ದರ್ಶನ್‌ನಂತೆ ಕೊಲೆ ಕೇಸಲ್ಲಿ ಜೈಲು ಸೇರಿದ್ದ ತಮಿಳು ‘ಸೂಪರ್ ಸ್ಟಾರ್’
ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಕರಾಳ ಕತೆಗಳು ಒಂದೊಂದಾಗಿ ಬಯಲಾಗುತ್ತಿದೆ. ಇತ್ತ ಪೊಲೀಸರ ವಿಚಾರಣೆ ಎದುರಿಸುತ್ತಿರುವ ದರ್ಶನ್ ಹಾಗೂ ಗ್ಯಾಂಗ್ ಹೈರಾಣಾಗಿದೆ. ಇದರ ನಡುವೆ ದರ್ಶನ್ ರೀತಿ ಕೊಲೆ ಪ್ರಕರಣದಲ್ಲಿ ಸೂಪರ್ ಸ್ಟಾರ್ ಜೈಲುಪಾಲಾದ ಘಟನೆ ಇದೀಗ ಮುನ್ನಲೆಗೆ ಬಂದಿದೆ. ಯಾರು ಆ ಸೂಪರ್ ಸ್ಟಾರ್?
ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದು ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗವನ್ನೇ ತಲ್ಲಣಗೊಳಿಸಿದೆ. ಅಪಾರ ಅಭಿಮಾನಿಗಳ ಬಳಗ ಹೊಂದಿರೋ ಸ್ಟಾರ್ ನಟನೊಬ್ಬ, ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದು ಈಗಿನ ಚಿತ್ರೋದ್ಯಮಕ್ಕೆ, ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ. ಆದ್ರೆ, ಇಂತಹದ್ದೇ ಕೊಲೆ ಕೇಸ್ ಒಂದರಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ ನಟನೊಬ್ಬ ಜೈಲು ಸೇರಿದ್ದ ಕಥೆ ಮತ್ತೆ ಮುನ್ನಲೆಗೆ ಬಂದಿದೆ. ಈ ತಮಿಳುನಟ ಜೈಲು ಸೇರಿದ್ದು ಥೇಟ್ ಸಿನಿಮಾ ಕಥೆಯಂತೆಯೇ ಇದೆ. ಎಂಟು ದಶಕಗಳ ಹಿಂದಿನ ಈ ಘಟನೆ ಸೂಪರ್ ಸ್ಟಾರ್ ನಟನ ಚಿತ್ರಬದುಕನ್ನೇ ನುಂಗಿ ಹಾಕಿ ಬೀದಿಗೆ ಎಸೆದಿತ್ತು.
ಮಾಯಾವರಂ ಕೃಷ್ಣಸಾಮಿ ತ್ಯಾಗರಾಜ ಭಾಗವತರು ಅಲಿಯಾಸ್ ಎಂ.ಕೆ. ತ್ಯಾಗರಾಜ ಭಾಗವತರ್. ತಮಿಳು ಚಿತ್ರರಂಗದ ಮೊಟ್ಟಮೊದಲ ಸೂಪರ್ ಸ್ಟಾರ್. 1944ರಲ್ಲಿ ಟಾಲಿವುಡ್ನಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ಮನೆಮಾತಾಗಿದ್ದವರು ಭಾಗವತರ್. ದುಬಾರಿ ಸಂಭಾವನೆ ಪಡೆಯುತ್ತಿದ್ದ ಏಕೈಕ ನಟ. ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಗಾಯಕರಾಗಿದ್ದ ಭಾಗವತರ್, ಸ್ವತಃ ತಾವೇ ಬರೆದು ಹಾಡುತ್ತಿದ್ದರು. ಅವರ ಸಂಗೀತ ಕಛೇರಿಗಳಿಗೆ ಇನ್ನಿಲ್ಲದ ಡಿಮ್ಯಾಂಡ್.
