ಭಾರತೀಯ ಸಿನೆಮಾ ರಂಗದ ಈ ಮಹಾನ್ ಹೀರೋಯಿನ್ (Smita patil), ತಮ್ಮ ಖ್ಯಾತಿಯ ನಡುವೆಯೂ ಸರಳ ಜೀವನ ನಡೆಸುತ್ತಿದ್ದರು. ಶೂಟಿಂಗ್ ಸೆಟ್‌ನಲ್ಲಿ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದ ಅವರ ಸರಳತೆ, ಮಹಿಳಾ ಹಕ್ಕುಗಳ ಬಗೆಗಿನ ಅವರ ದೃಢ ನಿಲುವು ಹಾಗೂ ಅವರ ಬಲಿಷ್ಠ ಪಾತ್ರಗಳು ಇಂದಿಗೂ ಸ್ಮರಣೀಯ.
ಸ್ಮಿತಾ ಪಾಟೀಲ್ ಭಾರತೀಯ ಸಿನೆಮಾ ಲೋಕದ ಮಹಾನ್ ನಟಿಯರಲ್ಲಿ ಒಬ್ಬಳು. ಅವರು ಇಲ್ಲದಾಗಿ 39 ವರ್ಷಗಳಾದರೂ, ತಮ್ಮ ಕಾಲದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿ ಇಂದಿಗೂ ಜನರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಸೂಕ್ಷ್ಮ ಅಭಿನಯದ ಜೊತೆಗೆ ಅವರ ನೈತಿಕತೆ, ಮಹಿಳಾ ಹಕ್ಕುಗಳ ಬಗ್ಗೆ ಇದ್ದ ದೃಢ ನಿಲುವು ಕೂಡ ಅವರಿಗೆ ವಿಶೇಷ ಸ್ಥಾನ ನೀಡಿತ್ತು. ಅವರ ಬಹುತೇಕ ಚಿತ್ರಗಳಲ್ಲಿ ಮಹಿಳಾ ಪಾತ್ರಗಳು ಬಲಿಷ್ಠ, ಸ್ವತಂತ್ರವಾಗಿದ್ದವು. ಸ್ಮಿತಾ ಪಾಟೀಲ್ ಅವರ ವ್ಯಕ್ತಿತ್ವ ನಟನೆಗೆ ಸೀಮಿತವಾಗಿರಲಿಲ್ಲ. ಕ್ಯಾಮೆರಾದಿಂದ ಆಚೆಗೆ ಅವರು ಹೇಗಿದ್ದರು ಎಂಬುದನ್ನು ನೋಡೋಣ.
ಸ್ಮಿತಾ ಪಾಟೀಲ್ ಅವರಿಗೆ ಸಿನೆಮಾ ಕ್ಷೇತ್ರದಲ್ಲಿ ಯಾವುದೇ ಬ್ಯಾಕ್‌ಗ್ರೌಂಡ್ ಇರಲಿಲ್ಲ. ಎಷ್ಟೇ ಬೆಳೆದರೂ ಅವರು ನೆಲಮಟ್ಟದಲ್ಲೇ ಇದ್ದರು. ಗ್ಲಾಮರ್ ಜಗತ್ತಿನ ಮಧ್ಯೆಯೂ ಅವರು ತುಂಬಾ ಸರಳವಾಗಿ ಬದುಕಿದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಓದಿದ ನಂತರ, ಎಫ್‌ಟಿಐಐ (ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ)ಯಲ್ಲಿ ನಾಟಕದ ಅನುಭವ ಪಡೆದು, ‘ತೀವ್ರ ಮಧ್ಯಮ್’ ಎಂಬ ವಿದ್ಯಾರ್ಥಿಗಳು ಮಾಡಿದ ಸಿನಿಮಾದಿಂದ ತಮ್ಮ ನಟನಾ ಪಯಣ ಆರಂಭಿಸಿದರು.
