ಸದ್ಯ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಹಣ ಬಾಚ್ತಿರುವ ಸಿನಿಮಾ ರಾಮಾಯಣ. ಸಿನಿಮಾ ನೋಡಿ ಬಂದ ಅನೇಕರು ರಾಮನ ಬದಲು ರಾವಣನನ್ನು ಇಷ್ಟಪಡ್ತಿದ್ದಾರೆ. ಇದಕ್ಕಿರುವ ಕಾರಣ ಏನು ಗೊತ್ತಾ?
ರಾಮಾಯಣ ಸಿನಿಮಾ ರಿಲೀಸ್ ಆಗ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಪಾತ್ರಧಾರಿಗಳ ಬಗ್ಗೆ ವಿಪರೀತ ಚರ್ಚೆ ಆಗ್ತಿದೆ. ಕೆಲವರಿಗೆ ರಾಮ ಇಷ್ಟವಾದ್ರೆ ಮತ್ತೆ ಕೆಲವರಿಗೆ ರಾವಣ ಇಷ್ಟವಾಗಿದ್ದಾನೆ. ಅನೇಕ ಮಹಿಳೆಯರು ತಮ್ಮ ಪೋಸ್ಟ್ಗಳು ಮತ್ತು ರೀಲ್ಸ್ಗಳಲ್ಲಿ, ನಾವು ರಾಮನನ್ನು ನೋಡಲು ಹೋದೆವು, ಆದರೆ ರಾವಣನ ವ್ಯಕ್ತಿತ್ವಕ್ಕೆ ಫಿದಾ ಆದೆವು ಎಂಬ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರು ಪೋಸ್ಟ್ ಮಾಡ್ತಿರುವ ಈ ವಿಷ್ಯವನ್ನು ಕೇವಲ ಸಿನಿಮಾ ಕುರಿತ ತಮಾಷೆ ಅಥವಾ ಸೋಷಿಯಲ್ ಮೀಡಿಯಾ ಟ್ರೆಂಡ್ ಅಂತ ನಿರ್ಲಕ್ಷ ಮಾಡ್ದೆ ಅದನ್ನು ಮಾನೋವಿಜ್ಷಾನದ ಜೊತೆ ಹೋಲಿಸಿ ನೋಡೋದು ಮುಖ್ಯ. ಸಿನಿಮಾದಲ್ಲಿ ರಾಮ ಮತ್ತು ರಾವಣನ ಪಾತ್ರಗಳನ್ನು ವಿಭಿನ್ನ ರೀತಿಯಲ್ಲಿ ತೋರಿಸಲಾಗಿದೆ. ರಾಮನ ಸೌಮ್ಯ ಮುಖ, ಕ್ಲೀನ್ ಶೇವ್ ಲುಕ್, ಸಭ್ಯ ಉಡುಗೆ ಮತ್ತು ಸಂಯಮದ ನಡವಳಿಕೆ ಆದರ್ಶ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಮತ್ತೊಂದೆಡೆ ರಾವಣನ ದಟ್ಟವಾದ ಗಡ್ಡ, ಮಸಲ್ಸ್ ಇರುವ ದೇಹ, ಗಂಭೀರ ಧ್ವನಿ, ಡೈಲಾಗ್ ಹೇಳುವಾಗಿನ ಗತ್ತು ಮತ್ತು ಪ್ರಭಾವಶಾಲಿ ಸ್ಕ್ರೀನ್ ಪ್ರೆಸೆನ್ಸ್ ಪ್ರೇಕ್ಷಕರ ಗಮನ ಸೆಳೆಯುತ್ತವೆ.
ರಾವಣನ ವ್ಯಕ್ತಿತ್ವ ಮಹಿಳೆಯರನ್ನು ಆಕರ್ಷಿಸುತ್ತಿರುವುದೇಕೆ?
ಭೋಪಾಲ್ನ ಖ್ಯಾತ ಮನೋವಿಜ್ಞಾನ ತಜ್ಞ ಡಾ. ಸತ್ಯಕಾಂತ್ ತ್ರಿವೇದಿ ಅವರ ಪ್ರಕಾರ, ಇಲ್ಲಿ ಒಂದು ಪ್ರಮುಖ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿಯ ಬಗ್ಗೆ ಆಕರ್ಷಣೆ ಮೂಡುವುದು ಮತ್ತು ಆತನ ನೈತಿಕ ಗುಣಗಳನ್ನು ಗೌರವಿಸುವುದು ಎರಡೂ ಒಂದೇ ರೀತಿಯ ಮನೋವೈಜ್ಞಾನಿಕ ಪ್ರಕ್ರಿಯೆಗಳಲ್ಲ.
ಒಬ್ಬ ವ್ಯಕ್ತಿಯ ದೇಹದ ಆಕಾರ, ಧ್ವನಿ, ಹಾವಭಾವ ಅಥವಾ ಆತ್ಮವಿಶ್ವಾಸ ನಮ್ಮನ್ನು ಆಕರ್ಷಿಸಬಹುದು. ಆದರೆ ಅದರಿಂದ ಅವರ ಆಲೋಚನೆಗಳು ಮತ್ತು ನಡವಳಿಕೆಯನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರ್ಥವಲ್ಲ. ಸಿನಿಮಾದಲ್ಲಿ ಒಂದು ಪಾತ್ರ ಪ್ರಭಾವಶಾಲಿಯಾಗಿ ಕಾಣಿಸಿಕೊಂಡ ಮಾತ್ರಕ್ಕೆ ಅದರ ಗುಣ ಅಥವಾ ನಡವಳಿಕೆಯನ್ನು ಸಮರ್ಥಿಸಿದಂತಾಗುವುದಿಲ್ಲ.
