ಈ ಮೊದಲು ಕನ್ನಡ ಚಿತ್ರಗಳಲ್ಲೂ ನಟಿಸಿರುವ ಈ ನಟಿ, ಇದೀಗ ಮತ್ತೆ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್‌ ಶುರುಮಾಡಿದ್ದಾರೆ.   8 ವರ್ಷಗಳ ಕಾಲ ಪ್ರೀತಿಸಿ ಹಸೆಮಣೆ ಏರಿದ ಈ ನಟಿಗೆ ಈಗ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯ ನಂತರ ಸುದೀರ್ಘ ಕಾಲ ಚಿತ್ರರಂಗದಿಂದ ದೂರವಿದ್ದು, ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಯಾರು ನೋಡಿ..

ನಗು ಅಂದ್ರೆ ಲೈಲಾ, ಲೈಲಾ ಅಂದ್ರೆ ನಗು!

90ರ ದಶಕದ ಕೊನೆಯಲ್ಲಿ ಮತ್ತು 2000ರ ಆರಂಭದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನ ಮುದ್ದಾದ ಮುಖ, ಸುಂದರವಾದ ಕೆನ್ನೆ ಹಾಗೂ ಎಲ್ಲರನ್ನೂ ಸೆಳೆಯುವ ನಗುವಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಮನಗೆದ್ದ ನಟಿ ಲೈಲಾ. ಸೂರ್ಯ, ವಿಕ್ರಮ್ ಅವರಂತಹ ದಿಗ್ಗಜ ನಟರ ಜೊತೆ ತೆರೆ ಹಂಚಿಕೊಂಡಿದ್ದ ಈ ನಟಿಯ ನಗುವೇ ಅವರಿಗೆ ಇಂದು ಒಂದು ಶಾಪವಾಗಿ ಪರಿಣಮಿಸಿದೆ ಎಂದರೆ ನೀವು ನಂಬಲೇಬೇಕು. ಹೌದು, ಒಂದು ವಿಚಿತ್ರ ಕಾಯಿಲೆಯಿಂದಾಗಿ ನಟಿ ಲೈಲಾ (Laila) 30 ಸೆಕೆಂಡ್ ಕೂಡ ತಮ್ಮ ನಗುವನ್ನು ನಿಯಂತ್ರಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.

ಪೈಲಟ್ ಆಗಬೇಕಿದ್ದ ಹುಡುಗಿ ಬಣ್ಣದ ಲೋಕಕ್ಕೆ ಬಂದಿದ್ದು ಹೇಗೆ?

1980ರಲ್ಲಿ ಗೋವಾದ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಲೈಲಾ ಅವರಿಗೆ ಆರಂಭದಲ್ಲಿ ಪೈಲಟ್ ಆಗಬೇಕೆಂಬ ದೊಡ್ಡ ಕನಸಿತ್ತು. ಆದರೆ ಅವರ ತಾಯಿಗೆ ಮಗಳು ಬೆಳ್ಳಿ ಪರದೆಯ ಮೇಲೆ ಮಿಂಚಬೇಕೆಂಬ ಹಂಬಲವಿತ್ತು. ತಾಯಿಯ ಆಸೆಯಂತೆ ಕೇವಲ 15ನೇ ವಯಸ್ಸಿಗೆ ಮಾಡೆಲಿಂಗ್ ಮತ್ತು ಜಾಹೀರಾತುಗಳಲ್ಲಿ ನಟಿಸಲು ಶುರುಮಾಡಿದ ಲೈಲಾ, 'ದುಷ್ಮನ್ ದುನಿಯಾ ಕಾ' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಅಲ್ಲಿ ಯಶಸ್ಸು ಸಿಗಲಿಲ್ಲ.

ನಂತರ ದಕ್ಷಿಣದತ್ತ ಮುಖ ಮಾಡಿದ ಲೈಲಾಗೆ ಅದೃಷ್ಟ ದೇವತೆ ಒಲಿದಳು. ತೆಲುಗಿನ 'ಎಗಿರೆ ಪವರಮಾ' ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದ ಅವರು, ನಂತರ 'ಪೆಲ್ಲಿ ಚೇಸುಕುಂಡು ರಾ', 'ಖೈದಿ ಗರು' ನಂತಹ ಹಿಟ್ ಚಿತ್ರಗಳನ್ನು ನೀಡಿದರು. ತಮಿಳಿನಲ್ಲಿ ನಟ ಸೂರ್ಯ ಜೊತೆಗಿನ ಇವರ ಕೆಮಿಸ್ಟ್ರಿ ಬಹಳ ಜನಪ್ರಿಯವಾಗಿತ್ತು.

