ಹೇಮಾ ಮಾಲಿನಿಯನ್ನು ಮದುವೆಯಾದ ನಂತರವೂ ಬಾಲಿವುಡ್ ನಟ ಧರ್ಮೇಂದ್ರ (Dharmendra), ತಮಗಿಂತ 27 ವರ್ಷ ಚಿಕ್ಕವರಾದ ನಟಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿದ್ದರು. ಈ ವಿಷಯ ತಿಳಿದ ಹೇಮಾ ಮಾಲಿನಿ ಏನು ಮಾಡಿದರು?
ಬಾಲಿವುಡ್‌ನ ಹ್ಯಾಂಡ್‌ಸಮ್ ಹೀರೋ, ಇದೀಗ ಮುಂಬಯಿಯ ಬ್ರೀಚ್ ಕ್ಯಾಂಡ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಧರ್ಮೇಂದ್ರ ಬಗ್ಗೆ ಬಾಲಿವುಡ್‌ನಲ್ಲಿ ವರ್ಣರಂಜಿತ ಕತೆಗಳಿವೆ. ಕನಸಿನ ಕನ್ಯೆ ಹೇಮಾಮಾಲಿನಿಯನ್ನು ಈತ ಮದುವೆಯಾಗಿದ್ದರು. ಅಂಥ ಚೆಲವೆಯನ್ನು ಮದುವೆಯಾದ ಮೇಲೂ, ತನಗಿಂತ 27 ವರ್ಷ ಸಣ್ಣ ಹುಡುಗಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿದ್ದರು ಎಂಬುದು ಹೆಚ್ಚು ಮಂದಿಗೆ ಗೊತ್ತಿರಲಿಕ್ಕಿಲ್ಲ. ಇದು ನಿಜ.
ಬಾಲಿವುಡ್‌ನ ಸುವರ್ಣಯುಗವನ್ನು ಕೇವಲ ಪ್ರತಿಷ್ಠಿತ ಚಿತ್ರಗಳಿಂದ ಮಾತ್ರವಲ್ಲ, ಸಾರ್ವಜನಿಕರ ಆಸಕ್ತಿಯನ್ನು ಸೆಳೆದ ಸೆನ್ಸಿಟಿವ್ ಹಗರಣಗಳಿಂದಲೂ ನೋಡಬಹುದು. ಅಂತಹ ಒಂದು ಕಥೆ ಹಿರಿಯ ನಟ ಧರ್ಮೇಂದ್ರ ಅವರದ್ದಾಗಿತ್ತು. ತಮ್ಮ ತಾರಾಪಟ್ಟದ ಉತ್ತುಂಗದಲ್ಲಿದ್ದಾಗ, ನಟ ಧರ್ಮೇಂದ್ರ ಹೇಮಾ ಮಾಲಿನಿಯನ್ನು ವಿವಾಹವಾದರು. ಅದು ಅವರ ಅಭಿಮಾನಿಗಳಿಗೆ ಎರಡೆರಡು ಆಘಾತ. ಯಾಕೆಂದರೆ ಅದು ಅವರ ಎರಡನೇ ವಿವಾಹ. ಮಾತ್ರವಲ್ಲ, ಹೇಮಾಮಾಲಿನಿಗಾಗಿ ಅವರು ತಮ್ಮ ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಬಂದರು.
1957ರಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದ ಧರ್ಮೇಂದ್ರ, 1970 ರ ದಶಕದಲ್ಲಿ ಅವರ ಹೇಮಾ ಮಾಲಿನಿಯನ್ನು ಪ್ರೀತಿಸಿದರು. ಗಾಸಿಪ್ ಸುದ್ದಿಗಳಲ್ಲಿ ಕಾಣಿಸಿಕೊಂಡರು. ಆ ಸಮಯದಲ್ಲಿ ಅವರ ಸಂಬಂಧ ಬಾಲಿವುಡ್‌ನಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ವಿಷಯಗಳಲ್ಲಿ ಒಂದು. ನಂತರ ಇಬ್ಬರೂ ಮದುವೆಯಾದರು.
