Shraddha Kapoor: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತಮ್ಮ ಪಾತ್ರಕ್ಕೆ ಜೀವ ತುಂಬಲು 'ಈಠಾ' ಸಿನಿಮಾಗಾಗಿ ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಈ ಚಿತ್ರಕ್ಕಾಗಿ ಅವರು 10-12 ಕೆಜಿ ತೂಕ ಹೆಚ್ಚಿಸಿಕೊಂಡಿದ್ದು, ಬರೋಬ್ಬರಿ 25 ದಿನಗಳ ಕಾಲ 8 ಕೆಜಿ ತೂಕದ ಭಾರದ ಗೆಜ್ಜೆಗಳನ್ನು ಧರಿಸಿ ನೃತ್ಯ ಅಭ್ಯಾಸ ಮಾಡಿದ್ದಾರೆ. ಇನ್ನೆನೆಲ್ಲಾ ತ್ಯಾಗ ಮಾಡಿದ್ದಾರೆ ನೋಡಿ.
'ಈಠಾ' ಸಿನಿಮಾಗಾಗಿ ಶ್ರದ್ಧಾ ಕಪೂರ್ ಕಠಿಣ ಪರಿಶ್ರಮ
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ 'ಈಠಾ' ಸಿನಿಮಾ ಡಿಸೆಂಬರ್ 4ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಟಿ ಖ್ಯಾತ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅವರ ಜೀವನ ಮತ್ತು ಕಲಾ ಪಯಣವನ್ನು ಆಧರಿಸಿದೆ. ಶ್ರದ್ಧಾ ಕಪೂರ್ ಈ ಸಿನಿಮಾಕ್ಕಾಗಿ ಏನೆಲ್ಲಾ ಕಠಿಣ ಪರಿಶ್ರಮ ಪಟ್ಟಿದ್ದಾರೆ ಎನ್ನುವುದನ್ನು ನೃತ್ಯ ಸಂಯೋಜಕಿ ವೈಭವೀ ಮರ್ಚೆಂಟ್ ತಿಳಿಸಿದ್ದಾರೆ. .
'ವೆರೈಟಿ ಇಂಡಿಯಾ' ಜೊತೆ ಮಾತನಾಡಿದ ವೈಭವೀ, "ಶ್ರದ್ಧಾ ಅವರು ಲಕ್ಷ್ಮಣ್ ಉತೇಕರ್ ಅವರೊಂದಿಗೆ ಪಾತ್ರದ ಕಾರ್ಯಾಗಾರದಿಂದ ತಮ್ಮ ತಯಾರಿ ಆರಂಭಿಸಿದರು. ನಂತರ ಇಬ್ಬರು ಲಾವಣಿ ಕಲಾವಿದರಾದ ದಿವಂಗತ ಶಕುಂತಲಾ ನಾಗರ್ಕರ್ ಮತ್ತು ಅಕ್ಷಯ್ ಮಾಳವಣ್ಕರ್ ಅವರೊಂದಿಗೆ ನೃತ್ಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಶಕುಂತಲಾ ತಾಯಿ 7ರಿಂದ 10 ದಿನಗಳ ಕಾರ್ಯಾಗಾರ ನಡೆಸಿಕೊಟ್ಟರು. ಪ್ರೇಕ್ಷಕರೊಂದಿಗೆ ಹೇಗೆ ಬೆರೆಯಬೇಕು ಮತ್ತು 1940-50ರ ದಶಕದ ಭಾರವಾದ ಸಾಂಪ್ರದಾಯಿಕ ಗೆಜ್ಜೆಗಳನ್ನು ಧರಿಸಿ ಹೇಗೆ ಪ್ರದರ್ಶನ ನೀಡಬೇಕು ಎಂಬುದನ್ನು ಅವರು ಕಲಿಸಿದರು.
12 ಕೆಜಿ ತೂಕ ಹೆಚ್ಚಿಸಿದ ಶ್ರದ್ಧಾ ಕಪೂರ್
ಲಕ್ಷ್ಮಣ್ ಅವರು ಸಿನಿಮಾದ ಚಿತ್ರೀಕರಣವನ್ನು ಹಿಮ್ಮುಖ ಕ್ರಮದಲ್ಲಿ ನಡೆಸಲು ನಿರ್ಧರಿಸಿದ್ದರು. ಅಂದರೆ ಮೊದಲು ದ್ವಿತೀಯಾರ್ಧ ಮತ್ತು ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣ ಮಾಡಲಾಯಿತು. ಹೀಗಾಗಿ ಆ ಭಾಗದ ಚಿತ್ರೀಕರಣಕ್ಕಾಗಿ ಶ್ರದ್ಧಾ ಸುಮಾರು 10ರಿಂದ 12 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಾಯಿತು. ತೂಕ ಹೆಚ್ಚಾದಾಗ ವೇಗವಾಗಿ ಚಲಿಸುವ ಸಂದರ್ಭದಲ್ಲಿ ಮೊಣಕಾಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಜೊತೆಗೆ ದೈಹಿಕ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಕಷ್ಟು ಕಠಿಣ ಅಭ್ಯಾಸ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವ ತರಬೇತಿ ನೀಡಲಾಗಿತ್ತು.
