ಕಾಬೂಲ್‌ನ ವ್ಯಸನಮುಕ್ತ ಕೇಂದ್ರದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಅಮಾನವೀಯ ಕೃತ್ಯದಲ್ಲಿ 400ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ತಾಲಿಬಾನ್ ಎಚ್ಚರಿಸಿದೆ. 

ಕಾಬೂಲ್‌ನ ಓಮಿದ್ ವ್ಯಸನಮುಕ್ತ ಚಿಕಿತ್ಸಾ ಕೇಂದ್ರದ ಮೇಲೆ ಪಾಕಿಸ್ತಾನ ಮಾರ್ಚ್ 16 ರಂದು ನಡೆಸಿದೆ ಎನ್ನಲಾದ ವೈಮಾನಿಕ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇದೊಂದು 'ಅಮಾನವೀಯ' ಮತ್ತು 'ಹೇಡಿತನದ' ಕೃತ್ಯ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ. ಸೇನಾ ನೆಲೆ ಅಲ್ಲದ ಜಾಗದಲ್ಲಿ ನಡೆದ ಈ ದಾಳಿಯಲ್ಲಿ ಅನೇಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನವು ಈ ಘಟನೆಯನ್ನು ಒಂದು ನ್ಯಾಯಸಮ್ಮತ ಸೇನಾ ಕಾರ್ಯಾಚರಣೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ, 'ಮಾರ್ಚ್ 16ರ ರಾತ್ರಿ ಕಾಬೂಲ್‌ನ ಓಮಿದ್ ವ್ಯಸನಮುಕ್ತ ಚಿಕಿತ್ಸಾ ಕೇಂದ್ರದ ಮೇಲೆ ಪಾಕಿಸ್ತಾನ ನಡೆಸಿದ ಅಮಾನವೀಯ ವೈಮಾನಿಕ ದಾಳಿಯನ್ನು ಭಾರತ ಖಂಡಿಸುತ್ತದೆ. ಇದೊಂದು ಹೇಡಿತನದ ಮತ್ತು ಅಕ್ಷಮ್ಯ ಹಿಂಸಾಚಾರ. ಯಾವುದೇ ಕಾರಣಕ್ಕೂ ಸೇನಾ ಗುರಿ ಎಂದು ಸಮರ್ಥಿಸಲಾಗದ ಸ್ಥಳದಲ್ಲಿ ನಡೆದ ಈ ದಾಳಿಯಲ್ಲಿ ದೊಡ್ಡ ಸಂಖ್ಯೆಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನವು ಈಗ ಒಂದು ನರಮೇಧಕ್ಕೆ ಸೇನಾ ಕಾರ್ಯಾಚರಣೆಯ ಬಣ್ಣ ಬಳಿಯಲು ಪ್ರಯತ್ನಿಸುತ್ತಿದೆ' ಎಂದು ತಿಳಿಸಲಾಗಿದೆ.

'ಪಾಕಿಸ್ತಾನದ ಈ ಘೋರ ಆಕ್ರಮಣಕಾರಿ ಕೃತ್ಯವು ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ಸ್ಪಷ್ಟ ಹಲ್ಲೆಯಾಗಿದೆ ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ನೇರ ಬೆದರಿಕೆಯಾಗಿದೆ. ಇದು ಪಾಕಿಸ್ತಾನದ ಅಜಾಗರೂಕ ನಡವಳಿಕೆ ಮತ್ತು ತನ್ನ ಆಂತರಿಕ ವೈಫಲ್ಯಗಳನ್ನು ಗಡಿಯಾಚೆಗಿನ ಹಿಂಸಾಚಾರದ ಮೂಲಕ ಮುಚ್ಚಿಹಾಕುವ ಹತಾಶ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ವಿಶ್ವದಾದ್ಯಂತ ಮುಸ್ಲಿಂ ಸಮುದಾಯಗಳು ಶಾಂತಿ, ಚಿಂತನೆ ಮತ್ತು ಕರುಣೆಯ ಮಾಸವಾಗಿ ಆಚರಿಸುವ ಪವಿತ್ರ ರಂಜಾನ್ ತಿಂಗಳಲ್ಲಿ ಈ ದಾಳಿ ನಡೆದಿರುವುದು ಮತ್ತಷ್ಟು ಖಂಡನೀಯ. ಆಸ್ಪತ್ರೆ ಮತ್ತು ಅದರ ರೋಗಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದನ್ನು ಯಾವುದೇ ಧರ್ಮ, ಯಾವುದೇ ಕಾನೂನು ಮತ್ತು ಯಾವುದೇ ನೈತಿಕತೆ ಸಮರ್ಥಿಸಲು ಸಾಧ್ಯವಿಲ್ಲ' ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