ಮುಂಬೈಗೆ ಸ್ಥಳಾಂತರಗೊಂಡ ನಂತರ, ಲೈಲಾಳ ತಾಯಿ ಅವರನ್ನು ನಟನಾ ಕೋರ್ಸ್‌ಗಳಿಗೆ ಸೇರಿಸಿದರು ಮತ್ತು ಬಾಲಿವುಡ್‌ನಲ್ಲಿ ಅವಕಾಶಗಳನ್ನು ಹುಡುಕಲು ಪ್ರಯತ್ನಿಸಿದರು. ಅವರು ದುಷ್ಮನ್ ದುನಿಯಾ ಕಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರೂ, ಆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಲಿಲ್ಲ.

ಮಲಯಾಳಂ ಚಿತ್ರಗಳಲ್ಲಿಯೂ ಅವರು ವೈಫಲ್ಯಗಳನ್ನು ಎದುರಿಸಿದರು. ಬಳಿಕ, ಟಾಲಿವುಡ್ ನಿರ್ದೇಶಕ ಎಸ್.ವಿ. ಕೃಷ್ಣ ರೆಡ್ಡಿ ಅವರು 'ಎಗಿರೆ ಪವರಮಾ' ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿದರು. ಎಗಿರೆ ಪವರಮಾ ಚಿತ್ರದ ಯಶಸ್ಸಿನೊಂದಿಗೆ, ಲೈಲಾ ಅವರ ಜಾತಕ ಬದಲಾಯಿತು. ಮುಂದೆ ಅವರು ಯುಗಾದಿ, ಪೆಲ್ಲಿ ಚೆಸುಕುಂಡು ರಾ, ಖೈದಿ ಗರು, ತೆಲುಗಿನಲ್ಲಿ ಪವಿತ್ರ ಪ್ರೇಮಾ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ತಾರೆಯಾಗಿ ಬೆಳೆದರು. ಕಾಲಿವುಡ್‌ನಲ್ಲಿ ಸೂರ್ಯ ಅವರೊಂದಿಗೆ ಅವರು ನಟಿಸಿದ ಚಿತ್ರಗಳು ಅವರಿಗೆ ಉತ್ತಮ ಜನಮನ್ನಣೆಯನ್ನು ತಂದುಕೊಟ್ಟವು.

ಸೂರ್ಯ ಅವರೊಂದಿಗೆ ಅವರಿಗೆ ಪ್ರೇಮ ಸಂಬಂಧವಿದೆ ಎಂಬ ವದಂತಿಯೂ ಇತ್ತು. ಆ ಬಳಿಕ ಈ ನಟಿಗೆ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ, ಅವರು ಐಟಂ ಹಾಡುಗಳು ಮತ್ತು ಪೋಷಕ ಪಾತ್ರಗಳಿಗೆ ಸೀಮಿತರಾದರು. ಲೈಲಾ ಅವರ ಜೀವನದಲ್ಲಿ ಮತ್ತೊಂದು ವಿಚಿತ್ರ ವಿಷಯವೆಂದರೆ ಅವರು ನಿರಂತರವಾಗಿ ನಗುತ್ತಿದ್ದರು. ‘ಶಿವಪುತ್ರಡು’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ವಿಕ್ರಮ್ ಇದನ್ನು ಗಮನಿಸಿ ಒಂದು ನಿಮಿಷ ನಗುವುದನ್ನು ನಿಲ್ಲಿಸುವಂತೆ ಸವಾಲು ಹಾಕಿದರು.

ವಿಕ್ರಮ್ ಹಾಕಿದ ಸವಾಲು ಮತ್ತು ಆಘಾತಕಾರಿ ಸತ್ಯ!

ಲೈಲಾ ಅವರ ಜೀವನದ ಈ ವಿಚಿತ್ರ ಸಮಸ್ಯೆ ಬಯಲಿಗೆ ಬಂದಿದ್ದು 'ಶಿವಪುತ್ರಡು' (ಪಿತಾಮಗನ್) ಚಿತ್ರದ ಚಿತ್ರೀಕರಣದ ಸಮಯದಲ್ಲಿ. ಈ ಚಿತ್ರದಲ್ಲಿ ವಿಕ್ರಮ್ ಮತ್ತು ಸೂರ್ಯ ಜೊತೆ ಲೈಲಾ ನಟಿಸುತ್ತಿದ್ದರು. ಲೈಲಾ ಯಾವಾಗಲೂ ಸುಮ್ಮ ಸುಮ್ಮನೆ ನಗುತ್ತಿರುವುದನ್ನು ಗಮನಿಸಿದ ನಟ ವಿಕ್ರಮ್, ಅವರಿಗೆ ಒಂದು ಸವಾಲು ಹಾಕಿದ್ದರು. "ಕೇವಲ ಒಂದು ನಿಮಿಷ ಕಾಲ ನಗುವುದನ್ನು ನಿಲ್ಲಿಸು" ಎಂಬುದು ಆ ಸವಾಲಾಗಿತ್ತು.

