"ಡಾರ್ಲಿಂಗ್ ರಾಜಮೌಳಿ... ಲವ್ ಯೂ ಸೋ ಮಚ್. ಜಪಾನ್‌ನಲ್ಲಿ ನಿನ್ನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ... ನಾವಿಬ್ಬರೂ ಮತ್ತೊಮ್ಮೆ ಇಲ್ಲಿಗೆ ಒಟ್ಟಿಗೆ ಬರೋಣ'.. ಏನಿದು ರಾಜಮೌಳಿ-ಪ್ರಭಾಸ್ ‘ಡಾರ್ಲಿಂಗ್ ಡಾರ್ಲಿಂಗ್’ ಮ್ಯಾಟರ್?
‘ಡಾಲಿಂಗ್.. ಡಾರ್ಲಿಂಗ್’ ಲೆಟರ್
ಟೋಕಿಯೋ/ಹೈದರಾಬಾದ್: ಭಾರತೀಯ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಹೆಗ್ಗಳಿಕೆ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಮತ್ತು ನಟ ಪ್ರಭಾಸ್ (Prabhas) ಅವರ 'ಬಾಹುಬಲಿ' (Baahubali) ಚಿತ್ರಕ್ಕೆ ಸಲ್ಲುತ್ತದೆ. ಈ ಸಿನಿಮಾ ಬಿಡುಗಡೆಯಾಗಿ ವರ್ಷಗಳೇ ಕಳೆದರೂ, ವಿದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಜಪಾನ್‌ನಲ್ಲಿ ಈ ಚಿತ್ರಕ್ಕಿರುವ ಕ್ರೇಜ್ ಮಾತ್ರ ಇಂದಿಗೂ ಕಮ್ಮಿಯಾಗಿಲ್ಲ. ಸದ್ಯ 'ರೆಬೆಲ್ ಸ್ಟಾರ್' ಪ್ರಭಾಸ್ ಜಪಾನ್ ಪ್ರವಾಸದಲ್ಲಿದ್ದು, ಅಲ್ಲಿನ ಅಭಿಮಾನಿಗಳಿಂದ ಸಿಗುತ್ತಿರುವ ಅಭೂತಪೂರ್ವ ಪ್ರೀತಿಗೆ ಮೈಮರೆತಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಜಮೌಳಿ ಬರೆದಿರುವ ಭಾವುಕ ಪತ್ರವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜಮೌಳಿ ಅವರ ಭಾವುಕ ಪತ್ರದಲ್ಲಿ ಏನಿದೆ?
ಸದ್ಯ ಜಪಾನ್‌ನಲ್ಲಿ 'ಬಾಹುಬಲಿ: ದಿ ಎಪಿಕ್' (Baahubali: The Epic) ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿದ್ದು, ಇದಕ್ಕಾಗಿ ಪ್ರಭಾಸ್ ಅಲ್ಲಿಗೆ ತೆರಳಿದ್ದಾರೆ. ಈ ಖುಷಿಯನ್ನು ಹಂಚಿಕೊಂಡಿರುವ ರಾಜಮೌಳಿ, ಪ್ರಭಾಸ್ ಮತ್ತು ಜಪಾನ್ ಜನರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ರಾಜಮೌಳಿ ತಮ್ಮ ಪೋಸ್ಟ್‌ನಲ್ಲಿ, "ಡಾರ್ಲಿಂಗ್ (ಪ್ರಭಾಸ್), ಈಗಾಗಲೇ ನಿನಗೆ ಜಪಾನ್ ಪ್ರೇಕ್ಷಕರ ಪ್ರೀತಿಯ ರುಚಿ ಸಿಕ್ಕಿರುತ್ತದೆ ಎಂದು ಭಾವಿಸುತ್ತೇನೆ, ಮತ್ತು ನನಗೆ ಗೊತ್ತು, ಆ ಪ್ರೀತಿಯನ್ನು ಕಂಡು ನಿನ್ನ ಕಣ್ಣಲ್ಲಿ ಆನಂದಬಾಷ್ಪ ಬಂದಿರುತ್ತದೆ," ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ರಾಜಮೌಳಿ, "ನಾನು ಈ ಹಿಂದೆ ನಾಲ್ಕು ಬಾರಿ ಜಪಾನ್‌ಗೆ ಭೇಟಿ ನೀಡಿದ್ದೆ. ಆಗ ಅಲ್ಲಿದ್ದ ಅಭಿಮಾನಿಗಳು ಪದೇ ಪದೇ 'ಪ್ರಭಾಸ್ ಯಾವಾಗ ಬರುತ್ತಾರೆ?' ಎಂದು ಕೇಳುತ್ತಲೇ ಇದ್ದರು. ಅವರು ತಮ್ಮ ಆಸೆಯನ್ನು ವ್ಯಕ್ತಪಡಿಸಿದಷ್ಟೂ, ನನಗೂ ನೀನು ಅಲ್ಲಿಗೆ ಹೋಗಬೇಕು ಮತ್ತು ಅವರು ನಿನ್ನ ಮೇಲೆ ಇಟ್ಟಿರುವ ಪ್ರೀತಿಯನ್ನು ನೀನು ಕಣ್ಣಾರೆ ಕಾಣಬೇಕು ಎಂಬ ಆಸೆ ಹೆಚ್ಚಾಗುತ್ತಿತ್ತು. ಹಾಗೆಯೇ ನೀನು ಅವರ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದೀಯಾ ಎಂಬುದು ಅವರಿಗೂ ತಿಳಿಯಬೇಕಿತ್ತು," ಎಂದು ಹೇಳಿದ್ದಾರೆ.
