ಸಿನಿಮಾ ಪರದೆಯ ಮೇಲೆ ನೂರಾರು ವಿಲನ್‌ಗಳನ್ನು ಏಕಾಂಗಿಯಾಗಿ ಚಚ್ಚಿ ಹಾಕುವ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣದ ಲೇಕ್ಕಾಚಾರ ಮಾಡುವ 'ದಳಪತಿ' ವಿಜಯ್ ಅವರ ಹಳೆಯ ರಿಪೋರ್ಟ್ ಕಾರ್ಡ್ ಈಗ ಇಡೀ ಸೌತ್ ಇಂಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ದಳಪತಿ ವಿಜಯ್ ಅಂಕಪಟ್ಟಿ ವೈರಲ್!

ಸಿನಿಮಾ ಪರದೆಯ ಮೇಲೆ ನೂರಾರು ವಿಲನ್‌ಗಳನ್ನು ಏಕಾಂಗಿಯಾಗಿ ಚಚ್ಚಿ ಹಾಕುವ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣದ ಲೇಕ್ಕಾಚಾರ ಮಾಡುವ 'ದಳಪತಿ' ವಿಜಯ್ (Thalapathy Vijay) ಅವರ ಹಳೆಯ ರಿಪೋರ್ಟ್ ಕಾರ್ಡ್ ಈಗ ಇಡೀ ಸೌತ್ ಇಂಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹೌದು, ತಮಿಳುನಾಡು ರಾಜಕೀಯದಲ್ಲಿ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿರುವ ಏಕೈಕ ಹೆಸರು ದಳಪತಿ ವಿಜಯ್. ಅವರ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಮೂಲಕ ಭವಿಷ್ಯದ ಮುಖ್ಯಮಂತ್ರಿಯಾಗುವ ಹಾದಿಯಲ್ಲಿರುವ ವಿಜಯ್ ಅವರ 10ನೇ ತರಗತಿಯ ಅಂಕಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ!
ಅಷ್ಟಕ್ಕೂ ಆ ಅಂಕಪಟ್ಟಿಯಲ್ಲಿ ಏನಿದೆ?
ವೈರಲ್ ಆಗಿರುವ ಮಾಹಿತಿಯ ಪ್ರಕಾರ, ವಿಜಯ್ ಅವರು ಶಾಲಾ ದಿನಗಳಲ್ಲಿ ಅಷ್ಟೇನೂ ದೊಡ್ಡ ಟಾಪರ್ ಆಗಿರಲಿಲ್ಲ. ಅವರು ಓರ್ವ 'ಆವರೇಜ್' ಅಂದ್ರೆ ಸರಾಸರಿ ವಿದ್ಯಾರ್ಥಿಯಾಗಿದ್ದರು. ಒಟ್ಟು 1100 ಅಂಕಗಳಿಗೆ ಅವರು ಪಡೆದಿದ್ದು 711 ಅಂಕಗಳು. ಅಂದರೆ ಸುಮಾರು ಶೇಕಡಾ 65 ರಷ್ಟು ಅಂಕಗಳೊಂದಿಗೆ ಅವರು ಉತ್ತೀರ್ಣರಾಗಿದ್ದರು. ಅಚ್ಚರಿಯ ವಿಷಯವೆಂದರೆ, ಎಲ್ಲರಿಗೂ ಕಷ್ಟವೆನಿಸುವ 'ಗಣಿತ'ದಲ್ಲಿ ವಿಜಯ್ ಕೂಡ ಸ್ವಲ್ಪ ಎಡವಿದ್ದರು. 200 ಅಂಕಗಳ ಗಣಿತ ಪರೀಕ್ಷೆಯಲ್ಲಿ ವಿಜಯ್ ಗಳಿಸಿದ್ದು ಕೇವಲ 95 ಅಂಕಗಳನ್ನು ಮಾತ್ರ!
