ಬಾಲಿವುಡ್ ನಟರೊಂದಿಗೆ ಯಶ್ ನಟಿಸಿರುವ ಕೆಜಿಎಫ್-2 ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
KGF 2 ಸದ್ಯ ಸುದ್ದಿಯಲ್ಲಿರೋ ಬಹುನಿರೀಕ್ಷಿತ ಚಿತ್ರ. ಯಶ್ (Yash), ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ (Raveena Tandon), ಸಂಜಯ್ ದತ್ತ್ (Sanjay dutt) ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿರೋ ಈ ಸಿನಿಮಾದ ಪ್ರೀಕ್ವಲ್ 2018ರಲ್ಲೇ ಬಂತು. ಆಗ ಕನ್ನಡ ಸಿನಿಮಾ ಇತಿಹಾಸದಲ್ಲೇ ಹೊಸದೊಂದು ಶಕೆ ಶುರುವಾಯ್ತು. ಕನ್ನಡ ಸಿನಿಮಾ ಯಾರು ನೋಡ್ತಾರೆ ಅನ್ನೋ ಮನಸ್ಥಿತಿಯಲ್ಲಿದ್ದ ಭಾರತೀಯ ಚಿತ್ರರಂಗ ಕೆಜಿಎಫ್ ನಲ್ಲಿ ರಾಕಿ ಬಾಯ್ ಅಬ್ಬರಿಸಿದಾಗ ಬೆಚ್ಚಿ ತಿರುಗಿ ನೋಡಿತು. ಆಮೇಲೆ ಈ ಸಿನಿಮಾ ವರ್ಲ್ಡ್ ವೈಡ್ ಗುರುತಿಸಿಕೊಂಡದ್ದು, 250 ಕೋಟಿಗಳಷ್ಟು ಗಳಿಕೆ ಮಾಡಿದ್ದು ಇವೆಲ್ಲ ನಡೆಯಿತು.
ಇದೆಲ್ಲ ಆಗಿ ಭರ್ತಿ ನಾಲ್ಕು ವರ್ಷ ಕಳೆದಿವೆ. ಜನರ ನಿರೀಕ್ಷೆ ಮುಗಿಲು ಮುಟ್ಟುತ್ತಿರುವಾಗಲೇ ಮೂರು ವರ್ಷದ ಕೆಲಸ ಮುಗಿಸಿ ಕೆಜಿಎಫ್ 2 ತೆರೆಗೆ ಬರಲು ಸನ್ನದ್ಧವಾಗಿದೆ. ಏಪ್ರಿಲ್ 14ಕ್ಕೆ ಈ ಚಿತ್ರ ತೆರೆಯ ಮೇಲೆ ಭರ್ಜರಿ ಕಮಾಲ್ ಮಾಡಲಿದೆ. ಈ ಸಿನಿಮಾ ಡಿಫರೆಂಟ್ ಆಗಿದೆ ಅನ್ನೋವಾಗ ಇಡೀ ತಂಡ ಕ್ರಿಯೇಟಿವ್ ಆಗಿರುತ್ತೆ. ಅದು ಮಾಡುವ ಸಣ್ಣ ಸಣ್ಣ ಕೆಲಸಗಳಲ್ಲೂ ಹೊಸತನ, ಅದ್ದೂರಿತನ ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಅದು ಈ ಕೆಜಿಎಫ್ ಟೀಮ್‌ನ ಪ್ರಚಾರದಲ್ಲಿ ಮತ್ತೆ ಸಾಬೀತಾಗುತ್ತಿದೆ. ಇಡೀ ಸಿನಿಮಾರಂಗ ಪ್ರಚಾರಕ್ಕೆ ಒಂದು ದಾರಿ ಆಯ್ಕೆ ಮಾಡಿಕೊಂಡರೆ ಈ ಟೀಮ್ ಮತ್ತೊಂದು ಹಾದಿಯಲ್ಲಿ ಧೈರ್ಯದ ಹೆಜ್ಜೆ ಇಡುತ್ತಿದೆ.