ನಟ ದರ್ಶನ್ ಮನೆಯಲ್ಲಿದ್ದ ಮೂರು ಬೈಕ್‌ಗಳು ಜಪ್ತಿ: ಕಾರಣವೇನು?
1934 ರಿಂದ 1959ರೊಳಗೆ ಭಾಗವತರ್ ನಟಿಸಿದ್ದು ಕೇವಲ 14 ಸಿನಿಮಾ. ಅದರಲ್ಲಿ 10 ಚಿತ್ರಗಳು ಸೂಪರ್ ಹಿಟ್. 1944ರಲ್ಲಿ ಭಾಗವತರ್ ಅಭಿನಯಿಸಿದ್ದ ‘ಹರಿದಾಸ್’ ಚಿತ್ರ ಮದ್ರಾಸಿನ ಬ್ರಾಡ್ ವೇ ಥಿಯೇಟರ್ನಲ್ಲಿ ಸತತ ಮೂರು ವರ್ಷ ಯಶಸ್ವಿ ಪ್ರದರ್ಶನ ಕಂಡ ದಾಖಲೆಯ ಪುಟ ಸೇರಿತ್ತು.
ಇವರ ಪ್ರತಿ ಚಿತ್ರದಲ್ಲೂ ಹಾಸ್ಯನಟನಾಗಿ ಕಾಣಿಸಿಕೊಳ್ಳುತ್ತಿದ್ದವರು ಎನ್.ಎಸ್. ಕೃಷ್ಣನ್. ಇವರಿಬ್ಬರ ಜೋಡಿ ತಮಿಳು ಚಿತ್ರರಸಿಕರ ಮನಸೂರೆಗೊಂಡಿತ್ತು. ಕೃಷ್ಣನ್ ಹಾಸ್ಯನಟನೆಗೆ ಫಿದಾ ಆಗಿದ್ದ ತಮಿಳರು, ಪ್ರೀತಿಯಿಂದ ‘ಚಾರ್ಲಿ ಚಾಪ್ಲಿನ್’ ಎನ್ನುತ್ತಿದ್ದರು. ಇವರಿಬ್ಬರಿದ್ದ ಎಲ್ಲ ಚಿತ್ರಗಳೂ ಹಿಟ್. ಜನಪ್ರಿಯತೆ, ದುಡ್ಡು, ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿದ್ದ ಭಾಗವತರ್ ಬಗ್ಗೆ ತಮಿಳು ಚಿತ್ರರಂಗದಲ್ಲಿ ದಂತಕಥೆಗಳೇ ಇವೆ. ಪ್ರತಿದಿನ ಭಾಗವತರ್ ಗುಲಾಬಿ ಹೂವಿನಿಂದ ತುಂಬಿದ ನೀರಿನಲ್ಲೇ ಸ್ನಾನ ಮಾಡುತ್ತಿದ್ದರಂತೆ. ಪ್ರತಿ ದಿನವೂ ಮೀನೂಟವೇ ಬೇಕಿತ್ತು. ಅದಕ್ಕೇ ಪ್ರತಿದಿನವೂ ಫ್ಲೈಟ್ ನಲ್ಲಿ ಮದ್ರಾಸ್ನಿಂದ ತಿರುಚಿಗೆ ಹೋಗಿ ಮೀನೂಟ ಮಾಡಿಕೊಂಡು ಬರುತ್ತಿದ್ದರಂತೆ.