'ಅಂತಾರಾಷ್ಟ್ರೀಯ ಸಮುದಾಯವು ಈ ಕ್ರಿಮಿನಲ್ ಕೃತ್ಯದ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನವು ನಾಗರಿಕರನ್ನು ಗುರಿಯಾಗಿಸುವುದನ್ನು ತಕ್ಷಣವೇ ನಿಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು' ಎಂದು ವಿದೇಶಾಂಗ ಸಚಿವಾಲಯ ಒತ್ತಿ ಹೇಳಿದೆ.

ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಭಾರತವು ತೀವ್ರ ಸಂತಾಪ ಸೂಚಿಸುತ್ತದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತದೆ ಮತ್ತು ಈ ದುರಂತದ ಕ್ಷಣದಲ್ಲಿ ಅಫ್ಘಾನಿಸ್ತಾನದ ಜನರೊಂದಿಗೆ ನಿಲ್ಲುತ್ತದೆ. ನಾವು ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ನಮ್ಮ ಅಚಲ ಬೆಂಬಲವನ್ನು ಪುನರುಚ್ಚರಿಸುತ್ತೇವೆ ಎಂದು ಕಾಬೂಲ್ ಆಸ್ಪತ್ರೆ ದಾಳಿಯ ಕುರಿತ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕಾಬೂಲ್ ಪುನರ್ವಸತಿ ಕೇಂದ್ರದ ಮೇಲಿನ ದಾಳಿಯಲ್ಲಿ 400 ಸಾವು

ಪಾಕಿಸ್ತಾನವು ಕಾಬೂಲ್‌ನ ಡ್ರಗ್ ರಿಹ್ಯಾಬಿಲಿಟೇಶನ್ ಸೆಂಟರ್ ಮೇಲೆ ನಡೆಸಿದೆ ಎನ್ನಲಾದ ವೈಮಾನಿಕ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಅಧಿಕಾರಿಗಳು TOLO ನ್ಯೂಸ್‌ಗೆ ತಿಳಿಸಿದ್ದಾರೆ. ತಡರಾತ್ರಿ ನಡೆದ ಈ ದಾಳಿಯಿಂದಾಗಿ ಭಾರಿ ವಿನಾಶ ಉಂಟಾಗಿದ್ದು, ಮೃತಪಟ್ಟವರಲ್ಲಿ ಹೆಚ್ಚಿನವರು ರೋಗಿಗಳು ಮತ್ತು ಸಿಬ್ಬಂದಿ ಎಂದು ವರದಿಯಾಗಿದೆ.

ಸಾವಿನ ಸಂಖ್ಯೆ ಏರುತ್ತಲೇ ಇದೆ

ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಉಪ ವಕ್ತಾರ ಹಮ್ದುಲ್ಲಾ ಫಿತ್ರತ್ ಅವರ ಪ್ರಕಾರ, ಸಾವಿನ ಸಂಖ್ಯೆ 400ಕ್ಕೆ ತಲುಪಿದ್ದು, ಕನಿಷ್ಠ 250 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಕಾಬೂಲ್‌ನಾದ್ಯಂತ ಆಸ್ಪತ್ರೆಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಹೆಣಗಾಡುತ್ತಿವೆ.

ಅತ್ಯಂತ ಭೀಕರ ನಾಗರಿಕ ದಾಳಿಗಳಲ್ಲಿ ಒಂದು

ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದೂ ಒಂದು ಎಂದು ಬಣ್ಣಿಸಲಾಗಿದೆ. ಈ ದಾಳಿಯ ಪ್ರಮಾಣ ಮತ್ತು ಜೀವಹಾನಿಯು ಈ ವಲಯದಲ್ಲಿನ ಉದ್ವಿಗ್ನತೆಯ ಸಮಯದಲ್ಲಿ ನಾಗರಿಕ ಮೂಲಸೌಕರ್ಯಗಳ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ ಎಂದು ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ.

