ಅಪಘಾತದಲ್ಲಿ ಮೃತಪಟ್ಟ ಖ್ಯಾತ ಗಾಯಕ ಹರ್ಮನ್ ಸಿಧು ಕೊನೆಯ ಪೋಸ್ಟ್ ನೋಡಿ ಕಣ್ಣೀರಿಟ್ಟ ಜನ , ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ತಮ್ಮ ಹಾಡು, ಆಲ್ಬಮ್ ಪ್ರಮೋಶನ್ ವಿಡಿಯೋ, ಫೋಟೋಗಳನ್ನೇ ಹಾಕುತ್ತಿದ್ದ ಹರ್ಮನ್ ಅಂದು ತನ್ನ ಮುದ್ದಿನ ಮಗಳ ಪೋಸ್ಟ್ ಹಾಕಿದ್ದರು.
ಪಟಿಯಾಲ (ನ.23) ಅದ್ಭುತ ಕಂಠ, ಅಷ್ಟೇ ಭಿನ್ನ ಶೈಲಿಯಲ್ಲಿ ಜನರನ್ನು ಮೋಡಿ ಮಾಡುತ್ತಿದ್ದ ಖ್ಯಾತ ಗಾಯಕ ಹರ್ಮನ್ ಸಿಧು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೇವಲ 37 ವರ್ಷದ ಹರ್ಮನ್ ಸಿಧು ಪಂಜಾಬಿ ಸಿನಿಮಾ, ಪಂಜಾಬಿ ಆಲ್ಬಮ್ , ದೇಶ ವಿದೇಶಗಳಲ್ಲಿ ಮ್ಯೂಸಿಕ್ ಕಾನ್ಸರ್ಟ್ ಮೂಲಕ ಜನಪ್ರಿಯರಾಗಿದ್ದರು. ಪಟಿಯಾಲದಿಂದ ಮಾನಸಕೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಹರ್ಮನ್ ಸಿಧು ವಾಹನ, ಟ್ರಕ್‌ಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಹರ್ಮನ್ ಸಿಧು ಮೃತಪಟ್ಟಿದ್ದಾರೆ. ಹರ್ಮನ್ ಸಿಧು ನಿಧನ ಸುದ್ದಿ ಪಂಜಾಬಿಗಳಿಗೆ ತೀವ್ರ ಆಘಾತ ನೀಡಿತ್ತು. ಇದೀಗ ಹರ್ಮನ್ ಸಿಧು ಕೊನೆಯ ಇನ್‌ಸ್ಟಾಗ್ರಾಂ ಪೋಸ್ಟ್ ನೋಡಿ ಜನರು ಕಣ್ಣೀರಿಟ್ಟಿದ್ದಾರೆ.
ಮಗಳ ಫೋಟೋ ಪೋಸ್ಟ್ ಮಾಡಿದ್ದ ಹರ್ಮನ್ ಸಿಧು
ಸೋಶಿಯಲ್ ಮೀಡಿಯಾದಲ್ಲಿ ಹರ್ಮನ್ ಸಿಧು ಪತ್ನಿ ಹಾಗೂ ಮಗಳ ಬಗ್ಗೆ ಫೋಟೋ ವಿಡಿಯೋ ಹಾಕಿದ್ದು ಕಡಿಮೆ. ಹೆಚ್ಚಾಗಿ ತಮ್ಮ ಹಾು, ಆಲ್ಬಮ್, ಪ್ರಮೋಶನ್ ಪೋಸ್ಟರ್‌ಗಳನ್ನೇ ಹಾಕುತ್ತಿದ್ದರು. ಆದರೆ ನವೆಂಬರ್ 21ರಂದು ಹರ್ಮನ್ ಸಿಧು ತಮ್ಮ ಮಗಳ ಜೊತೆಗಿನ ಕೆಲ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಮಗಳಿಗೆ ಮಂಡಿಯೂರಿ ಹೂವು ನೀಡುತ್ತಿರುವ ಫೋಟೋವನ್ನು ಹರ್ಮನ್ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಮಗಳ ಮತ್ತೆರೆಡು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಮಾಡಿದ ಮರು ದಿನ ಅಂದರೆ ನವೆಂಬರ್ 22ರಂದು ಹರ್ಮನ್ ಸಿಧು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹರ್ಮನ್ ಸಿಧು ಕೊನೆಯ ಇನ್‌ಸ್ಟಾಗ್ರಾಂ ಪೋಸ್ಟ್ ನೋಡಿದ ಜನರು ನೋವು ತಾಳಲಾರದೆ ಕಣ್ಣೀರಿಟ್ಟಿದ್ದಾರೆ.
ಅತೀ ವೇಗದಲ್ಲಿ ನಡೆದಿತ್ತು ಅಪಘಾತ
ಹರ್ಮನ್ ಸಿಧು ಕಾರ್ಯಕ್ರಮ ನಿಮಿತ್ತ ಪಟಿಯಾಲಗೆ ತೆರಳಿದ್ದರು.ಕಾರ್ಯಕ್ರಮ ಮುಗಿಸಿ ಮಾನಸದಲ್ಲಿರುವ ಮನೆಗೆ ಮರಳುತ್ತಿರುವಾಗ ಅಪಘಾತ ಸಂಭವಿಸಿತ್ತು. ಹರ್ಮನ್ ತಮ್ಮ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಟ್ರಕ್‌ಗೆ ಕಾರು ಡಿಕ್ಕಿಯಾಗಿದೆ. ಹೀಗಾಗಿ ಅಪಘಾತದ ತೀವ್ರತೆ ಹೆಚ್ಚಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದೆ. ಭೀಕರ ಅಪಘಾತದಲ್ಲಿ ನಜ್ಜು ಗುಜ್ಜಾದ ಕಾರಿನಿಂದ ಹರ್ಮನ್ ಸಿಧು ಹೊರತೆಗೆಯಲು ಸ್ಥಳೀಯರು ಹಾಗೂ ಪೊಲೀಸರು ಹರಸಾಹಸ ಮಾಡಿದ್ದಾರೆ. ಅಪಘಾತದ ಬೆನ್ನಲ್ಲೇ ಹರ್ಮನ್ ಸಿಧು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸ್ಥಳೀಯರು ಹರ್ಮನ್ ಸಿಧುನನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹರ್ಮನ್ ಸಿಧು ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಮನೆಯಲ್ಲಿ ಮಡುಗಟ್ಟಿದ ಶೋಕ
ಹರ್ಮನ್ ಸಿಧು ಅಪಘಾತ ಸುದ್ದಿ ತಿಳಿದು ಪತ್ನಿ ಹಾಗೂ ಪೋಷಕರು ಆಘಾತಗೊಂಡಿದ್ದಾರ. ಇತ್ತ ಮುದ್ದಿನ ಮಗಳು ತಂದೆಯ ಬರುವಿಕೆಗಾಗಿ ಕಾಯುತ್ತಿದ್ದಳು. ಹರ್ಮನ್ ಸಿಧು ಕುಟಂಬಸ್ಥರ ನೋವು ಹೇಳತೀರದು, ಹರ್ಮನ್ ಸಿಧು ಅಭಿಮಾನಿ ಬಳಗವೂ ಅಂತ್ಯಸಂಸ್ಕಾರಕ್ಕೆ ಆಗಮಿಸಿತ್ತು.


