ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಜೆರ್ಸಿಯಲ್ಲಿ "ಪಾಕಿಸ್ತಾನ 2025" ಲೋಗೋ ಇರಲಿದೆ ಎಂದು ಬಿಸಿಸಿಐ ದೃಢಪಡಿಸಿದೆ. ಪಂದ್ಯಗಳು ಯುಎಇನಲ್ಲಿ ನಡೆದರೂ ಆತಿಥ್ಯ ಪಾಕಿಸ್ತಾನದ್ದೇ ಆಗಿರುವುದೇ ಇದಕ್ಕೆ ಕಾರಣ. ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
ನವದೆಹಲಿ: ಫೆಬ್ರವರಿ 19ರಿಂದ ಪಾಕಿಸ್ತಾನ ಹಾಗೂ ಯುಎಇನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತ ತಂಡದ ಜೆರ್ಸಿ ಮೇಲೆ ಅಧಿಕೃತ ಲೋಗೋ ಬಳಸುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ. ಅಂದರೆ, ಭಾರತೀಯ ಆಟಗಾರರ ಜೆರ್ಸಿ ಮೇಲೆ ‘ಐಸಿಸಿ ಚಾಂಪಿಯನ್ಸ್ ಟ್ರೋಫ್ರಿ ಪಾಕಿಸ್ತಾನ 2025’ ಎಂದು ಪ್ರಿಂಟ್ ಮಾಡಲಾಗಿರುತ್ತದೆ.
ಭಾರತ ತಂಡ ತನ್ನ ಪಂದ್ಯಗಳನ್ನು ಯುಎಇನಲ್ಲಿ ಆಡಿದರೂ ಟೂರ್ನಿಯ ಆತಿಥ್ಯ ಹಕ್ಕು ಪಾಕಿಸ್ತಾನ ಬಳಿಯೇ ಇರಲಿದೆ. ಹೀಗಾಗಿ ಟೂರ್ನಿಯ ಲೋಗೋನಲ್ಲಿ ಪಾಕಿಸ್ತಾನದ ಉಲ್ಲೇಖವಿರಲಿದೆ.
ಮಂಗಳವಾರವಷ್ಟೇ ಭಾರತ ಆಟಗಾರರ ಜೆರ್ಸಿ ಮೇಲೆ ಪಾಕ್ ಹೆಸರನ್ನು ಹಾಕಲು ಬಿಸಿಸಿಐ ನಿರಾಕರಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕಾರಿಯೊಬ್ಬರು ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದರು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸಾಯ್ಕಿಯಾ ‘ಐಸಿಸಿ ಮಾರ್ಗಸೂಚಿಗಳನ್ನು ನಾವು ಪಾಲಿಸುತ್ತೇವೆ’ ಎಂದಿದ್ದಾರೆ.
ಈಡನ್‌ನಲ್ಲಿ ಇಂಗ್ಲೆಂಡನ್ನು ಚೆಂಡಾಡಿದ ಟೀಂ ಇಂಡಿಯಾ; ಟಿ20 ಸರಣಿಯಲ್ಲಿ ಶುಭಾರಂಭ
ಪಾಕ್‌ಗೆ ರೋಹಿತ್ ಹೋಗ್ತಾರಾ?: ಟೂರ್ನಿ ಆರಂಭಕ್ಕೂ ಮುನ್ನ ಲಾಹೋರ್‌ನಲ್ಲಿ ಐಸಿಸಿ ಎಲ್ಲಾ ತಂಡಗಳ ನಾಯಕರನ್ನು ಒಟ್ಟಿಗೆ ಟ್ರೋಫಿ ಜೊತೆ ನಿಲ್ಲಿಸಿ ಫೋಟೋ ಶೂಟ್ ನಡೆಸಲಿದೆ. ಉದ್ಘಾಟನಾ ಸಮಾರಂಭವನ್ನೂ ಆಯೋಜಿಸಿರುವುದಾಗಿ ತಿಳಿದುಬಂದಿದೆ. ಈ ಕಾರ್ಯಕ್ರಮಗಳಿಗೆ ಭಾರತದ ನಾಯಕ ರೋಹಿತ್ ಶರ್ಮಾರನ್ನು ಕಳುಹಿಸಬೇಕೆ ಬೇಡವೇ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಸಾಯ್ಕಿಯಾ ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ: ದ.ಆಫ್ರಿಕಾಕ್ಕೆ ತೆಂಬಾ ಬವುಮಾ ನಾಯಕತ್ವ
ಜೋಹಾನ್ಸ್‌ಬರ್ಗ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹಿರಿಯ ಆಟಗಾರ ತೆಂಬಾ ಬವುಮಾ ಮುನ್ನಡೆಸಲಿದ್ದಾರೆ. ಗಾಯದ ಕಾರಣದಿಂದ ಕೆಲ ಸರಣಿಗಳಿಗೆ ಅಲಭ್ಯರಾಗಿದ್ದ ವೇಗಿಗಾದ ಏನ್ರಿಚ್ ನೋಕಿಯಾ, ಲುಂಗಿ ಎನ್‌ಗಿಡಿ ತಂಡಕ್ಕೆ ಮರಳಿದ್ದಾರೆ. ಹಿರಿಯ ಆಟಗಾರರಾದ ಡೇವಿಡ್ ಮಿಲ್ಲರ್, ಹೇನ್ರಿಚ್ ಕ್ಲಾಸೆನ್ ತಂಡದಲ್ಲಿದ್ದಾರೆ.
