ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪೋಲೊ ಆಡುವಾಗ ಅಸ್ವಸ್ಥರಾದ ಅವರು ಕೊನೆಯುಸಿರೆಳೆದಿದ್ದಾರೆ. ವಿಚ್ಛೇದನದ ನಂತರ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾಗಿದ್ದ ಸಂಜಯ್‌ಗೆ ಮೂರು ಮಕ್ಕಳಿದ್ದರು.
90ರ ದಶಕದ ಖ್ಯಾತ ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ, ದೆಹಲಿ ಮೂಲದ ಉದ್ಯಮಿ ಸಂಜಯ್ ಕಪೂರ್ ಹಠಾತ್ ಆಗಿ ನಿಧನರಾಗಿದ್ದಾರೆ. ಅವರಿಗೆ ಕೇವಲ 53 ವರ್ಷ ವಯಸ್ಸಾಗಿತ್ತು, ಪೋಲೋ ಆಡುವ ವೇಳೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕರೀಷ್ಮ ಜೊತೆಗಿನ ವಿಚ್ಛೇದನದ ನಂತರ ಅವರು ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾಗಿದ್ದರು. ಅವರಿಗೆ ನಟಿ ಕರಿಷ್ಮಾ ಅವರಿಂದ ಒಂದು ಗಂಡು ಒಂದು ಹೆಣ್ಣು ಇಬ್ಬರು ಮತ್ತು ಪ್ರಿಯಾ ಅವರಿಂದ ಮತ್ತೊಬ್ಬ ಹೀಗೆ ಒಟ್ಟು ಮೂರು ಮಕ್ಕಳಿದ್ದರು.
ವರದಿಯ ಪ್ರಕಾರ ಇಂಗ್ಲೆಂಡ್‌ನಲ್ಲಿದ್ದ ಸಂಜಯ್ ಪೋಲೊ ಆಡುತ್ತಿದ್ದಾಗ ಅಸ್ವಸ್ಥರಾಗಿ ನಂತರ ನಿಧನರಾಗಿದ್ದಾರೆ. ಸುಹೇಲ್ ಸೇಥ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಸಂತಾಪ ಸೂಚಿಸಿದ್ದಾರೆ. ಸಂಜಯ್ ಕಪೂರ್ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರು ಇಂದು ಮುಂಜಾನೆ ಇಂಗ್ಲೆಂಡ್‌ನಲ್ಲಿ ನಿಧನರಾಗಿದ್ದಾರೆ. ಅವರ ಕುಟುಂಬ ಮತ್ತು ಅವರ ಸಹೋದ್ಯೋಗಿಗಳಿಗೆ ನನ್ನ ಸಂತಾಪಗಳು ಎಂದು ಅವರು ಟ್ವಿಟ್ ಮಾಡಿದ್ದಾರೆ.
ಅಹ್ಮದಾಬಾದ್ ವಿಮಾನ ದುರಂತಕ್ಕೆ ಸಂತಾಪ ಸೂಚಿಸಿದ್ದ ಕಪೂರ್
ಬದುಕು ಎಷ್ಟು ವಿಚಿತ್ರ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ, ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವಿಗಾಗಿ ಸಂಜಯ್ ಕಪೂರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸಂತಾಪ ಸೂಚಿಸಿದ್ದರು. ಆದರೆ ಈ ಘಟನೆ ನಡೆದು ದಿನ ಕಳೆಯುವ ಮೊದಲೇ ಹೃದಯಾಘಾತಕ್ಕೊಳಗಾಗಿ ಸಂಜಯ್ ಕಪೂರ್ ಕೂಡ ಇಹಲೋಕ ತ್ಯಜಿಸಿದ್ದಾರೆ. ಇದನ್ನು ವಿಧಿ ವಿಪರ್ಯಾಸ ಎನ್ನದೇ ಮತ್ತೇನು ಹೇಳಲು ಸಾಧ್ಯ.
ಇತ್ತೀಚೆಗೆ, ಆಟೋಮೋಟಿವ್ ಸಿಸ್ಟಮ್ಸ್ ತಯಾರಕರಾದ ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷರಾದ ಸಂಜಯ್ ಕಪೂರ್ ಅವರನ್ನು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಉತ್ತರ ಪ್ರದೇಶದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರು ಏಳು ರಾಜ್ಯಗಳಾದ ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಾಖಂಡ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಲ್ಲಿ ಸಿಐಐ ಉತ್ತರ ಪ್ರದೇಶವನ್ನು ಮುನ್ನಡೆಸುವ ಗುರಿಯನ್ನು ಹೊಂದಿದ್ದರು.
ಸಂಜಯ್ ಮತ್ತು ಕರಿಷ್ಮಾ 2003 ರಲ್ಲಿ ವಿವಾಹವಾಗಿದ್ದರು ಮತ್ತು ಆದರೆ ದಾಂಪತ್ಯದಲ್ಲಿ ವಿರಸದ ಕಾರಣಕ್ಕೆ ಜೂನ್ 2016 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ದೆಹಲಿ ಹೈಕೋರ್ಟ್ ದಂಪತಿಗಳು 2005 ರಲ್ಲಿ ವಿಚ್ಛೇದನ ಬಯಸಿದಾಗ ಸಮಸ್ಯೆ ಪರಿಹರಿಸಿಕೊಂಡು ದಾಂಪತ್ಯ ಮುಂದುವರಿಸುವಂತೆ ಸಲಹೆ ನೀಡಿತ್ತು. ಆದರೆ ಸಾಮರಸ್ಯ ಮೂಡದ ಕಾರಣ ಕರಿಷ್ಮಾ 2010 ರಲ್ಲಿ ದೆಹಲಿಯಲ್ಲಿರುವ ತನ್ನ ಮನೆಯಿಂದ ಮುಂಬೈಗೆ ಸ್ಥಳಾಂತರಗೊಂಡರು, ಆ ಸಮಯದಲ್ಲಿ ಅವರ ಕಿರಿಯ ಮಗ ಕಿಯಾನ್ ಜನಿಸಿದರು. 2014 ರಲ್ಲಿ, ಇಬ್ಬರೂ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದರು ಮತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ 2016ರಲ್ಲಿ ವಿಚ್ಚೇದನ ಪಡೆದುಕೊಂಡರು.