ಜಾಗತಿಕ ಆಕ್ರೋಶ ಮತ್ತು ಮಾನವ ಹಕ್ಕುಗಳ ಕಳವಳ

ಈ ದಾಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ರಿಚರ್ಡ್ ಬೆನೆಟ್ ಅವರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಉದ್ವಿಗ್ನತೆ ಕಡಿಮೆ ಮಾಡುವಂತೆ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು, ವಿಶೇಷವಾಗಿ ನಾಗರಿಕರು ಮತ್ತು ಆಸ್ಪತ್ರೆಗಳ ರಕ್ಷಣೆಯನ್ನು ಗೌರವಿಸುವಂತೆ ಕಾಬೂಲ್ ಮತ್ತು ಇಸ್ಲಾಮಾಬಾದ್‌ಗೆ ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಪ್ರತಿಷ್ಠಾನವೂ (International Human Rights Foundation) ದಾಳಿಯನ್ನು ಖಂಡಿಸಿದ್ದು, ಸಾರ್ವಜನಿಕ ಸೌಲಭ್ಯಗಳನ್ನು ಗುರಿಯಾಗಿಸಬಾರದು ಎಂದು ಒತ್ತಿ ಹೇಳಿದೆ. ಯಾರು ಹೊಣೆಗಾರರು ಎಂಬುದನ್ನು ನಿರ್ಧರಿಸಲು ಮತ್ತು ನ್ಯಾಯ ಒದಗಿಸಲು ಸ್ವತಂತ್ರ ಅಂತಾರಾಷ್ಟ್ರೀಯ ತನಿಖೆಗೆ ಅದು ಕರೆ ನೀಡಿದೆ.

ಕಾಬೂಲ್ ಮತ್ತು ಇಸ್ಲಾಮಾಬಾದ್ ನಡುವೆ ಹೆಚ್ಚಿದ ಉದ್ವಿಗ್ನತೆ

ಗಡಿ ಉದ್ವಿಗ್ನತೆ ಮತ್ತು ಗಡಿಯಾಚೆಗಿನ ಕಾರ್ಯಾಚರಣೆಗಳಿಂದಾಗಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಬಹಳ ದಿನಗಳಿಂದ ಹದಗೆಟ್ಟಿದೆ. ಹಿಂದಿನ ಘಟನೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರು ಸಾವನ್ನಪ್ಪಿದ್ದು, ಅಫ್ಘಾನಿಸ್ತಾನದೊಳಗೆ ಪ್ರತಿಭಟನೆಗಳಿಗೆ ಕಾರಣವಾಗಿತ್ತು.

ತಾಲಿಬಾನ್ ಎಚ್ಚರಿಕೆಯಿಂದ ಹೆಚ್ಚಿದ ಆತಂಕ

ದಾಳಿಯ ನಂತರ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 'ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಮಾತುಕತೆಯ ಸಮಯ ಮುಗಿದಿದೆ ಮತ್ತು ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು' ಎಂದು ಅವರು ಹೇಳಿದ್ದಾರೆ. ಅವರ ಈ ಮಾತುಗಳು ಪ್ರಾದೇಶಿಕ ವೀಕ್ಷಕರಲ್ಲಿ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಆತಂಕವನ್ನು ಸೃಷ್ಟಿಸಿವೆ.

ಈ ಘಟನೆಯು ಕಾಬೂಲ್ ಮತ್ತು ಇಸ್ಲಾಮಾಬಾದ್ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ನಿರೀಕ್ಷೆಯಿದೆ. 2021ರಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ವಾಪಸಾದ ನಂತರ, ಈ ಘಟನೆಯು ಪ್ರಾದೇಶಿಕ ಸ್ಥಿರತೆಯನ್ನು ಮತ್ತಷ್ಟು ಹಾಳುಮಾಡಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಹೆಚ್ಚಿನ ನಾಗರಿಕರ ಸಾವುನೋವುಗಳನ್ನು ತಡೆಗಟ್ಟಲು ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಪಾಲಿಸುವಂತೆ ಮಾನವ ಹಕ್ಕುಗಳ ಗುಂಪುಗಳು ಮತ್ತು ರಾಜತಾಂತ್ರಿಕರು ಎರಡೂ ಕಡೆಯವರನ್ನು ಒತ್ತಾಯಿಸುತ್ತಿದ್ದಾರೆ.

(ANI ಕೃಪೆಯಿಂದ)