AI ಡೀಪ್ಫೇಕ್ ವಿಡಿಯೋಗಳು, ನಕಲಿ ಜಾಹೀರಾತು ಹಾಗೂ ಅನುಮತಿಯಿಲ್ಲದ ವಾಣಿಜ್ಯ ಬಳಕೆಯ ವಿರುದ್ಧ ಬಾಲಿವುಡ್ ನಟಿ ಅನನ್ಯಾ ಪಾಂಡೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ಅವರ ಹೆಸರು, ಫೋಟೋ, ಧ್ವನಿ..
ಬಾಂಬೆ ಹೈಕೋರ್ಟ್ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಪರವಾಗಿ ಮಧ್ಯಂತರ ತೀರ್ಪು ನೀಡಿದೆ. AI ಬಳಸಿ ಸೃಷ್ಟಿಸುವ ಡೀಪ್ ಫೇಕ್ ವೀಡಿಯೋಗಳು, ನಕಲಿ ಜಾಹೀರಾತುಗಳು ಹಾಗೂ ಅವರ ವ್ಯಕ್ತಿತ್ವವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದಕ್ಕೆ ನ್ಯಾಯಾಲಯ ತಡೆ ಒಡ್ಡಿದೆ. ಇದು ಸಂವಿಧಾನದ 21ನೇ ವಿಧಿ ಹಾಗೂ ಕೃತಿಸ್ವಾಮ್ಯ ಕಾಯ್ದೆಯಡಿ ವ್ಯಕ್ತಿಯ ಹಕ್ಕುಗಳನ್ನು ಎತ್ತಿಹಿಡಿಯುವ ಪ್ರಮುಖ ಹೆಜ್ಜೆಯಾಗಿದೆ.
ಅನನ್ಯಾ ಪಾಂಡೆ ತಮ್ಮ ವ್ಯಕ್ತಿತ್ವದ ಹಕ್ಕುಗಳ ರಕ್ಷಣೆಗಾಗಿ ಬಾಂಬೆ ಹೈಕೋರ್ಟ್ನಿಂದ ಮಧ್ಯಂತರ ತಡೆಯಾಜ್ಞೆ ಪಡೆದಿದ್ದಾರೆ. ಈ ತೀರ್ಪು ಅವರ ಖಾಸಗಿತನ ಹಾಗೂ ಪ್ರಚಾರದ ಹಕ್ಕುಗಳನ್ನು ಕಾಪಾಡುತ್ತದೆ. ನಕಲಿ ಜಾಹೀರಾತುಗಳು, ಅನಧಿಕೃತ ವಾಣಿಜ್ಯ ಬಳಕೆ ಹಾಗೂ AI ಆಧಾರಿತ ಡೀಪ್ಫೇಕ್ಗಳನ್ನು ಇದು ತಡೆಯುತ್ತದೆ.
ಅನನ್ಯಾ ಪಾಂಡೆ ವ್ಯಕ್ತಿತ್ವದ ಹಕ್ಕುಗಳ ರಕ್ಷಣೆ!
ನ್ಯಾಯಮೂರ್ತಿ ಮಾಧವ್ ಜೆ. ಜಾಮದಾರ್ ಅವರು ಅನಧಿಕೃತ ಡಿಜಿಟಲ್ ದುರ್ಬಳಕೆಯನ್ನು ತಕ್ಷಣ ನಿಲ್ಲಿಸುವಂತೆ ಆದೇಶಿಸಿದ್ದಾರೆ. ಅನನ್ಯಾ ಪಾಂಡೆ ಅವರ ಅನುಮತಿಯಿಲ್ಲದೆ ಅವರ ಹೆಸರು, ಚಿತ್ರ, ಧ್ವನಿ, ಸಹಿ, ಡೈಲಾಗ್ ಡೆಲಿವರಿ ಹಾಗೂ ನಟನಾ ಶೈಲಿಯನ್ನು ಬಳಸದಂತೆ ಇ-ಕಾಮರ್ಸ್ ಮಾರಾಟಗಾರರು, ಡಿಜಿಟಲ್ ವೇದಿಕೆಗಳು ಮತ್ತು ಬಳಕೆದಾರರಿಗೆ ಈ ತಡೆಯಾಜ್ಞೆ ನಿರ್ಬಂಧ ವಿಧಿಸುತ್ತದೆ. ಇತ್ತೀಚೆಗೆ 'ಹಿಂದೂಸ್ತಾನ್ ಟೈಮ್ಸ್' ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅನನ್ಯಾ ಈ ಬಗ್ಗೆ ಮಾತನಾಡಿದ್ದಾರೆ.
ಅನನ್ಯಾ ಕಾನೂನು ಹೋರಾಟ ಏಕೆ?
AI ಮೂಲಕ ಸೃಷ್ಟಿಸಿದ ಅಶ್ಲೀಲ ಡೀಪ್ಫೇಕ್ಗಳು, ನಕಲಿ ಚಾಟ್ಬಾಟ್ಗಳು ಹಾಗೂ ಕಾಸ್ಮೆಟಿಕ್ ಸರ್ಜರಿಯ ನಕಲಿ ಜಾಹೀರಾತುಗಳ ವಿರುದ್ಧ ಅನನ್ಯಾ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ಅವರ ಮುಖವಿರುವ ಫೋನ್ ಕೇಸ್ಗಳು ಹಾಗೂ ಬಟ್ಟೆಗಳನ್ನೂ ಕೆಲವರು ಮಾರುತ್ತಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ಅನಧಿಕೃತ URL ಗಳು ಹಾಗೂ ಮಿರರ್ ಸೈಟ್ಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಸರ್ಚ್ ಇಂಜಿನ್ಗಳು, ಟೆಲಿಕಾಂ ಆಪರೇಟರ್ಗಳು ಹಾಗೂ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಆದೇಶಿಸಿದೆ.
'ಹಿಂದೂಸ್ತಾನ್ ಟೈಮ್ಸ್' ಜೊತೆ ಮಾತನಾಡಿದ ಅವರು, "AI ಎಂಬುದು ನಾವೆಲ್ಲರೂ ಎದುರಿಸುತ್ತಿರುವ ವಾಸ್ತವ. ಕೃತಕ ಬುದ್ಧಿಮತ್ತೆಯನ್ನು 'ವಾಸ್ತವ' ಎಂದು ಕರೆಯುವುದು ತಮಾಷೆಯಾದರೂ, ಅದನ್ನು ನಾವು ಒಪ್ಪಿಕೊಳ್ಳಲೇಬೇಕು; ಅದು ನಮ್ಮ ಜೀವನದ ಒಂದು ಭಾಗವಾಗಿದೆ" ಎಂದಿದ್ದಾರೆ.
"ಮೊದಲೆಲ್ಲ ಸಣ್ಣಪುಟ್ಟ ತಪ್ಪುಗಳಾದಾಗ ಪದೇ ಪದೇ ರಿಟೇಕ್ ತೆಗೆದುಕೊಳ್ಳಬೇಕಾಗುತ್ತಿತ್ತು... ಆದರೆ AI ಮೂಲಕ ಕೆಲಸಗಳು ವೇಗವಾಗಿವೆ. ಆದರೆ AI ಮನುಷ್ಯರ ಸ್ಥಾನವನ್ನು ಆಕ್ರಮಿಸುತ್ತಿದೆ ಎಂಬುದು ಭಯ ಹುಟ್ಟಿಸುತ್ತದೆ. AI ಎಂದಿಗೂ ಮಾನವನ ಭಾವನೆಗಳನ್ನು ಬದಲಿಸಲು ಸಾಧ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ" ಎಂದು ಅವರು ಹೇಳಿದ್ದಾರೆ.
ಕಾಲ್ ಮಿ ಬೇ ಸೀಸನ್ 2
ತಮ್ಮ ಮುಂಬರುವ ಸರಣಿಯ ಬಗ್ಗೆ ಮಾತನಾಡಿದ ಅನನ್ಯಾ, "ನನ್ನ ಪಾತ್ರದ ನಿರಂತರ ಬೆಳವಣಿಗೆಯನ್ನು ಜನರು ನೋಡಲಿದ್ದಾರೆ. ಕಾಲಕ್ಕೆ ತಕ್ಕಂತೆ ಅದು ಬದಲಾಗುತ್ತಿರುತ್ತದೆ" ಎಂದಿದ್ದಾರೆ.
ಭಾರತೀಯ ಕಾನೂನಿನಲ್ಲಿ ವ್ಯಕ್ತಿತ್ವದ ಹಕ್ಕುಗಳ ಅರ್ಥ
ಭಾರತದಲ್ಲಿ ವ್ಯಕ್ತಿತ್ವದ ಹಕ್ಕುಗಳು ಸಂವಿಧಾನದ 21ನೇ ವಿಧಿಯಡಿ (ಖಾಸಗಿತನದ ಹಕ್ಕು) ಬರುತ್ತವೆ. ಇದರಡಿ ವ್ಯಕ್ತಿಗಳು ತಮ್ಮ ವ್ಯಕ್ತಿತ್ವವನ್ನು ವಾಣಿಜ್ಯ ಉದ್ದೇಶಗಳಿಗೆ ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸಬಹುದು. ಕೃತಿಸ್ವಾಮ್ಯ ಕಾಯ್ದೆ 1957ರ ಸೆಕ್ಷನ್ 38, 38A ಮತ್ತು 38B ಅಡಿಯಲ್ಲಿ ಕಲಾವಿದರಿಗೆ ಕಾನೂನು ರಕ್ಷಣೆ ಸಿಗುತ್ತದೆ.
ಸಾಮಾನ್ಯ ಜನರಿಗೂ ಈ ಹಕ್ಕುಗಳಿವೆಯೇ?
ಹೌದು. ಡಿಜಿಟಲ್ ಸುರಕ್ಷತಾ ಕಾನೂನುಗಳು ಎಲ್ಲರಿಗೂ ಒಂದೇ. ಸೆಲೆಬ್ರಿಟಿಗಳು ತಮ್ಮ ಬ್ರ್ಯಾಂಡ್ ಮೌಲ್ಯದ ಆಧಾರದ ಮೇಲೆ ಈ ಹಕ್ಕುಗಳನ್ನು ಬಳಸಿದರೆ, ಸಂವಿಧಾನ ಪ್ರತಿಯೊಬ್ಬ ನಾಗರಿಕನನ್ನೂ ರಕ್ಷಿಸುತ್ತದೆ. 21ನೇ ವಿಧಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ, ಡೀಪ್ಫೇಕ್ ಅಥವಾ ವಂಚನೆಗೆ ಒಳಗಾದವರು ಕಾನೂನು ನೋಟಿಸ್ ಕಳುಹಿಸಬಹುದು ಮತ್ತು ಸಿವಿಲ್ ತಡೆಯಾಜ್ಞೆ ಕೋರಬಹುದು.














