ಏಕದಿನ ಸರಣಿಯಲ್ಲಿ ಅಬ್ಬರಿಸಿದ್ದ ವಿಂಡೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬ ಕುತೂಹಲವಿದೆ. ಅರ್ಶ್‌ದೀಪ್ ಸಿಂಗ್ ಏಕೈಕ ಅನುಭವಿ ವೇಗಿಯಾಗಿದ್ದು, ಅವರ ಜೊತೆ ಮಯಾಂಕ್ ಯಾದವ್, ಪ್ರಿನ್ಸ್ ಯಾದವ್ ಆಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್, ರವಿ ಬಿಷ್ಣೋಯ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಅಬ್ಬರಿಸಲು ಸಜ್ಜು:
3 ಪಂದ್ಯಗಳ ಏಕದಿನ ಸರಣಿಯಲ್ಲಿ ವಿಂಡೀಸ್ ಬ್ಯಾಟರ್‌ಗಳು ಅಕ್ಷರಶಃ ಅಬ್ಬರಿಸಿದ್ದರು. ಈಗ ಟಿ20 ಸರಣಿಯಲ್ಲೂ ಆತಿಥೇಯ ತಂಡವನ್ನು ಕಾಡಲು ಸಜ್ಜಾಗಿದ್ದಾರೆ. ಶಾಯ್ ಹೋಪ್ ತಂಡದ ನಾಯಕತ್ವ ವಹಿಸಲಿದ್ದು, ರಾಸ್ಟನ್ ಚೇಸ್, ಶಿಮ್ರೋನ್ ಹೆಟ್ಮೇಯರ್, ರೋವ್ಮನ್ ಪೊವೆಲ್, ಶರ್ಪೇನ್ ರುಥರ್‌ಫೋರ್ಡ್, ಶೆಫರ್ಡ್ ಸೇರಿ ಪ್ರಮುಖರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅಕೇಲ್ ಹೊಸೇನ್, ಶಾಮರ್ ಜೋಸೆಫ್ ಇದ್ದಾರೆ.
ಪಂದ್ಯ ಆರಂಭ: ಸಂಜೆ 7 ಗಂಟೆಗೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್
ಭಾರತ-ವಿಂಡೀಸ್ ತಂಡಗಳಿಗೆ ದಂಡ
3ನೇ ಏಕದಿನ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತ, ವಿಂಡೀಸ್ ತಂಡಗಳಿಗೆ ಐಸಿಸಿ ದಂಡ ವಿಧಿಸಿದೆ. ಭಾರತಕ್ಕೆ ಪಂದ್ಯದ ಸಂಭಾವನೆಯ ಶೇ.20, ವಿಂಡೀಸ್‌ಗೆ ಶೇ.10 ದಂಡ ಹೇರಿದೆ.