ತಂಡ: ಬವುಮಾ(ನಾಯಕ), ಟೋನಿ ಡೆ ಜೊರ್ಜಿ, ಮಾರ್ಕೊ ಯಾನ್ಸನ್, ಕ್ಲಾಸೆನ್, ಕೇಶವ್ ಮಹಾರಾಜ್, ಮಾರ್ಕ್‌ರಮ್, ಮಿಲ್ಲರ್, ವಿಯಾನ್ ಮುಲ್ಡರ್, ಎನ್‌ಗಿಡಿ, ನೋಕಿಯಾ, ರಬಾಡ, ರ್‍ಯಾನ್ ರಿಕೆಲ್ಟನ್, ತಬ್ರೇಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್, ರಸ್ಸೀ ವ್ಯಾನ್ ಡೆರ್ ಡುಸೆನ್.
ಚಾಂಪಿಯನ್ಸ್ ಟ್ರೋಫಿ ಜರ್ಸಿಯಲ್ಲಿ ಪಾಕಿಸ್ತಾನ ಹೆಸರು ನಿರಾಕರಿಸಿದ ಟೀಂ ಇಂಡಿಯಾ
ಚಾಂಪಿಯನ್ಸ್ ಟ್ರೋಫಿ: ಆಸ್ಟ್ರೇಲಿಯಾಕ್ಕೆ ಮ್ಯಾಕ್ಸಿ, ಪ್ಯಾಟ್ ಕಮಿನ್ಸ್, ಮಾರ್ಷ್
ಸಿಡ್ನಿ: ಫೆಬ್ರವರಿ 19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡ ಪ್ರಕಟಗೊಳಿಸಲಾಗಿದೆ. ಗಾಯದ ನಡುವೆಯೂ ಜೋಶ್ ಹೇಜಲ್‌ವುಡ್, ಪ್ಯಾಟ್ ಕಮಿನ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಮಿನ್ಸ್ ಪಾದ ಗಾಯದಿಂದ ಬಳಲುತ್ತಿದ್ದರೆ, ಹೇಜಲ್‌ವುಡ್ ಸ್ನಾಯುಸೆಳೆತಕ್ಕೆ ತುತ್ತಾಗಿದ್ದಾರೆ. ಇನ್ನು, ಹಿರಿಯ ಆಟಗಾರರಾದ ಸ್ಟೀವ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್ ತಂಡದಲ್ಲಿದ್ದಾರೆ.
ತಂಡ: ಪ್ಯಾಟ್ ಕಮಿನ್ಸ್(ನಾಯಕ), ಅಲೆಕ್ಸ್ ಕೇರಿ, ನೇಥನ್ ಎಲ್ಲಿಸ್, ಆ್ಯರೊನ್ ಹಾರ್ಡೀ, ಹೇಜಲ್‌ವುಡ್, ಹೆಡ್, ಜೋಶ್ ಇಂಗ್ಲಿಸ್, ಲಬುಶೇನ್, ಮಾರ್ಷ್, ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಸ್ಮಿತ್, ಸ್ಟಾರ್ಕ್, ಸ್ಟೋಯ್ನಿಸ್, ಆ್ಯಡಂ ಝಂಪಾ.