ಇಂಥ ಭಾಗವತರ್ಗೆ ಥೇಟ್ ನಮ್ಮ ದರ್ಶನ್ರಂತೆಯೇ ತಲೆತಿರುಗಿ ಬಿಟ್ಟಿತು. ಸಣ್ಣ ಟೀಕೆಯನ್ನೂ ಸಹಿಸದ ಮನಸ್ಥಿತಿಗೆ ಬಂದುಬಿಟ್ಟಿದ್ದರು ಭಾಗವತರ್. ಅವರು ಮಾಡಿದ್ದೇ ಸಿನಿಮಾ, ಹೇಳಿದ್ದೇ ಡೈಲಾಗ್. ಪ್ರಶ್ನಿಸುವವರೇ ಇಲ್ಲದಂತಾಗಿತ್ತು. ಇಂಥ ಭಾಗವತರ್ ಅಹಂ ಅಡಗಿಸಿದ್ದು ಒಬ್ಬ ಪತ್ರಕರ್ತ. ಆತನ ಹೆಸರು ಲಕ್ಷ್ಮೀಕಾಂತನ್. ಟ್ಯಾಬ್ಲಾಯ್ಡ್ ಪತ್ರಿಕೆ ನಡೆಸುತ್ತಿದ್ದ ಲಕ್ಷ್ಮೀಕಾಂತನ್, ಭಾಗವತರ್ ಚಿತ್ರಗಳ ಕಟು ವಿಮರ್ಶಕರಾಗಿದ್ದರು. ಅವರ ಲೇಖನಗಳು ಸೂಪರ್ ಸ್ಟಾರ್ ಭಾಗವತರ್ರನ್ನು ಕೆರಳಿಸಿತ್ತು. ಲಕ್ಷ್ಮೀಕಾಂತನ್ಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದ ಭಾಗವತರ್, ಆರುಮುಗಂ ಮತ್ತು ನಾಗಲಿಂಗಂ ಎಂಬುವರಿಗೆ ಸುಪಾರಿ ಕೊಟ್ಟಿದ್ದರಂತೆ.
ನವೆಂಬರ್ 8, 1944 ರಂದು ಆರ್ಮುಗಂ ಮತ್ತು ನಾಗಲಿಂಗಂ ಪಟಾಲಂ, ಲಕ್ಷ್ಮೀಕಾಂತನ್ ಮೇಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮೀಕಾಂತನ್, ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಲಕ್ಷ್ಮೀಕಾಂತನ್ ಕೊಲೆ ಕೇಸ್‌ನಲ್ಲಿ ಭಾಗವತರನ್ನು ಆರೋಪಿ ಎಂದು ಘೋಷಿಸಿ 30 ತಿಂಗಳು (ಎರಡೂವರೆ ವರ್ಷ) ಜೈಲುಶಿಕ್ಷೆ ವಿಧಿಸಿತು. ತಮಿಳರ ಆರಾಧ್ಯದೈವವಾಗಿದ್ದ ಭಾಗವತರ್, ಅಂಡಮಾನ್ ಜೈಲಿನಲ್ಲಿ ಎರಡೂವರೆ ವರ್ಷ ಕಳೆಯಬೇಕಾಯ್ತು.
ದರ್ಶನ್ ಬಂಧನದ ಬಗ್ಗೆ ತನ್ನದೇ ಶೈಲಿಯಲ್ಲಿ ಉತ್ತರ ಕೊಟ್ಟ ಸನ್ನಿ ಲಿಯೋನ್
ಸೂಪರ್ಸ್ಟಾರ್ ಒಬ್ಬ ಜೈಲು ಸೇರಿದ್ದು ಭಾರತೀಯ ಚಿತ್ರರಂಗವನ್ನೂ ಅಂದೂ ಆಘಾತಕ್ಕೀಡು ಮಾಡಿತ್ತು. ಭಾಗವತರ್ ಜೈಲು ಸೇರುತ್ತಿದ್ದಂತೆ, ಸಹಿ ಹಾಕಿದ್ದ ಸುಮಾರು 12 ಚಿತ್ರಗಳ ಚಿತ್ರೀಕರಣ ಸ್ಥಗಿತಗೊಂಡಿತು. ಬಿಡುಗಡೆಯಾಗಿದ್ದ ಚಿತ್ರಗಳೂ ನೆಲಕಚ್ಚಿದವು. ನಿರ್ದೋಷಿಯಾಗಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದರೂ, ತಮಿಳು