ಟೀಂ ಇಂಡಿಯಾಕ್ಕೆ ಮೊಹಮ್ಮದ್ ಶಮಿ ಮರಳುವ ಬಗ್ಗೆ ದಿನೇಶ್ ಕಾರ್ತಿಕ್ ಅಚ್ಚರಿಯ ಹೇಳಿಕೆ ನೀಡಿದ್ದು, ಭಾರತ ತಂಡ ಶಮಿಯನ್ನು ಬಿಟ್ಟು ಬಹಳ ಮುಂದಕ್ಕೆ ಸಾಗಿದೆ ಎಂದಿದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಚೆನ್ನೈ: ಟೀಂ ಇಂಡಿಯಾಕ್ಕೆ ಮೊಹಮ್ಮದ್ ಶಮಿ ಕಂಬ್ಯಾಕ್ ಮಾಡುವ ಬಗ್ಗೆ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಗಾಯ, ಫಿಟ್‌ನೆಸ್ ಸಮಸ್ಯೆ ಹಾಗೂ ಇತರ ಕಾರಣಗಳಿಂದಾಗಿ ಶಮಿ 2025ರಲ್ಲಿ ಕೊನೆಯ ಬಾರಿಗೆ ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಸದ್ಯ ದೇಶೀಯ ಕ್ರಿಕೆಟ್‌ನಲ್ಲಿ ಅವರು ಭರ್ಜರಿ ಪ್ರದರ್ಶನ ನೀಡುತ್ತಿದ್ದರೂ, ರಾಷ್ಟ್ರೀಯ ತಂಡಕ್ಕೆ ಮರಳುವ ಅವರ ಆಸೆ ದಿನೇ ದಿನೇ ಕಮರುತ್ತಿದೆ.

ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಬದಲಾದರೂ ಶಮಿಯನ್ನು ಮತ್ತೆ ತಂಡಕ್ಕೆ ಕರೆತರುವುದರಲ್ಲಿ ಯಾವುದೇ ಅರ್ಥವಿಲ್ಲ. ಭಾರತೀಯ ತಂಡ ಈಗಾಗಲೇ ಶಮಿಯನ್ನು ಬಿಟ್ಟು ಬಹಳ ಮುಂದಕ್ಕೆ ಸಾಗಿದೆ ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿದ್ದರೂ, ತಂಡದ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಂತಿರಲಿಲ್ಲ. ಹೀಗಿದ್ದರೂ, ಈ ಪರಿಸ್ಥಿತಿಯಲ್ಲಿ ಶಮಿಯನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವುದು ಸರಿಯಾದ ನಿರ್ಧಾರವಲ್ಲ ಎಂಬುದು ಕಾರ್ತಿಕ್ ವಾದ.

ಅಷ್ಟಕ್ಕೂ ದಿನೇಶ್ ಕಾರ್ತಿಕ್ ಹೇಳಿದ್ದೇನು?

"ಇಲ್ಲ, ತಂಡದಲ್ಲಿ ಬೇರೆ ಅತ್ಯುತ್ತಮ ವೇಗಿಗಳಿದ್ದಾರೆ ಎಂದು ನಾನು ಭಾವಿಸುತ್ತೇನೆ. ಭಾರತ ಶಮಿಯನ್ನು ಹಿಂದಿಕ್ಕಿ ಮುಂದಕ್ಕೆ ಸಾಗಿದೆ. ಈಗ ಮತ್ತೆ ಹಿಂದಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಶಮಿ ಎಷ್ಟೇ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರೂ, ನಾನು ಅವರ ಬಗ್ಗೆ ಯೋಚಿಸುತ್ತಿಲ್ಲ" ಎಂದು ಕಾರ್ತಿಕ್ ಹೇಳಿದ್ದಾರೆ. ಸದ್ಯ ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರಗಳಾಗಿದ್ದಾರೆ. ಇದರ ಜೊತೆಗೆ ಗುರ್ನೂರ್ ಬ್ರಾರ್, ಆಕಿಬ್ ನಬಿ ಮತ್ತು ಅಂಶುಲ್ ಕಾಂಬೋಜ್ ಅವರಂತಹ ಯುವ ಪ್ರತಿಭೆಗಳಿಗೂ ಅವಕಾಶಗಳು ಸಿಗುತ್ತಿವೆ.

ರೋ-ಕೊ ಪರ ಡಿಕೆ ಬ್ಯಾಟಿಂಗ್

ಇದೇ ವೇಳೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ ಆಡುವುದನ್ನು ಮುಂದುವರಿಸಬೇಕು ಎಂದು ಕಾರ್ತಿಕ್ ಆಶಿಸಿದ್ದಾರೆ. ಮುಂದಿನ ವರ್ಷದ ವಿಶ್ವಕಪ್ ಬಳಿಕ ಈ ಹಿರಿಯ ಆಟಗಾರರು ನಿವೃತ್ತಿಯಾದರೆ ಏಕದಿನ ಕ್ರಿಕೆಟ್‌ನ ಭವಿಷ್ಯ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಎಚ್ಚರಿಸಿದ್ದಾರೆ. "ಅವರಿಬ್ಬರು ವಿಶ್ವ ಕ್ರಿಕೆಟ್‌ನ ಅತಿದೊಡ್ಡ ಹೆಸರುಗಳು. ವಿಶ್ವ ಕ್ರಿಕೆಟ್‌ನ ಕೇಂದ್ರವಾಗಿರುವ ಭಾರತದಿಂದ ಇಬ್ಬರು ಶ್ರೇಷ್ಠ ಆಟಗಾರರು ನಿರ್ಗಮಿಸಿದರೆ, ಅದು ಖಂಡಿತವಾಗಿಯೂ ದೊಡ್ಡ ಪರಿಣಾಮ ಬೀರಲಿದೆ" ಎಂದು ಕಾರ್ತಿಕ್ ವಿವರಿಸಿದ್ದಾರೆ.

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಈಗಾಗಲೇ 2027ರ ಏಕದಿನ ವಿಶ್ವಕಪ್ ತಾವಾಡಿಲಿರುವ ಕೊನೆಯ ಐಸಿಸಿ ಟೂರ್ನಿಯಾಗಲಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೂಡಾ 2027ರ ಏಕದಿನ ವಿಶ್ವಕಪ್ ಬಳಿಕ ಮತ್ತೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರೆಯುವುದು ಅನುಮಾನ. ಈಗಾಗಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.