ಯಶ್ v/s ವಿಜಯ್; ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್
ಬೇರೆಲ್ಲರೂ ತಮ್ಮ ಸಿನಿಮಾ ಪ್ರಚಾರಕ್ಕೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ಕರೆಸಿದರೆ ಇವರು ಅಭಿಮಾನಿಗಳಿಂದಲೇ ರಾಕಿಬಾಯ್ ಚಿತ್ರ ಬರೆಸಿ ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳಲು ಹೊರಟಿದೆ. ಉಳಿದೆಲ್ಲ ಸಿನಿಮಾಗಳು ಭರ್ಜರಿಯಾಗಿ ಪ್ರೀ ರಿಲೀಸ್ ಈವೆಂಟ್ ಮಾಡಿದ್ರೆ, ಕೆಜಿಎಫ್ 2 ಟೀಮ್ ಮಾತ್ರ ನಾವು ಪ್ರೀ ರಿಲೀಸ್ ಈವೆಂಟ್ ನಡೆಸಲ್ಲ ಅಂತ ಹೇಳ್ತಿದ್ದಾರೆ. ಇದಕ್ಕೆ ಕಾರಣ ನೀಡುವ ಪ್ರಶಾಂತ್ ನೀಲ್, ಅಪ್ಪು (Puneeth Rajkumar) ಅವರ ನಿಧನದ ಶೋಕದಲ್ಲಿ ನಾವೆಲ್ಲ ಇರುವಾಗ ಈ ರೀತಿ ಗೌಜಿ ಗದ್ದಲ ಮಾಡೋದು ಸರಿ ಇರಲ್ಲ ಅನ್ನೋ ಅರ್ಥದ ಮಾತುಗಳನ್ನು ಹೇಳಿದ್ದಾರೆ. ಇದಕ್ಕೆ ಫ್ಯಾನ್ಸ್ ತಕರಾರು ಇದ್ದೇ ಇದೆ. ಕೆಲವರೆಲ್ಲ ನೀವು ಬರೀ ದುಡ್ಡುಳಿಸೋದಷ್ಟೇ ಆಯ್ತು, ಅದಕ್ಕೆ ತಕ್ಕಂಥಾ ನೆವಗಳೂ ನಿಮಗೆ ಸಿಗುತ್ತವೆ ಅಂತ ಕ್ಲಾಸ್ ತಗೊಂಡದ್ದೂ ಆಯ್ತು. ಆದರೆ ಟೀಮ್ ಗೆ ತಾನೇನು ಮಾಡಬೇಕು ಅನ್ನೋ ಬಗ್ಗೆ ಸ್ಪಷ್ಟತೆ ಇದೆ. ಇದರ ನಡುವೆಯೇ ಇನ್ನೊಂದು ಕಡೆ ಅಭಿಮಾನಿಗಳ ಲೆಕ್ಕಾಚಾರ ಶುರುವಾಗಿದೆ.
ಹೌದು, ಅಭಿಮಾನಿಗಳ, ಸಿನಿಮಾ ಕ್ಷೇತ್ರದ ಮಂದಿ ಇದೀಗ ಈ ಸಿನಿಮಾ ಎಷ್ಟು ದುಡ್ಡು ಮಾಡಬಹುದು ಅನ್ನೋ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಏಕಕಾಲಕ್ಕೆ ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು March 27ಕ್ಕೆ ಟ್ರೇಲರ್ ರಿಲೀಸ್ ಆಗಲಿದೆ. ಆ ಕಾರ್ಯಕ್ರಮವನ್ನೂ ಟೀಮ್ ಅದ್ದೂರಿಯಾಗಿ ಆಚರಿಸಲಿದೆ. ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೊಟೇಲ್ ನಲ್ಲಿ ಈವೆಂಟ್ ನಡೆಯಲಿದ್ದು, ರಾಷ್ಟ್ರದಾದ್ಯಂತದ ವಿವಿಧ ಮಾಧ್ಯಮಗಳ ನೂರಾರು ಪತ್ರಕರ್ತರು ಭಾಗವಹಿಸಲಿದ್ದಾರೆ. ಮಾರ್ಚ್ 27ರ ಸಂಜೆ ಈ ಕಾರ್ಯಕ್ರಮ ನಡೆಯಲಿದ್ದು, ಸಿನಿಮಾ ಟೀಮ್ ಜೊತೆಗೆ ಸಚಿವರು, ಜನಪ್ರಿಯ ನಟ ನಟಿಯರು ಭಾಗವಹಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸುವ ನಿರೀಕ್ಷೆ ಇದೆ. ಸಚಿವ ಅಶ್ವತ್ಥ ನಾರಾಯಣ, ಹೀರೋ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಬಾಲಿವುಡ್ ಕಲಾವಿದರಾದ ಸಂಜಯ್ ದತ್ತ್, ರವೀನಾ ಟಂಡನ್, ಮಲಯಾಳಂನ ಪೃಥ್ವಿರಾಜ್ ಮತ್ತಿತರರು ಭಾಗವಹಿಸಲಿದ್ದಾರೆ.
