'ಕಿಶನ್ ಕನ್ಹಯ್ಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಶಿಲ್ಪಾ ಶಿರೋಡ್ಕರ್, ತಮ್ಮ ಚೊಚ್ಚಲ ಚಿತ್ರದಲ್ಲೇ ವಿವಾದಕ್ಕೆ ಸಿಲುಕಿದ್ದರು. ಜಲಪಾತದ ಕೆಳಗಿನ ಪಾರದರ್ಶಕ ಸೀರೆಯ ದೃಶ್ಯದಿಂದಾಗಿ ಮಂದಾಕಿನಿಗೆ ಹೋಲಿಸಲ್ಪಟ್ಟ ಅವರು, ಆ ದೃಶ್ಯದ ಬಗ್ಗೆ ಇಂದಿಗೂ ಪಶ್ಚಾತ್ತಾಪ ಪಡುತ್ತಾರೆ.

ಮುಂಬೈ (ಮಾ.11): ಬಾಲಿವುಡ್‌ನ ಈ ಖ್ಯಾತ ನಟಿ ತನ್ನ ಚೊಚ್ಚಲ ಸಿನಿಮಾದಲ್ಲೇ ಅಂತಹದೊಂದು ದೃಶ್ಯದಲ್ಲಿ ನಟಿಸಿದ್ದರು. ಅದನ್ನು ನೋಡಿದ ಜನ ಈಕೆಯನ್ನು ನೇರವಾಗಿ ಅಂದಿನ ಗ್ಲಾಮರ್ ಬೆಡಗಿ ಮಂದಾಕಿನಿಗೆ ಹೋಲಿಸಲು ಶುರು ಮಾಡಿದರು. ಆದರೆ ಆ ಒಂದು ಸೀನ್ ಬಗ್ಗೆ ಇಂದಿಗೂ ಪಶ್ಚಾತ್ತಾಪವಿದೆ ಎಂದು ಆ ನಟಿ ಹೇಳಿಕೊಳ್ಳುತ್ತಾರೆ. ಯಾರು ಆ ನಟಿ?

ಪ್ರತಿ ವರ್ಷ ಸಾವಿರಾರು ಜನರು ಬೆಳ್ಳಿತೆರೆಯ ಮೇಲೆ ಮಿಂಚುವ ಕನಸು ಹೊತ್ತು ಮಾಯಾನಗರಿ ಮುಂಬೈಗೆ ಬರುತ್ತಾರೆ. ಅವರಲ್ಲಿ ಕೆಲವರು ಮಾತ್ರ ಗುರುತು ಮೂಡಿಸಲು ಸಾಧ್ಯವಾಗುತ್ತದೆ. ಒಬ್ಬ ಕಲಾವಿದನಿಗೆ ಮೊದಲ ಸಿನಿಮಾ ಸಿಗುವುದು ಕೇವಲ ಆರಂಭವಲ್ಲ, ಅದು ಕೆರಿಯರ್ ರೂಪಿಸುವ ದೊಡ್ಡ ಅವಕಾಶ. ಆದರೆ ನಟಿ ಶಿಲ್ಪಾ ಶಿರೋಡ್ಕರ್ ವಿಷಯದಲ್ಲಿ ಈ ವಿಚಾರ ಬಹಳ ಭಿನ್ನವಾಗಿ ನಡೆಯಿತು. ಮೊದಲ ಸಿನಿಮಾದ ನಂತರ ಅವರಿಗೆ ದೊಡ್ಡ ಮಟ್ಟದ ಪಶ್ಚಾತ್ತಾಪ ಉಂಟಾಗಿತ್ತು.

36 ವರ್ಷಗಳ ಹಿಂದೆ ನಡೆದಿದ್ದೇನು?

