2026ರ ಎಸಿಸಿ ಮೆನ್ಸ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಸೆಮಿಫೈನಲ್‌ನಲ್ಲಿ ಭಾರತ 'ಎ' ತಂಡ ಶ್ರೀಲಂಕಾ 'ಎ' ವಿರುದ್ಧ ಸೋತು ಹೊರಬಿದ್ದಿದೆ. ನಾಯಕ ತಿಲಕ್ ವರ್ಮಾ ಆಯ್ದುಕೊಂಡ ನಿರ್ಧಾರವೇ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ACC ಮೆನ್ಸ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಶ್ರೀಲಂಕಾ 'ಎ' ವಿರುದ್ಧ ಭಾರತ 'ಎ' ತಂಡ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಮೊದಲು ಬ್ಯಾಟಿಂಗ್ ಮಾಡಿ 317 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೂ, ಅದನ್ನು ಉಳಿಸಿಕೊಳ್ಳಲು ಟೀಮ್ ಇಂಡಿಯಾಗೆ ಸಾಧ್ಯವಾಗಲಿಲ್ಲ. ಪಂದ್ಯದ ಆರಂಭದಲ್ಲೇ ನಾಯಕ ತಿಲಕ್ ವರ್ಮಾ ತೆಗೆದುಕೊಂಡ ಟಾಸ್ ನಿರ್ಧಾರವೇ ತಂಡಕ್ಕೆ ಮುಳುವಾಯಿತೇ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ.

ಮೊದಲ ಹೆಜ್ಜೆಯಲ್ಲೇ ಎಡವಿದ್ರಾ ಕ್ಯಾಪ್ಟನ್?

ದೋಹಾದ ವೆಸ್ಟ್ ಎಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ನಾಯಕ ತಿಲಕ್ ವರ್ಮಾ ಯಾವುದೇ ಅನುಮಾನವಿಲ್ಲದೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬೃಹತ್ ಮೊತ್ತ ಪೇರಿಸಿ ಶ್ರೀಲಂಕಾ ಮೇಲೆ ಒತ್ತಡ ಹೇರುವುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಹೊನಲು ಬೆಳಕಿನ ಪಂದ್ಯವಾಗಿದ್ದರಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಬ್ಯಾಟಿಂಗ್‌ಗೆ ಸಂಪೂರ್ಣ ಸ್ವರ್ಗವಾಗಿ ಬದಲಾಯಿತು. ಮಧ್ಯಾಹ್ನದ ವೇಳೆ ಚೆಂಡು ಸ್ವಲ್ಪ ನಿಧಾನವಾಗಿ ಬರುತ್ತಿದ್ದರೆ, ರಾತ್ರಿ ವೇಳೆ ಬ್ಯಾಟ್‌ಗೆ ನೇರವಾಗಿ ಬರಲಾರಂಭಿಸಿತು. ಇದರಿಂದ ಭಾರತೀಯ ಬೌಲರ್‌ಗಳ ತಂತ್ರಗಾರಿಕೆ ಸಂಪೂರ್ಣ ವಿಫಲವಾಯಿತು.

ತಿಲಕ್ ವರ್ಮಾ ಲೆಕ್ಕಾಚಾರ ತಪ್ಪಲು ಪ್ರಮುಖ 3 ಕಾರಣಗಳು!

ಎರಡನೇ ಇನ್ನಿಂಗ್ಸ್ ಆರಂಭವಾದ ಕೆಲವೇ ಓವರ್‌ಗಳಲ್ಲಿ ಮೈದಾನದಲ್ಲಿ ಇಬ್ಬನಿ ಬೀಳಲು ಆರಂಭಿಸಿತು. ಒದ್ದೆಯಾದ ಚೆಂಡಿನ ಮೇಲೆ ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಹಿಡಿತ ಸಾಧಿಸಲು ಸಾಧ್ಯವಾಗದೆ, ಎದುರಾಳಿ ಬ್ಯಾಟರ್‌ಗಳಿಗೆ ರನ್ ಗಳಿಸುವುದು ಸುಲಭವಾಯಿತು. ಟಾಸ್ ಗೆದ್ದಾಗ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಶ್ರೀಲಂಕಾ ಆರಂಭಿಕರಾದ ಸಿನೆತ್ ಜಯವರ್ಧನೆ (105) ಮತ್ತು ಲಸಿತ್ ಕ್ರೂಸ್‌ಪುಲ್ಲೆ (116) ಮೊದಲ ವಿಕೆಟ್‌ಗೆ ಕೇವಲ 21.3 ಓವರ್‌ಗಳಲ್ಲಿ 174 ರನ್ ಚಚ್ಚಿದರು. ಈ ಜೊತೆಯಾಟವನ್ನು ಮುರಿಯಲು ನಾಯಕ ತಿಲಕ್ ವರ್ಮಾ ಬೌಲಿಂಗ್ ವಿಭಾಗದಲ್ಲಿ ಆಕ್ರಮಣಕಾರಿ ಬದಲಾವಣೆಗಳನ್ನು ಮಾಡುವಲ್ಲಿ ವಿಫಲರಾದರು. ಹೊಸ ಚೆಂಡಿನಲ್ಲಿ ಅರ್ಷದ್ ಖಾನ್ ದುಬಾರಿಯಾದರೂ (4 ಓವರ್‌ಗಳಲ್ಲಿ 46 ರನ್) ಪರ್ಯಾಯ ತಂತ್ರ ರೂಪಿಸುವಲ್ಲಿ ಹಿನ್ನಡೆಯಾಯಿತು. ಇಬ್ಬನಿಯ ನಡುವೆಯೂ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳಾದ ಹರ್ಷ್ ದುಬೆ ಮತ್ತು ತನುಷ್ ಕೋಟ್ಯಾನ್ ಅವರಿಗೆ ಹೆಚ್ಚಿನ ಓವರ್‌ಗಳನ್ನು ನೀಡಿದ್ದು ಲಂಕಾ ಬ್ಯಾಟರ್‌ಗಳಿಗೆ ವರದಾನವಾಯಿತು.

ನಾಯಕತ್ವದಲ್ಲಿ ನಿರಾಸೆ!

ವೈಯಕ್ತಿಕವಾಗಿ ತಿಲಕ್ ವರ್ಮಾ ಜವಾಬ್ದಾರಿಯುತ 53 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ (317/8) ಕೊಡುಗೆ ನೀಡಿದರು. ಅಭಿಷೇಕ್ ಶರ್ಮಾ (78) ಮತ್ತು ಶಹಬಾಜ್ ಅಹ್ಮದ್ (54) ಕೂಡ ಉತ್ತಮ ಆಟವಾಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ (12) ಔಟಾದ ನಂತರ 350+ ರನ್ ಗಳಿಸುವ ಅವಕಾಶ ಕೈತಪ್ಪಿದ್ದು ಮತ್ತು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಿರ್ಧಾರವು ಅಂತಿಮವಾಗಿ ಭಾರತದ ಫೈನಲ್ ಕನಸನ್ನು ಭಗ್ನಗೊಳಿಸಿತು.