ಮುಂಬೈನ ವುಮೆನ್ಸ್ ಸೆಂಟರ್‌ನ ಸಕ್ರಿಯ ಸದಸ್ಯೆಯಾಗಿದ್ದ ಸ್ಮಿತಾ ಪಾಟೀಲ್, ಮಹಿಳಾ ಹಕ್ಕುಗಳಿಗಾಗಿ ಕೆಲಸ ಮಾಡಿದವರು. ಈ ನಿಲುವು ಅವರ ಚಿತ್ರಗಳಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನ್ಯೂ ವೇವ್ ಸಿನೆಮಾದಲ್ಲಿ ಅವರು ಮಾಡಿದ ಬಹುತೇಕ ಚಿತ್ರಗಳು ಸ್ವತಂತ್ರ ಚಿಂತನೆ ಹೊಂದಿದ, ಗಟ್ಟಿಯಾದ ಮಹಿಳಾ ಪಾತ್ರಗಳನ್ನು ತೋರಿಸಿವೆ. ಫೆಮಿನಿಸ್ಟ್ ಚಿಂತನೆಗೆ ಹತ್ತಿರವಾದ ಅವರ ಪ್ರಸಿದ್ಧ ಚಿತ್ರಗಳಲ್ಲಿ ‘ಭೂಮಿಕಾ’, ‘ಮಂಥನ್’ ಮತ್ತು ‘ಮಿರ್ಚ್ ಮಸಾಲಾ’ ಪ್ರಮುಖ.
ಖ್ಯಾತಿ ಬಂದರೂ ಅವರು ಎಂದಿಗೂ ಬದಲಾಗಲಿಲ್ಲ. ಅವರ ಜೊತೆ ಕೆಲಸ ಮಾಡಿದ ಹಲವರು, ಶೂಟಿಂಗ್ ನಡುವೆ ಅವರು ಎಷ್ಟು ಸರಳವಾಗಿದ್ದರು ಎಂಬ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸೆಟ್‌ನಲ್ಲಿ ಸಹನಟರಿಗೆ ತಾವೇ ಅಡುಗೆ ಮಾಡಿ ಊಟ ಮಾಡಿಸುತ್ತಿದ್ದರು ಎಂಬುದು ಅಂಥ ಒಂದು ನೆನಪು. ಮೃಣಾಲ್ ಸೇನ್ ಅವರ ‘ಅಕಾಲೇರ್ ಸಂಧಾನೆ’ ಚಿತ್ರದ ಶೂಟಿಂಗ್ ಬಂಗಾಳದಲ್ಲಿ ನಡೆಯುವಾಗ, ಅವರು ತರಕಾರಿ, ಎಣ್ಣೆ ಇತ್ಯಾದಿಗಳನ್ನು ಇತರರಿಂದ ಸಾಲವಾಗಿ ತೆಗೆದುಕೊಂಡು, ಶೂಟಿಂಗ್ ಮಧ್ಯೆ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರಂತೆ.
ಲೇಖಕಿ ಹಾಗೂ ಪ್ರಸಿದ್ಧ ಚಿತ್ರ ವಿಮರ್ಶಕಿ ಮೈಥಿಲಿ ರಾವ್ ಅವರು ‘ಸ್ಮಿತಾ ಪಾಟಿಲ್: ಎ ಬ್ರಿಫ್ ಇನ್‌ಕ್ಯಾಂಡಸೆನ್ಸ್’ ಎಂಬ ಜೀವನಚರಿತ್ರೆ ಬರೆದಿದ್ದಾರೆ. ಅದರಲ್ಲಿ ಸಹನಟರ ಅನುಭವಗಳನ್ನೂ ಉಲ್ಲೇಖಿಸಿದ್ದಾರೆ. ನಟ ಧೃತಿಮಾನ್ ಚಟರ್ಜಿ ಹೇಳುವಂತೆ, ಸೆಟ್‌ನಲ್ಲಿ ಸ್ಮಿತಾ ಪಾಟಿಲ್ ಒಬ್ಬರೇ ಸಸ್ಯಾಹಾರಿಯಾಗಿದ್ದರು. ಅವರು ಹೇಳಿದ್ದು ಹೀಗೆ: “ಮೃಣಾಲ್ ದಾ ಪೂರ್ವ ಬಂಗಾಳದವರಾಗಿದ್ದರಿಂದ ಯಾವಾಗಲೂ ಮೀನು ಬೇಕಾಗುತ್ತಿತ್ತು. ಅದರಿಂದ ಸ್ಮಿತಾಗೆ ಸ್ವಲ್ಪ ತೊಂದರೆ ಆಗುತ್ತಿತ್ತು. ಅಡುಗೆಯವರಿಂದ ತರಕಾರಿ ಮತ್ತು ಎಣ್ಣೆ ತೆಗೆದುಕೊಂಡು, ಸ್ಟೌವ್ ಮೇಲೆ ತಾವೇ ತಮ್ಮ ರೆಡಿ ಮಾಡಿಕೊಳ್ಳುತ್ತಿದ್ದರು.” ಯಾವುದೇ ವಿಶೇಷ ಬೇಡಿಕೆ ಇಲ್ಲದೆ ಸ್ಮಿತಾ ಸಿಂಪಲ್ ಅಕ್ಕಿಯ ಅನ್ನ ಮತ್ತು ತರಕಾರಿ ಪಲ್ಯ ಮಾತ್ರ ತಿನ್ನುತ್ತಿದ್ದರು.