1990ರಲ್ಲಿ ‘ಕಿಶನ್ ಕನ್ಹಯ್ಯಾ’ ಸಿನಿಮಾ ತೆರೆಕಂಡಿತ್ತು. ಮಾರ್ಚ್ 9ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಈಗ 36 ವರ್ಷಗಳು ಪೂರೈಸಿವೆ. ಈ ಚಿತ್ರದ ಮೂಲಕವೇ ಶಿಲ್ಪಾ ಶಿರೋಡ್ಕರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಚಿತ್ರದಲ್ಲಿ ಅವರು 'ರಾಧಾ' ಎಂಬ ಹಳ್ಳಿಯ ಹುಡುಗಿ ಪಾತ್ರದಲ್ಲಿ ನಟಿಸಿದ್ದರು. ಮೊದಲ ಸಿನಿಮಾವಾಗಿದ್ದರೂ ‘ಕಿಶನ್ ಕನ್ಹಯ್ಯಾ’ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಯಿತು ಮತ್ತು 1990ರ ಸಾಲಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಚಿತ್ರವಾಗಿ ಹೊರಹೊಮ್ಮಿತು. ಆದರೂ, ಈ ಸಿನಿಮಾದ ಒಂದು ದೃಶ್ಯದಿಂದ ಶಿಲ್ಪಾ ದೊಡ್ಡ ಮಟ್ಟದ ನೆಗೆಟಿವ್‌ ಪಬ್ಲಿಸಿಟಿ ಪಡೆದುಕೊಂಡರು.

ಟೀಕೆಗೆ ಗುರಿಯಾದ ಆ ಒಂದು ಹಾಡು

ಚಿತ್ರದ ‘ರಾಧಾ ಬಿನಾ ಹೈ ಕಿಶನ್ ಅಕೇಲಾ’ ಎಂಬ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಹಾಡಿನ ಸಂಗೀತ ಮತ್ತು ಸಾಹಿತ್ಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಈ ಹಾಡಿನ ಒಂದು ದೃಶ್ಯದಲ್ಲಿ ಶಿಲ್ಪಾ ಶಿರೋಡ್ಕರ್ ಜಲಪಾತದ ಕೆಳಗೆ ಬಿಳಿ ಬಣ್ಣದ ಪಾರದರ್ಶಕ ಸೀರೆ ಧರಿಸಿ ಕಾಣಿಸಿಕೊಂಡಿದ್ದರು. ಈ ದೃಶ್ಯವನ್ನು ‘ರಾಮ್ ತೇರಿ ಗಂಗಾ ಮೈಲಿ’ ಚಿತ್ರದ ಮಂದಾಕಿನಿಯವರ ಪ್ರಸಿದ್ಧ ದೃಶ್ಯಕ್ಕೆ ಹೋಲಿಸಲು ಜನರು ಶುರು ಮಾಡಿದರು. ವೃತ್ತಿಜೀವನದ ಆರಂಭದಲ್ಲೇ ಈ ಸೀನ್‌ನಿಂದಾಗಿ ಶಿಲ್ಪಾ ಟೀಕೆಗೆ ಗುರಿಯಾದರು. ನೆಗೆಟಿವ್‌ ಪಬ್ಲಿಸಿಟಿಯ ನಂತರ ಸ್ವತಃ ನಟಿಯೇ, "ಈ ಸಿನಿಮಾ ಸೈನ್ ಮಾಡಿದ್ದಕ್ಕೆ ನನಗೆ ಸ್ವಲ್ಪ ಸಮಯ ಪಶ್ಚಾತ್ತಾಪವಾಗಿತ್ತು" ಎಂದು ಹೇಳಿಕೊಂಡಿದ್ದರು.

ಕಿಶನ್ ಕನ್ಹಯ್ಯಾ ಚಿತ್ರವನ್ನು ಹೃತಿಕ್‌ ರೋಶನ್‌ ತಂದೆ ರಾಕೇಶ್ ರೋಷನ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಆಕ್ಷನ್-ಕಾಮಿಡಿ ಚಿತ್ರದಲ್ಲಿ ಅನಿಲ್ ಕಪೂರ್ ದ್ವಿಪಾತ್ರದಲ್ಲಿ ನಟಿಸಿದ್ದರು. ಮಾಧುರಿ ದೀಕ್ಷಿತ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ಚಿತ್ರಕ್ಕಾಗಿ ಮೊದಲು ಅಮಿತಾಭ್ ಬಚ್ಚನ್ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಆ ಸಮಯದಲ್ಲಿ ಅವರು ಬ್ಯುಸಿಯಾಗಿದ್ದರಿಂದ ಚಿತ್ರವನ್ನು ನಿರಾಕರಿಸಿದರು. ಆನಂತರ ಈ ಪಾತ್ರಕ್ಕೆ ಅನಿಲ್ ಕಪೂರ್ ಅವರನ್ನು ಆಯ್ಕೆ ಮಾಡಲಾಯಿತು.

Radha Bina Hai Kishen Akela {HD} Video Song | Kishen Kanhaiya | Anil Kapoor, Shilpa Shirodkar