ಆದರೆ ಲೈಲಾಗೆ 30 ಸೆಕೆಂಡ್ ಕೂಡ ನಗದೇ ಇರಲು ಸಾಧ್ಯವಾಗಲಿಲ್ಲ. ಅವರು ನಗುವುದನ್ನು ಬಲವಂತವಾಗಿ ನಿಲ್ಲಿಸಲು ಪ್ರಯತ್ನಿಸಿದಾಗ ಅವರ ಕಣ್ಣುಗಳಿಂದ ನೀರು ಬರಲಾರಂಭಿಸಿತು. ಇದನ್ನು ಗಂಭೀರವಾಗಿ ಪರಿಗಣಿಸಿದಾಗ, ಇದು ಕೇವಲ ಅಭ್ಯಾಸವಲ್ಲ, ಇದೊಂದು ವೈದ್ಯಕೀಯ ಸ್ಥಿತಿ (Condition) ಎಂದು ತಿಳಿದುಬಂದಿತು. ಇದನ್ನು 'ಪೆಥಾಲಜಿಕಲ್ ಲಾಫ್ಟರ್' ಎಂದು ಕರೆಯಬಹುದು. ಈ ಸ್ಥಿತಿಯಲ್ಲಿ ವ್ಯಕ್ತಿ ತನ್ನ ಭಾವನೆಗಳ ಮೇಲೆ, ಅದರಲ್ಲೂ ವಿಶೇಷವಾಗಿ ನಗುವಿನ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಗಂಭೀರವಾದ ಸನ್ನಿವೇಶಗಳಲ್ಲಿ ಅಥವಾ ಯಾರಾದರೂ ನೋವಿನಲ್ಲಿದ್ದಾಗಲೂ ಇವರು ನಗುವನ್ನು ತಡೆಯಲಾಗದೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಲೈಲಾ ವಿಷಯದಲ್ಲೂ ಇದೇ ಆಯಿತು; ಅವರ ನಗು ಅವರಿಗೆ ವರವಲ್ಲ, ಬದಲಾಗಿ ಒಂದು ರೀತಿಯ ಕಾಯಿಲೆಯಾಗಿ ಕಾಡಲಾರಂಭಿಸಿತು.

ವೈಯಕ್ತಿಕ ಜೀವನ ಮತ್ತು ಸೆಕೆಂಡ್ ಇನ್ನಿಂಗ್ಸ್

ಲೈಲಾ 2006 ರಲ್ಲಿ ಇರಾನಿನ ಉದ್ಯಮಿ ಮೆಹದಿ ಎಂಬುವವರನ್ನು ಮದುವೆಯಾದರು. ಎಂಟು ವರ್ಷಗಳ ಕಾಲ ಪ್ರೀತಿಸಿ ಹಸೆಮಣೆ ಏರಿದ ಈ ಜೋಡಿಗೆ ಈಗ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯ ನಂತರ ಸುದೀರ್ಘ ಕಾಲ ಚಿತ್ರರಂಗದಿಂದ ದೂರವಿದ್ದ ಲೈಲಾ, ಇತ್ತೀಚೆಗೆ ಕಾರ್ತಿ ನಟನೆಯ 'ಸರ್ದಾರ್' ಸಿನಿಮಾ ಹಾಗೂ ಕೆಲವು ವೆಬ್ ಸರಣಿಗಳ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಲೈಲಾ, ಇಂದಿಗೂ ಅದೇ ಹಳೆಯ ಮುಗ್ಧ ನಗುವಿನೊಂದಿಗೆ ಅಭಿಮಾನಿಗಳ ಪ್ರೀತಿ ಗಳಿಸುತ್ತಿದ್ದಾರೆ. ಆದರೆ ಆ ನಗುವಿನ ಹಿಂದೆ ಇಷ್ಟೊಂದು ಸಂಕಷ್ಟವಿದೆ ಎಂಬುದು ಮಾತ್ರ ಅನೇಕರಿಗೆ ತಿಳಿದಿಲ್ಲದ ವಿಚಾರ.