ಸ್ಮಿತಾ ಪಾಟೀಲ್- ಶಬಾನಾ ಆಜ್ಮಿ ಸ್ಪರ್ಧೆ
ಶಬಾನಾ ಆಜ್ಮಿ ಮತ್ತು ಸ್ಮಿತಾ ಪಾಟೀಲ್ ಇಬ್ಬರೂ ಒಂದೇ ಕಾಲದಲ್ಲಿ ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಅವರ ನಡುವೆ ಸ್ಪರ್ಧೆಯೂ ಇತ್ತು. ಸ್ಮಿತಾ ಪಾಟೀಲ್ ಅವರ ಪ್ರತಿಭೆಯ ಬಗ್ಗೆ ಮಾತನಾಡುತ್ತಾ, ಶಬಾನಾ ಆಜ್ಮಿ ಜೀವನಚರಿತ್ರೆಯಲ್ಲಿ ಹೀಗೆ ಹೇಳಿದ್ದಾರೆ: “ಅವಳ ಬಗ್ಗೆ ನಾನು ಕಠಿಣವಾಗಿ ಮಾತಾಡಿದ್ದಕ್ಕೆ ನನಗೆ ಪಶ್ಚಾತ್ತಾಪ ಇದೆ. ಸಂಧಾನಕ್ಕೆ ಪ್ರಯತ್ನಗಳಾಗಿದ್ದವು. ಗೌರವ ಉಳಿಸಿಕೊಂಡೆವು, ಆದರೆ ಗೆಳತಿಯರಾಗಲು ಸಾಧ್ಯವಾಗಲಿಲ್ಲ. ಆದರೆ ಅದು ಎಂದಿಗೂ ಕುಟುಂಬದ ಮಟ್ಟಕ್ಕೆ ಹೋಗಲಿಲ್ಲ.”
ಶಬಾನಾ ಇನ್ನೂ ಹೇಳಿದ್ದಾರೆ- “ಸ್ಮಿತಾ ಪಾಟೀಲ್ ಭಾರತದ್ದೇ ಒಂದು ಪ್ರತಿಬಿಂಬವಾಗಿದ್ದರು. ಆಧುನಿಕತೆ, ಬಲ, ನಾಜೂಕು, ಆತ್ಮವಿಶ್ವಾಸ – ಎಲ್ಲವೂ ಒಂದೇ ವ್ಯಕ್ತಿಯಲ್ಲಿ ಇದ್ದವು. ಆ ವಿರೋಧಾಭಾಸಗಳೇ ಅವರ ಶಕ್ತಿ ಮತ್ತು ದುರ್ಬಲತೆ. ಭಾರತೀಯ ಸಿನೆಮಾದ ಶ್ರೇಷ್ಠ ನಟಿಯರ ಪಟ್ಟಿಯಲ್ಲಿ ಅವರ ಹೆಸರು ಎಂದಿಗೂ ಉಳಿಯುತ್ತದೆ.”
ಸ್ಮಿತಾ ಪಾಟೀಲ್ ಅವರು 1986ರ ಡಿಸೆಂಬರ್ 13ರಂದು, ಪ್ರಸವದ ನಂತರ ಉಂಟಾದ ಆರೋಗ್ಯ ಸಮಸ್ಯೆಗಳಿಂದ 31ನೇ ವಯಸ್ಸಿನಲ್ಲಿ ನಿಧನರಾದರು.