1980ರ ದಶಕದಲ್ಲಿ ಧರ್ಮೇಂದ್ರ ಅವರು ತಮಗಿಂತ 27 ವರ್ಷ ಕಿರಿಯರಾದ ಪ್ರತಿಭಾನ್ವಿತ ನಟಿ ಅನಿತಾ ರಾಜ್ ಅವರೊಂದಿಗೆ ಮೋಹಗೊಂಡರು. ಕರಿಷ್ಮಾ ಕುದ್ರತ್ ಕಾ, ಝಲ್ಜಲಾ ಮತ್ತು ಇನ್ಸಾನಿಯತ್ ಕೆ ದುಷ್ಮನ್‌ನಂತಹ ಚಿತ್ರಗಳಲ್ಲಿನ ಅಭಿನಯದ ಮೂಲಕ ಅನಿತಾ ರಾಜ್ ಹೆಸರು ಗಳಿಸಿದ್ದರು. ಅವರಿಬ್ಬರ ವೃತ್ತಿಪರ ಸಂಯೋಗ ಶೀಘ್ರದಲ್ಲೇ ಪರ್ಸನಲ್ ಆಗಿ ವಿಸ್ತರಿಸಿತು. ಇದು ಹೇಮಾಮಾಲಿನಿಯ ಗಮನಕ್ಕೆ ಬರದೇ ಇರಲಿಲ್ಲ. ಇದು ಧರ್ಮೇಂದ್ರನ ವೈವಾಹಿಕ ಜೀವನದಲ್ಲಿ ತೊಂದರೆ ಉಂಟುಮಾಡಿತು.
ಹೇಮಾ ಮಾಲಿನಿಗೆ ತಿಳಿದಾಗ!
ಈ ಸಂಬಂಧದ ಬಗ್ಗೆ ಹೇಮಾ ಮಾಲಿನಿಗೆ ತಿಳಿದಾಗ, ಅವರು ದುಃಖಿತರಾದರು. ನಂತರ ಕಟುವಾಗಿ ಮಧ್ಯಪ್ರವೇಶಿಸಿದರು. ತನ್ನ ದಾಂಪತ್ಯ ಕಾಪಾಡಿಕೊಳ್ಳಲು ತನ್ನ ಪತಿಗೆ ದೃಢವಾದ ಎಚ್ಚರಿಕೆ ನೀಡಿದರು. ಹೇಮಾ ಅವರ ಎಚ್ಚರಿಕೆಯ ಗಂಭೀರತೆಯನ್ನು ಗುರುತಿಸಿದ ಧರ್ಮೇಂದ್ರ, ಅನಿತಾ ಅವರಿಂದ ದೂರವಾದರು. ಕಾಲಾನಂತರದಲ್ಲಿ ಅವರ ಸಂಬಂಧ ಮರೆಯಾಯಿತು. ನಂತರ ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದನ್ನು ನಿಲ್ಲಿಸಿದರು. 1986 ರಲ್ಲಿ ಅನಿತಾ ರಾಜ್ ಚಲನಚಿತ್ರ ನಿರ್ಮಾಪಕ ಸುನಿಲ್ ಹಿಂಗೋರಾನಿ ಅವರನ್ನು ವಿವಾಹವಾದರು. ವದಂತಿಗಳು ನಿಂತುಹೋದವು.
ಆರು ದಶಕಗಳ ವೃತ್ತಿಜೀವನದಲ್ಲಿ ಧರ್ಮೇಂದ್ರ ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮದೇಯಾದ ವಿಶೇಷ ಛಾಪು ಮೂಡಿಸಿದ್ದಾರೆ. 1960ರಲ್ಲಿ ʻದಿಲ್ ಭೀ ತೇರಾ ಹಮ್ ಭೀ ತೇರೆʼ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಪ್ರಾರಂಭವಾಗಿ ಬಂದಿನಿ, ಅನುಪಮಾ, ಶೋಲೆ, ಚುಪ್ಕೆ ಚುಪ್ಕೆ, ಫೂಲ್ ಔರ್ ಪತ್ಥರ್, ಸೀತಾ ಔರ್ ಗೀತಾ, ಯಮ್ಲಾ ಪಗ್ಲಾ ದೀವಾನಾ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಬಾಂದಿನಿ, ಲೈಫ್ ಇನ್ ಎ... ಮೆಟ್ರೋ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್ ಸೇರಿದಂತೆ ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
2025ರ ಆರಂಭದಲ್ಲಿ ಧರ್ಮೇಂದ್ರ ಅವರು ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟನೆಯ ʻತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾʼ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಡಿಸೆಂಬರ್ 25ರಂದು ತೆರೆಕಾಣಲಿರುವ ʻಇಕ್ಕಿಸ್ʼ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.