ವಿಜಯ್ ಪಡೆದ ಅಂಕಗಳ ವಿವರ ಹೀಗಿದೆ:
ತಮಿಳು: 155/200 (ತಮ್ಮ ಮಾತೃಭಾಷೆಯಲ್ಲಿ ವಿಜಯ್ ಯಾವಾಗಲೂ ಕಿಂಗ್ ಎಂಬುದಕ್ಕೆ ಇದು ಸಾಕ್ಷಿ)
ಇಂಗ್ಲಿಷ್: 133/200
ಗಣಿತ: 95/200
ವಿಜ್ಞಾನ: 206/300
ಸಮಾಜ ವಿಜ್ಞಾನ: 122/200
ವೈರಲ್ ಆಗುತ್ತಿರುವ ಕಾಮೆಂಟ್‌ಗಳೇನು?
ಈ ಅಂಕಪಟ್ಟಿ ವೈರಲ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮತ್ತು ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. "ಅಂದು ಸ್ಕೂಲ್‌ನಲ್ಲಿ ಮ್ಯಾಥ್ಸ್ ಲೆಕ್ಕಾಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದ ಅದೇ ವಿದ್ಯಾರ್ಥಿ, ಇಂದು ತಮಿಳುನಾಡಿನ ಘಟಾನುಘಟಿ ರಾಜಕಾರಣಿಗಳ ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲು ಮಾಡುತ್ತಿದ್ದಾನೆ" ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇನ್ನು ಕೆಲವರು, "ಕಡಿಮೆ ಅಂಕ ಬಂದ ತಕ್ಷಣ ಜೀವನ ಮುಗಿಯಿತು ಎಂದುಕೊಳ್ಳುವ ವಿದ್ಯಾರ್ಥಿಗಳಿಗೆ ವಿಜಯ್ ಅವರ ಈ ಯಶಸ್ಸಿನ ಕಥೆಯೇ ಒಂದು ದೊಡ್ಡ ಸ್ಫೂರ್ತಿ" ಎನ್ನುತ್ತಿದ್ದಾರೆ.
ಮಾಕ್ಸ್ ಕಾರ್ಡ್ ಕೇವಲ ಕಾಗದದ ಚೂರು!
ವಿಜಯ್ ಅವರ ಅಂಕಪಟ್ಟಿ ವೈರಲ್ ಆಗಲು ಕಾರಣ ಅವರ ಕಡಿಮೆ ಅಂಕಗಳಲ್ಲ, ಬದಲಾಗಿ ಆ ಅಂಕಗಳನ್ನು ಮೀರಿ ಅವರು ಬೆಳೆದಿರುವ ಎತ್ತರ. ಶಾಲೆಯಲ್ಲಿ ಓರ್ವ ಶಿಸ್ತಿನ ಮತ್ತು ಸರಾಸರಿ ವಿದ್ಯಾರ್ಥಿಯಾಗಿದ್ದ ವಿಜಯ್, ಇಂದು ಕೋಟ್ಯಂತರ ಜನರ ಆರಾಧ್ಯ ದೈವ. ಬೆಳ್ಳಿಪರದೆಯ ಮೇಲೆ ಮ್ಯಾಜಿಕ್ ಮಾಡಿದವರು ಈಗ ಮುಖ್ಯಮಂತ್ರಿ ಕುರ್ಚಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ, ವಿಜಯ್ ಅವರ ಈ ವೈರಲ್ ಅಂಕಪಟ್ಟಿ ಒಂದು ಮಾತನ್ನಂತೂ ಸಾಬೀತುಪಡಿಸಿದೆ: "ನಿಮ್ಮ ಅಂಕಪಟ್ಟಿ ನಿಮ್ಮ ಯೋಗ್ಯತೆಯನ್ನು ನಿರ್ಧರಿಸುವುದಿಲ್ಲ, ನಿಮ್ಮ ಶ್ರಮ ಮತ್ತು ಛಲವಿದ್ದರೆ ಮಾತ್ರ ಆಕಾಶವೇ ಮಿತಿ". ಅಂದು ಲೆಕ್ಕದಲ್ಲಿ ತಡವರಿಸಿದ್ದ ಅದೇ ಕೈಗಳು ಇಂದು ಹೊಸ ತಮಿಳುನಾಡಿನ ಇತಿಹಾಸ ಬರೆಯಲು ಸಜ್ಜಾಗಿರುವುದು ನಿಜಕ್ಕೂ ರೋಚಕ!


