'ನನಗೆ ಯಶಸ್ಸು ಎಂದರೆ ಅದು ಕೇವಲ ಹೊರಗಿನ ಪ್ರಸಿದ್ಧಿಯಲ್ಲ, ಬದಲಾಗಿ ನಮ್ಮ ಒಳಗಿನ ನೆಮ್ಮದಿ. ನನ್ನನ್ನು ಪ್ರೀತಿಸುವ ಕೆಲವೇ ಕೆಲವು ಆತ್ಮೀಯ ವ್ಯಕ್ತಿಗಳು ಜೊತೆಗಿದ್ದರೆ, ನನ್ನ ಬಗ್ಗೆ ನನಗೆ ಸರಿಯಾದ ಅರಿವಿದ್ದರೆ ಅದೇ ದೊಡ್ಡ ಯಶಸ್ಸು'. ಇನ್ನೂ ಏನಂದ್ರು ನೋಡಿ..
ಬ್ರೇಕಪ್ ಗಾಸಿಪ್‌ಗಳ ನಡುವೆ ಮೌನ ಮುರಿದ ತಾರಾ ಸುತಾರಿಯಾ!
ಮುಂಬೈ: ಬಾಲಿವುಡ್‌ನ ಗ್ಲಾಮರಸ್ ನಟಿ ತಾರಾ ಸುತಾರಿಯಾ (Tara Sutaria) ಕಳೆದ ಕೆಲವು ಸಮಯದಿಂದ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಉದ್ಯಮಿ ವೀರ್ ಪಹರಿಯಾ (Veer Pahariya) ಅವರೊಂದಿಗೆ ತಾರಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಈ ಎಲ್ಲಾ ಗಾಸಿಪ್‌ಗಳು ಮತ್ತು ಟೀಕೆಗಳ ನಡುವೆ ತಾರಾ ಸುತಾರಿಯಾ ಈಗ ಮೊದಲ ಬಾರಿಗೆ ಮೌನ ಮುರಿದಿದ್ದು, ತಮ್ಮ ಮನಸ್ಸಿನ ಶಾಂತಿ ಮತ್ತು ಯಶಸ್ಸಿನ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ತಾರಾ, "ನನಗೆ ಯಶಸ್ಸು ಎಂದರೆ ಅದು ಕೇವಲ ಹೊರಗಿನ ಪ್ರಸಿದ್ಧಿಯಲ್ಲ, ಬದಲಾಗಿ ನಮ್ಮ ಒಳಗಿನ ನೆಮ್ಮದಿ. ನನ್ನನ್ನು ಪ್ರೀತಿಸುವ ಕೆಲವೇ ಕೆಲವು ಆತ್ಮೀಯ ವ್ಯಕ್ತಿಗಳು ಜೊತೆಗಿದ್ದರೆ, ನನ್ನ ಬಗ್ಗೆ ನನಗೆ ಸರಿಯಾದ ಅರಿವಿದ್ದರೆ ಅದೇ ದೊಡ್ಡ ಯಶಸ್ಸು. ಬಾಲ್ಯದಿಂದಲೇ ನಾನು ಕ್ಯಾಮೆರಾ ಕಣ್ಣುಗಳ ಮುಂದೆ ಬೆಳೆದವಳು, ಹಾಗಾಗಿ ಇಂತಹ ಲೈಮ್‌ಲೈಟ್ ಮತ್ತು ಗಾಸಿಪ್‌ಗಳ ನಡುವೆ ಹೇಗೆ ಶಾಂತವಾಗಿ ಇರಬೇಕು ಎಂಬುದು ನನಗೆ ಚೆನ್ನಾಗಿ ತಿಳಿದಿದೆ" ಎಂದು ಹೇಳಿದ್ದಾರೆ.
ಖಡಕ್ ಸಂದೇಶ
ತಮ್ಮ ಮತ್ತು ವೀರ್ ಪಹರಿಯಾ ಅವರ ಬ್ರೇಕಪ್ ವದಂತಿಗಳ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದಿದ್ದರೂ, ತಾರಾ ಒಂದು ಖಡಕ್ ಸಂದೇಶ ನೀಡಿದ್ದಾರೆ. "ಜನರು ನನ್ನ ಬಗ್ಗೆ ಏನೇ ಮಾತನಾಡಿಕೊಳ್ಳಲಿ, ನಾನು ಪ್ರತಿ ಬಾರಿಗೂ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಲು ಹೋಗುವುದಿಲ್ಲ. ನನಗೆ ಸತ್ಯ ಏನೆಂದು ಗೊತ್ತು ಮತ್ತು ನನ್ನ ಅತ್ಯಂತ ಆಪ್ತರಿಗೆ ಸತ್ಯದ ಅರಿವಿದೆ. ಅಷ್ಟು ಸಾಕು, ಬೇರೆಯವರಿಗೆ ನಾನು ವಿವರಣೆ ನೀಡುವ ಅಗತ್ಯವಿಲ್ಲ. ನಮ್ಮ ನರಮಂಡಲವನ್ನು (Nervous System) ಹೇಗೆ ಶಾಂತಗೊಳಿಸಬೇಕು ಎಂಬುದು ನಮಗೆ ಮಾತ್ರ ತಿಳಿದಿರುತ್ತದೆ" ಎಂದು ಪ್ರಬುದ್ಧವಾಗಿ ಉತ್ತರಿಸಿದ್ದಾರೆ.
ಗಾಯಕ ಎಪಿ ಧಿಲ್ಲೋನ್
ಕಳೆದ ವರ್ಷ ಗಾಯಕ ಎಪಿ ಧಿಲ್ಲೋನ್ ಅವರ ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ತಾರಾ ಕಾಣಿಸಿಕೊಂಡ ನಂತರ ವೀರ್ ಮತ್ತು ಅವರ ನಡುವೆ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಂದಿನಿಂದ ಇಂದಿನವರೆಗೆ ಈ ಜೋಡಿ ಒಟ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇಷ್ಟೆಲ್ಲಾ ಗಾಸಿಪ್‌ಗಳಿದ್ದರೂ ತಾರಾ ಮಾತ್ರ ತಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ.
ಸದ್ಯ ತಾರಾ ಸುತಾರಿಯಾ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ಟಾಕ್ಸಿಕ್' (Toxic – A Fairy Tale for Grown-Ups) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ 'ರಾಕಿಂಗ್ ಸ್ಟಾರ್' ಯಶ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ತಾರಾ ಕೂಡ ಒಂದು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಇದೆ. 2026ರ ಮಾರ್ಚ್ 19 ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ.
ವೈಯಕ್ತಿಕ ಜೀವನದ ಏರಿಳಿತಗಳನ್ನು ಮೆಟ್ಟಿ ನಿಂತು, ತಮ್ಮ ಕೆಲಸದ ಮೂಲಕವೇ ಉತ್ತರ ನೀಡಲು ಸಜ್ಜಾಗಿರುವ ತಾರಾ ಸುತಾರಿಯಾ ಅವರ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. "ಸತ್ಯ ತಿಳಿಯದವರ ಮಾತುಗಳಿಗೆ ತಲೆಕೆಡಿಸಿಕೊಳ್ಳಬಾರದು" ಎಂಬ ಅವರ ನಿಲುವು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