ಚಿತ್ರರಂಗದಲ್ಲಿ ಭಾಗವತರ್ ತಮ್ಮ ಪ್ರಾಬಲ್ಯ ಕಳೆದುಕೊಂಡಿದ್ದರು. ಮೊದಲಿನಂತೆ ಅವಕಾಶಗಳು ಸಿಗಲಿಲ್ಲ. ಜನಪ್ರಿಯತೆಯೂ ಕುಂದಿತ್ತು. ಆನಂತರ ನಟಿಸಿದ ಚಿತ್ರಗಳೂ ಹಿಟ್ ಆಗಲಿಲ್ಲ. ಭಾಗವತರ್ ಹಾಕಿಕೊಂಡು ಚಿತ್ರ ನಿರ್ಮಿಸಲು ನಿರ್ಮಾಪಕರು ಮುಂದೆ ಬರಲಿಲ್ಲ. ಭಾಗವತರ್ ಜೈಲಿನ ಹೊರಬರುವಷ್ಟರಲ್ಲಿ ತಮಿಳು ಚಿತ್ರರಂಗದಲ್ಲಿ ಹೊಸ ನಟರು ಆವರಿಸಿಕೊಂಡಿದ್ರು. ಭಾಗವತರ್ ಜೈಲು ಸೇರಿದ ಪರಿಣಾಮ, ನಮ್ಮ ಕನ್ನಡದ ಹೊನ್ನಪ್ಪ ಭಾಗವತರ್ ಅವರಿಗೆ ತಮಿಳಿನಲ್ಲಿ ಅವಕಾಶಗಳು ಹುಡುಕಿಕೊಂಡು ಬರತೊಡಗಿದವು. ಆದ್ರೆ, ತ್ಯಾಗರಾಜನ್ ಭಾಗವತರರ ಅಭಿಮಾನಿಯಾಗಿದ್ದ ಹೊನ್ನಪ್ಪ ಭಾಗವತರ್, ಚಿತ್ರದಲ್ಲಿ ನಟಿಸುವುದಕ್ಕಿಂತ ಮುಂದೆ ಭಾಗವತ್ರ ಒಪ್ಪಿಗೆ ಪಡೆಯುತ್ತಿದ್ದರಂತೆ. ಅವಕಾಶವಿಲ್ಲದೇ ಕಷ್ಟದ ಜೀವನ ಸಾಗಿಸುತ್ತಿದ್ದ ಭಾಗವತರ್, ವಿಧಿ ಇಲ್ಲದೇ ಹಾಡುಗಾರನಾಗಿ ಮುಂದುವರಿಯಲು ನಿರ್ಧರಿಸಿದ್ರು. ದೇಶದುದ್ದಕ್ಕೂ ದೇವಾಲಯಗಳಿಗೆ ತೆರಳಿ ಕಛೇರಿ ನೀಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಭಾಗವತರ್ ತಮ್ಮ 49ನೇ ವಯಸ್ಸಿಗೆ ಕೊನೆಯುಸಿರೆಳೆದರು.
ನಟನಾಗಿ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೂ, ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನಿಕರಾಗಿ ದೇಣಿಗೆ ಸಂಗ್ರಹಿಸಲು ಉಚಿತ ಸಂಗೀತ ಕಛೇರಿ ನಡೆಸಿಕೊಟ್ಟಿದ್ದು ಗಮನಾರ್ಹ. ಜನಪ್ರಿಯತೆ, ಸ್ಟಾರ್ ಡಮ್, ದುಡ್ಡಿನ ಅಮಲಿನಿಂದ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ಬಂದರೂ ತ್ಯಾಗರಾಜನ್ ಭಾಗವತರ್, ತಮಿಳು ಚಿತ್ರರಂಗದಲ್ಲಿ ಚರಿತ್ರಾರ್ಹರಾಗಿಯೇ ಉಳಿದಿದ್ದಾರೆ. ಅವರ ಹಾಡುಗಳೂ ಈಗಲೂ ಸಂಗೀತ ರಚಿಸಿಕರ ಮನ, ಮನೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.