ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ವಿವಾಹದ ಬಗ್ಗೆ ಮಹತ್ವದ ಹೇಳಿಕೆ ಹೊರಬಿದ್ದಿದೆ. ಗೌರಿ ಮದುವೆಯ ನಂತರ ತನ್ನ ಧರ್ಮವನ್ನು ಬದಲಾಯಿಸಲಿಲ್ಲ ಎನ್ನುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ.

ಬಾಲಿವುಡ್ನ ಜನಪ್ರಿಯ ಜೋಡಿಗಳಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಕೂಡ ಒಬ್ಬರು. ಶಾರುಖ್ ಮುಸ್ಲಿಂ ಧರ್ಮದವರಾಗಿದ್ದು, ಗೌರಿ ಹಿಂದೂ ಪಂಜಾಬಿ ಕುಟುಂಬದಲ್ಲಿ ಜನಿಸಿದವರು. 1991ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅವರ ಮದುವೆ ಬಗ್ಗೆ ಚರ್ಚೆ ಆಗ್ತಿದೆ. ಅಖಿಲ ಭಾರತ ಇಮಾಮ್ ಸಂಘಟನೆಯ (AIIO) ಮುಖ್ಯಸ್ಥ ಡಾ. ಇಮಾಮ್ ಉಮರ್ ಇಲಿಯಾಸಿ ಅವರು ಇತ್ತೀಚೆಗೆ ಎಬಿಪಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಈ ಜೋಡಿಯ ಮದುವೆ ಬಗ್ಗೆ ಮಾತನಾಡಿದ್ದಾರೆ. ಷರಿಯತ್ ಪ್ರಕಾರ ಇವರ ಮದುವೆ ಮಾನ್ಯವೇ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಇದೀಗ ಗಮನ ಸೆಳೆದಿದೆ.

ಶಾರುಖ್-ಗೌರಿ ಮದುವೆ ಬಗ್ಗೆ ಉಮರ್ ಇಲಿಯಾಸಿ ಹೇಳಿದ್ದೇನು?

ಇಸ್ಲಾಮಿಕ್ ಕಾನೂನಾದ ಷರಿಯತ್ ಬಗ್ಗೆ ಮಾತನಾಡಿದ ಡಾ. ಉಮರ್ ಅಹ್ಮದ್ ಇಲಿಯಾಸಿ, ಮುಸ್ಲಿಂ ವ್ಯಕ್ತಿಯೊಬ್ಬ ಯಹೂದಿ ಅಥವಾ ಕ್ರೈಸ್ತ ಧರ್ಮದ ಮಹಿಳೆಯನ್ನು ಮದುವೆಯಾದರೆ ಆಕೆ ಧರ್ಮಾಂತರ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂದು ಹೇಳಿದ್ದಾರೆ. ಆದರೆ ಹಿಂದೂ ಸೇರಿದಂತೆ ಇತರ ಧರ್ಮದ ಮಹಿಳೆಯನ್ನು ಮುಸ್ಲಿಂ ಪುರುಷ ಮದುವೆಯಾಗುವ ಸಂದರ್ಭದಲ್ಲಿ ಮಹಿಳೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮದುವೆಯ ಪ್ರಸ್ತಾಪ ಮಾಡಲಾಗಿದೆ. ಶಾರುಖ್ ಮುಸ್ಲಿಂ ಧರ್ಮದವರಾಗಿದ್ದು, ಗೌರಿ ಹಿಂದೂ ಧರ್ಮದವರು. ಮದುವೆಯಾದ ಬಳಿಕವೂ ಗೌರಿ ತಮ್ಮ ಧರ್ಮವನ್ನು ಬದಲಾಯಿಸಿಕೊಂಡಿಲ್ಲ. ಹಾಗಾದರೆ ಷರಿಯತ್ ದೃಷ್ಟಿಕೋನದಲ್ಲಿ ಇವರ ಮದುವೆ ಮಾನ್ಯವೇ ಎಂದು ಪ್ರಶ್ನಿಸಲಾಗಿದೆ.

ಇದಕ್ಕೆ ಉತ್ತರಿಸಿದ ಉಮರ್ ಇಲಿಯಾಸಿ, ಷರಿಯತ್ ಪ್ರಕಾರ ಹೇಳುವುದಾದರೆ, ಹುಡುಗ ಮತ್ತು ಹುಡುಗಿ ಇಬ್ಬರೂ ಮುಸ್ಲಿಮರಾಗಿರಬೇಕು. ಗೌರಿ ಹಿಂದೂ ಆಗಿದ್ದರೆ ಷರಿಯತ್ ಇದಕ್ಕೆ ಅನುಮತಿ ನೀಡುವುದಿಲ್ಲ. ಷರಿಯತ್ಗೆ ತನ್ನದೇ ಆದ ನಿಯಮ ಮತ್ತು ಕಾನೂನುಗಳಿವೆ. ಅದರ ಪ್ರಕಾರ ಇಬ್ಬರೂ ಮುಸ್ಲಿಮರಾಗಿರಬೇಕು. ಅವರು ಆ ನಿಯಮವನ್ನು ಪಾಲಿಸದಿದ್ದರೆ ಅದಕ್ಕೆ ಅವರೇ ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಶಾರುಖ್-ಗೌರಿ ಮದುವೆ ಕುರಿತು ತಮ್ಮ ಧಾರ್ಮಿಕ ಕಾನೂನಿನ ವ್ಯಾಖ್ಯಾನವನ್ನು ಉಮರ್ ಇಲಿಯಾಸಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಡಾ. ಇಮಾಮ್ ಉಮರ್ ಇಲಿಯಾಸಿ, ಲವ್ ಜಿಹಾದ್, ಧರ್ಮಾಂತರ, ಹಿಂದೂ-ಮುಸ್ಲಿಂ ವಿವಾಹ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇಸ್ಲಾಮಿಕ್ ಕಾನೂನಾದ ಷರಿಯತ್ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.