ದೈಹಿಕ ಆಕರ್ಷಣೆಯಲ್ಲಿ ರೂಪ, ಬಣ್ಣ ಮತ್ತು ಹಾವಭಾವಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಸಲ್ಸ್ ಇರುವ ದೇಹ, ಅಗಲವಾದ ಭುಜಗಳು, ಮುಖದ ಆಕಾರ ಮತ್ತು ಗಂಭೀರ ಧ್ವನಿ ಕೆಲವು ಜನರಲ್ಲಿ ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಪ್ರಭಾವದ ಭಾವನೆಯನ್ನು ಮೂಡಿಸಬಹುದು. ಆದರೆ ಇಂತಹ ಬಾಹ್ಯ ಲಕ್ಷಣಗಳನ್ನು ನೋಡಿ ಒಬ್ಬ ವ್ಯಕ್ತಿಯ ನಿಜವಾದ ಶಕ್ತಿ, ಸುರಕ್ಷತೆ ನೀಡುವ ಸಾಮರ್ಥ್ಯ ಅಥವಾ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ.
ಈ ಚರ್ಚೆಯ ಮತ್ತೊಂದು ಆಸಕ್ತಿದಾಯಕ ಅಂಶ ಪುರುಷರ ದೈಹಿಕ ರೂಪ ಮತ್ತು ಅವರ ಸ್ವಂತ ಇಮೇಜ್ಗೆ ಸಂಬಂಧಿಸಿದೆ. ಇತ್ತೀಚಿನ ದಿನಗಳಲ್ಲಿ ಜಿಮ್ಗೆ ಹೋಗುವುದು, ಬಾಡಿ ಬಿಲ್ಡಿಂಗ್ ಮಾಡುವುದು, ಗಡ್ಡ ಬೆಳೆಸುವುದು ಮತ್ತು ಗ್ರೂಮಿಂಗ್ಗೆ ಹೆಚ್ಚಿನ ಗಮನ ನೀಡುವುದು ಹೆಚ್ಚಾಗಿದೆ. ಇದನ್ನು ಕೇವಲ ಫ್ಯಾಷನ್ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆರೋಗ್ಯ ಮತ್ತು ಆತ್ಮವಿಶ್ವಾಸದ ಜೊತೆಗೆ ಸಮಾಜದಲ್ಲಿ ತಮ್ಮ ಇಮೇಜ್ ಉತ್ತಮವಾಗಿರಬೇಕು ಎಂಬ ಬಯಕೆಯೂ ಇದಕ್ಕೆ ಕಾರಣವಾಗಿರಬಹುದು.
ಮನೋವಿಜ್ಞಾನದಲ್ಲಿ ಇದನ್ನು ಸೋಷಿಯಲ್ ವ್ಯಾಲಿಡೇಶನ್ (Social Validation) ಅಂದರೆ ಸಾಮಾಜಿಕ ಮನ್ನಣೆ ಪಡೆಯುವ ಬಯಕೆಗೆ ಹೋಲಿಸಬಹುದು. ಒಬ್ಬ ವ್ಯಕ್ತಿ ತನ್ನನ್ನು ತಾನು ಆಕರ್ಷಕವಾಗಿ ಕಾಣುವುದಷ್ಟೇ ಅಲ್ಲ, ಇತರರು ತನ್ನನ್ನು ಹೇಗೆ ನೋಡುತ್ತಾರೆ ಎಂಬುದನ್ನೂ ತಿಳಿದುಕೊಳ್ಳಲು ಬಯಸುತ್ತಾನೆ. ಸೋಷಿಯಲ್ ಮೀಡಿಯಾ ಈ ಪ್ರವೃತ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಲೈಕ್ಸ್, ಕಾಮೆಂಟ್ಸ್, ಹೊಗಳಿಕೆ ಮತ್ತು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಮೂಲಕ ದೈಹಿಕ ಆಕರ್ಷಣೆ ನಿರಂತರವಾಗಿ ಸಾಮಾಜಿಕ ಪ್ರತಿಕ್ರಿಯೆ ಪಡೆಯುವ ಸಾಧನವಾಗಿದೆ.
ಖ್ಯಾತ ಮನೋವಿಜ್ಞಾನ ತಜ್ಞೆ ಡಾ. ವಿಧಿ ಎಂ. ಪಿಲಾನಿಯಾ ಅವರ ಅಭಿಪ್ರಾಯದ ಪ್ರಕಾರ, ಈ ಸಿನಿಮಾಕ್ಕೆ ಸಂಬಂಧಿಸಿದ ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆಗಳನ್ನು ಮಹಿಳೆಯರ ಆಯ್ಕೆಯಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯ ಪುರಾವೆ ಎಂದು ಪರಿಗಣಿಸುವ ಬದಲು, ಜನಪ್ರಿಯ ಸಂಸ್ಕೃತಿಯಲ್ಲಿ ಪುರುಷತ್ವದ ಚಿತ್ರಣ ಮತ್ತು ಅದಕ್ಕೆ ಪ್ರೇಕ್ಷಕರು ನೀಡುತ್ತಿರುವ ಪ್ರತಿಕ್ರಿಯೆಯಾಗಿ ನೋಡಬೇಕು.