25 ದಿನಗಳ ಕಾಲ ನೋವು ಸಹಿಸಿಕೊಂಡ ಶ್ರದ್ಧಾ ಕಪೂರ್
ಅಷ್ಟೇ ಅಲ್ಲ "ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ಎರಡನೇ ದಿನ ಮಧ್ಯಾಹ್ನದ ಊಟಕ್ಕೂ ಸ್ವಲ್ಪ ಮೊದಲು ಶ್ರದ್ಧಾ ಅವರಿಗೆ ಗಂಭೀರ ಗಾಯವಾಯಿತು. ಬಿಸಿಲಿನಿಂದ ಕಾದಿದ್ದ ನೆಲದ ಮೇಲೆ ಬರಿಗಾಲಿನಲ್ಲಿ ನೃತ್ಯ ಮಾಡಿದ್ದರಿಂದ ಘರ್ಷಣೆ ಉಂಟಾಗಿ ಗಾಯದ ಅಪಾಯ ಹೆಚ್ಚಾಯಿತು. ಎರಡು ತಿಂಗಳ ವಿರಾಮ ಪಡೆದು, ಕಠಿಣ ಫಿಸಿಯೋಥೆರಪಿ ಚಿಕಿತ್ಸೆ ನಂತರ ಮತ್ತೆ ನಟಿ ಕೆಲಸಕ್ಕೆ ಹಾಜರಾಗಿದ್ದರು. ಆ ಬಳಿಕ ಪ್ರತಿಯೊಂದು ಲಾವಣಿ ಪ್ರದರ್ಶನಕ್ಕೂ ಮುನ್ನ ವಾರ್ಮ್-ಅಪ್, ನಂತರ ಕೂಲ್-ಡೌನ್ ಮತ್ತು ಫಿಸಿಯೋಥೆರಪಿ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿತ್ತು" ಎಂದು ಹೇಳಿದ್ದಾರೆ.
ಈ ಸಿನಿಮಾಗಾಗಿ ಶ್ರದ್ಧಾ ಪ್ರತಿದಿನ ಸುಮಾರು ಎಂಟು ಗಂಟೆಗಳ ಕಾಲ ಎರಡೂ ಕಾಲುಗಳಿಗೆ ತಲಾ 4 ಕೆಜಿಯಂತೆ ಒಟ್ಟು 8 ಕೆಜಿ ತೂಕದ ಗೆಜ್ಜೆಗಳನ್ನು ಧರಿಸಿ ಬರೋಬ್ಬರಿ 25 ದಿನ ಅಭ್ಯಾಸ ಮಾಡುತ್ತಿದ್ದರು. ಆದರೆ ಈ ಕಠಿಣ ಪರಿಶ್ರಮದಿಂದ ಅವರು ಹಲವು ದೈಹಿಕ ಸವಾಲುಗಳನ್ನು ಎದುರಿಸಬೇಕಾಯಿತು. ದೀರ್ಘಕಾಲ ಅಭ್ಯಾಸ ಮಾಡಿದ್ದರಿಂದ ಅವರ ಕಾಲುಗಳಲ್ಲಿ ಊತ ಕಾಣಿಸಿಕೊಂಡಿತ್ತು. ಮಸಲ್ ಟಿಯರ್ ಕೂಡ ಉಂಟಾಗಿತ್ತು. ಗಾಯದ ನಡುವೆಯೂ ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಚಿತ್ರೀಕರಣಕ್ಕೆ ಬಂದಿದ್ದರು ಶ್ರದ್ಧಾ.
'ಈಠಾ' ಬಿಡುಗಡೆ ದಿನಾಂಕ
ಲಕ್ಷ್ಮಣ್ ಉತೇಕರ್ ನಿರ್ದೇಶನದ ಈ ಸಿನಿಮಾವನ್ನು ದಿನೇಶ್ ವಿಜನ್, ಲಕ್ಷ್ಮಣ್ ಉತೇಕರ್ ಮತ್ತು ಕರಿಷ್ಮಾ ಶರ್ಮಾ ನಿರ್ಮಿಸಿದ್ದಾರೆ. ಈ ಸಿನಿಮಾ 2026ರ ಡಿಸೆಂಬರ್ 4ರಂದು ಬಿಡುಗಡೆಯಾಗಲಿದೆ.