ಕೆಜಿಎಫ್ 2 ತೂಫಾನ್ ಹಾಡು, ಬಿಡುಗಡೆಯಾದ ಮೊದಲ ದಿನ 4 ಮಿಲಿಯನ್ ವೀಕ್ಷಣೆ!
ಇಡೀ ವಿಶ್ವದ ದಾಖಲೆಯ ಏಳು ಸಾವಿರ ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಅಬ್ಬರಿಸಲಿದೆ. ಕರ್ನಾಟಕದಲ್ಲಿ 450ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆ ಆದರೆ, ವಿವಿಧ ರಾಜ್ಯಗಳ ಸಾವಿರಾರು ಥಿಯೇಟರ್‌ಗಳು ರಾಕಿ ಮಾಡೋ ಮ್ಯಾಜಿಕ್‌ಗೆ ಸಾಕ್ಷಿಯಾಗಲಿದೆ. ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಅನ್ನೋದರ ಬಗ್ಗೆ ಬಿರುಸಿನ ಲೆಕ್ಕಾಚಾರ ಶುರುವಾಗಿದೆ. ಒಂದು ಲೆಕ್ಕಾಚಾರದ ಪ್ರಕಾರ ಇಂಡಿಯಾ ಮಾತ್ರವಲ್ಲದೇ ಜಪಾನ್, ಅಮೆರಿಕಾ ಸೇರಿದಂತೆ 70 ರಾಷ್ಟ್ರಗಳಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರ ಕಡಿಮೆ ಅಂದರೂ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡೋದು ಗ್ಯಾರಂಟಿ. ಗರಿಷ್ಠ ಸಾವಿರ ಕೋಟಿ ರೂ.ಗಳವರೆಗೂ ದೋಚಬಹುದು. ಆದರೆ ಸ್ಟಾರ್ ನಟ ವಿಜಯ್ (Vijay) ನಟನೆಯ ಬೀಸ್ಟ್ (Beast) ಚಿತ್ರವೂ ಕಾಂಪಿಟೀಶನ್‌ನಲ್ಲಿ ಇರೋ ಕಾರಣ ಗಳಿಕೆಗೆ ಸ್ವಲ್ಪ ಮಟ್ಟಿನ ಹೊಡೆತ ಬೀಳೋದನ್ನು ನಿರಾಕರಿಸಲಾಗದು. ಆದರೆ ಕೆಜಿಎಫ್‌ಗೆ ಸದ್ಯಕ್ಕಿರೋ ರೆಸ್ಪಾನ್ಸ್ ನೋಡಿದರೆ ಇದು ಒಂದೇ ದಿನದಲ್ಲಿ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡೋದ್ರಲ್ಲಿ ಅನುಮಾನ ಬೇಡ ಅಂತಾರೆ ಈ ಲೆಕ್ಕಾಚಾರ ಬಲ್ಲವರು.
'KGF 2' ಚಿತ್ರತಂಡದಿಂದ ಅಭಿಮಾನಿಗಳಿಗೆ ಭರ್ಜರಿ ಆಫರ್; ಇಲ್ಲಿದೆ ಮಾಹಿತಿ