ಜಪಾನ್ ದೇಶವನ್ನು ತಮ್ಮ 'ಎರಡನೇ ಮನೆ' ಎಂದು ಕರೆದಿರುವ ರಾಜಮೌಳಿ, "ಅಂತಿಮವಾಗಿ, ನನ್ನ ಬಾಹುಬಲಿ ನನ್ನ ಎರಡನೇ ಮನೆಗೆ ತಲುಪಿದ್ದಾನೆ. ನಾನು ಅಲ್ಲಿನ ಪ್ರತಿ ಭೇಟಿಯನ್ನು ಹೇಗೆ ಆನಂದಿಸಿದ್ದೆನೋ, ನೀನು ಕೂಡ ಜಪಾನ್ ಅನ್ನು ಅಷ್ಟೇ ಆನಂದಿಸುತ್ತೀಯಾ ಎಂದು ಭಾವಿಸುತ್ತೇನೆ. ನನ್ನ ಎಲ್ಲಾ ಜಪಾನೀಸ್ ಸ್ನೇಹಿತರಿಗೆ ಪ್ರೀತಿಯ ಧನ್ಯವಾದಗಳು. ಅರಿಗಾಟೊ ಗೋಜೈಮಾಸ್ (ಧನ್ಯವಾದಗಳು)," ಎಂದು ಬರೆದಿದ್ದಾರೆ.
ಜಕ್ಕಣ್ಣನಿಗೆ ಪ್ರಭಾಸ್ ರಿಪ್ಲೈ ಏನು?
ರಾಜಮೌಳಿ ಅವರ ಈ ಪ್ರೀತಿಯ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಪ್ರಭಾಸ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಾಜಮೌಳಿ ಅವರ ಟಿಪ್ಪಣಿಯನ್ನು ಮರುಹಂಚಿಕೊಂಡಿದ್ದಾರೆ. ಜಪಾನ್ ಪ್ರವಾಸದ ಫೋಟೋದೊಂದಿಗೆ, "ಡಾರ್ಲಿಂಗ್ ರಾಜಮೌಳಿ... ಲವ್ ಯೂ ಸೋ ಮಚ್. ಜಪಾನ್‌ನಲ್ಲಿ ನಿನ್ನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ... ನಾವಿಬ್ಬರೂ ಮತ್ತೊಮ್ಮೆ ಇಲ್ಲಿಗೆ ಒಟ್ಟಿಗೆ ಬರೋಣ," ಎಂದು ಹೇಳುವ ಮೂಲಕ ತಮ್ಮ ಮತ್ತು ನಿರ್ದೇಶಕರ ನಡುವಿನ ಬಾಂಧವ್ಯವನ್ನು ಸಾರಿದ್ದಾರೆ.
ಜಪಾನ್ ಅಭಿಮಾನಿಗಳ ಮನಗೆದ್ದ ಪ್ರಭಾಸ್
ವರದಿಗಳ ಪ್ರಕಾರ, ಜಪಾನ್‌ನಲ್ಲಿ ನಡೆದ ವಿಶೇಷ ಸ್ಕ್ರೀನಿಂಗ್ ವೇಳೆ ಪ್ರಭಾಸ್ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. "ನಿಮ್ಮ ಪ್ರೀತಿಗೆ ಧನ್ಯವಾದಗಳು. ರಾಜಮೌಳಿ ಸರ್ ಮತ್ತು ನಿರ್ಮಾಪಕರು ಯಾವಾಗಲೂ ಜಪಾನ್ ಅಭಿಮಾನಿಗಳ ಪ್ರೀತಿ ಮತ್ತು ಬಾಂಧವ್ಯದ ಬಗ್ಗೆ ನನ್ನ ಬಳಿ ಹೇಳುತ್ತಲೇ ಇದ್ದರು. ಇಂದು ಅದನ್ನು ನಾನು ಕಣ್ಣಾರೆ ಕಾಣುತ್ತಿದ್ದೇನೆ," ಎಂದು ಪ್ರಭಾಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಭಾಸ್ ಮುಂದಿನ ಸಿನಿಮಾಗಳು
ಕೆಲಸದ ವಿಚಾರಕ್ಕೆ ಬರುವುದಾದರೆ, ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾರುತಿ ನಿರ್ದೇಶನದ ಹಾರರ್-ಕಾಮಿಡಿ ಸಿನಿಮಾ 'ದಿ ರಾಜಾ ಸಾಬ್' (The Raja Saab) 2026ರ ಜನವರಿ 9 ರಂದು ಬಿಡುಗಡೆಯಾಗಲಿದೆ. ಇದಲ್ಲದೆ, ಹನು ರಾಘವಪುಡಿ ನಿರ್ದೇಶನದ 'ಫೌಜಿ' (Fauzi) ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ಬಹುನಿರೀಕ್ಷಿತ 'ಸ್ಪಿರಿಟ್' (Spirit) ಸಿನಿಮಾಗಳಲ್ಲೂ ಪ್ರಭಾಸ್ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಬಾಹುಬಲಿ ಮೂಲಕ ಜಗತ್ತನ್ನು ಗೆದ್ದ ಪ್ರಭಾಸ್, ಈಗ ಜಪಾನ್ ಅಭಿಮಾನಿಗಳನ್ನೂ ತಮ್ಮ ಸರಳತೆಯಿಂದ ಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು.


