ಅಪಘಾತದಲ್ಲಿ ತಂದೆ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ವಿಜೇತ ಯುವ ನಟ ಶವವಾಗಿ ಪತ್ತೆ, ಭಾರಿ ಭರವಸೆ ಮೂಡಿಸಿದ್ದ 30 ವರ್ಷದ ಯುವ ನಟನ ದುರಂತ ಅಂತ್ಯ ಇಡೀ ಸಿನಿಮಾ ರಂಗಕ್ಕೆ ಆಘಾತ ನೀಡಿದೆ. ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗಿದೆ.
ತಿರುವನಂತಪುರಂ (ಡಿ.12) ರಾಜ್ಯ ಪ್ರಶಸ್ತಿ ವಿಜೇತನ ಯುವ ನಟ ಅಖಿಲ್ ವಿಶ್ವನಾಥ್ ಶವವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳ ರಾಜ್ಯ ಸರ್ಕಾರದ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರ ಪಡೆಯುವ ಮೂಲಕ ಸಿನಿ ಪ್ರಿಯರಲ್ಲಿ ಭಾರಿ ಭರವಸೆ ಮೂಡಿಸಿದ್ದ ಯುವ ನಟ ತನ್ನ ಮನೆಯಲ್ಲೇ ಬದುಕು ಅಂತ್ಯಗೊಳಿಸಿದ್ದಾನೆ. ಘಟನೆಯಿಂದ ಮಲೆಯಾಳಂ ಸಿನಿಮಾ ಇಂಡಸ್ಟ್ರಿ ಆಘಾತಕ್ಕೊಳಗಾಗಿದೆ. ಕಠಿಣ ಪ್ರಯತ್ನದ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಅಖಿಲ್ ವಿಶ್ವನಾಥ್ ನಿಧನಕ್ಕೆ ಕೇರಳ ಜನ ಕಂಬನಿ ಮಿಡಿದಿದ್ದಾರೆ. ಇತ್ತ ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗಿದೆ.
ಚೋಳ ಸಿನಿಮಾ ನಾಯಕ
ಚೋಳ ಸಿನಿಮಾದಲ್ಲಿ ಪ್ರಮುಖ ನಾಯಕನಾಗಿ ಕಾಣಿಸಿಕೊಂಡ ಅಖಿಲ್ ವಿಶ್ವನಾಥ್ ಭಾರಿ ಜನಮನ್ನಣೆಗೆ ಪಾತ್ರರಾಗಿದ್ದರು. ಬಾಲನಟನಾಗಿ ಮಲೆಯಾಳಂ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಅಖಿಲ್ ವಿಶ್ವನಾಥ್ ಆಪರೇಶನ್ ಸೇರಿದಂತೆ ಹಲವು ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದ ಅಖಿಲ್ ವಿಶ್ವನಾಥ್, ಮೊಬೈಲ್ ಶಾಪ್‌ನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಕೆಲ ದಿನಗಳಿಂದ ಶಾಪ್‌ಗೂ ತೆರಳದೇ ಮನೆಯಲ್ಲೇ ಉಳಿದುಕೊಂಡಿದ್ದ. ಅಖಿಲ್ ತಾಯಿ ಬೆಳಗ್ಗೆ ಕೆಲಸಕ್ಕೆ ತೆರಳುವ ಸಿದ್ಧತೆಯಲ್ಲಿ ಮಗ ಮಲಗಿದ್ದ ಕೋಣೆ ಬಾಗಿಲು ಮುಚ್ಚಿದ ರೀತಿಯಲ್ಲೇ ಇದೆ ಎಂದು ಅನುಮಾನಗೊಂಡಿದ್ದಾರೆ. ಹೀಗಾಗಿ ಕೋಣೆಯತ್ತ ಹೋಗಿ ನೋಡಿದಾಗ ಅಖಿಲ್ ವಿಶ್ವನಾಥ್ ಮೃತದೇಹ ಪತ್ತೆಯಾಗಿದೆ.
2019ರಲ್ಲಿ ಚೋಳ ಸಿನಿಮಾ ಕೇರಳ ರಾಜ್ಯ ಸರ್ಕಾರದ ಪ್ರಶಸ್ತಿಗೆ ಭಾಜನವಾಗಿತ್ತು. ಈ ಚಿತ್ರದ ಪ್ರಮುಖ ಪಾತ್ರ ನಿರ್ವಹಿಸಿದ್ದ ಅಖಿಲ್ ವಿಶ್ವನಾಥ್ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಬಾಲನಟನಾಗಿಯೂ ಪ್ರಶಸ್ತಿ ಗೆದ್ದುಕೊಂಡಿದ್ದರು. ಚೋಳ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಖಿಲ್ ಪ್ರತಿಭೆಗೆ, ನಟನೆಗೆ ಕೇರಳ ಜನ ಮಾರುಹೋಗಿದ್ದರು. ಆದರೆ ಅಖಿಲ್ ವಿಶ್ವನಾಥನ್‌ಗೆ ಉತ್ತಮ ಅವಕಾಶಗಳು ಸಿಗಲಿಲ್ಲ. ಇತ್ತ ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಖಿಲ್ ಇತ್ತೀಚೆಗೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ತಂದೆಗೆ ಅಪಘಾತದಲ್ಲಿ ಗಂಭೀರ ಗಾಯ
ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಅಖಿಲ್ ವಿಶ್ವನಾಥ್ ಗಂಭೀರವಾಗಿ ಗಾಯಗೊಂಡಿದ್ದರು. ಅಖಿಲ್ ತಂದೆ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಚೇತರಿಸಿಕೊಂಡಿಲ್ಲ. ಆಟೋ ಚಾಲಕನಾಗಿರುವ ಅಖಿಲ್ ತಂದೆ, ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾರು ಬಂದು ಡಿಕ್ಕಿಯಾಗಿ ಅಪಗಾತವಾಗಿತ್ತು. ತಂದೆ ಅಫಘಾತದಲ್ಲಿ ಗಾಯಗೊಂಡ ಬಳಿಕ ಅಖಿಲ್ ವಿಶ್ವನಾಥ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇತ್ತ ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೊಬೈಲ್ ಸೇರಿದಂತೆ ಇತರ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.


