ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ನಿಂದ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಬಾಲಿವುಡ್ ನಟ ರಿತೇಶ್ ದೇಶಮುಖ್ ಮತ್ತು ಅವರ ಪತ್ನಿ ಜೆನೆಲಿಯಾ ಡಿಸೋಜಾ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ?
ರಿತೇಶ್ -ಜೆನಿಲಿಯಾ ಫೋಟೊ ಹಂಚಿಕೊಂಡ ರಾಹುಲ್ ಗಾಂಧಿ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಇತ್ತೀಚಿನ ಸೋಶಿಯಲ್ ಮೀಡಿಯಾ ಸ್ಟೋರಿಯಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರು ತಮ್ಮ ಸ್ಟೋರಿಯಲ್ಲಿ ನಟ ರಿತೇಶ್ ದೇಶಮುಖ್ ಮತ್ತು ಅವರ ಪತ್ನಿ ಜೆನೆಲಿಯಾ ಡಿಸೋಜಾ ಅವರ ಪ್ರೀತಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ದಿವಂಗತ ತಂದೆ ರಾಜೀವ್ ಗಾಂಧಿ ಅವರ ಫೋಟೋಗೆ ಹೋಲುವ ಬಾಲ್ಯದ ನೆನಪೊಂದನ್ನು ತಮ್ಮ ಬೆಂಬಲಿಗರೊಂದಿಗೆ ಹಂಚಿಕೊಂಡಿದ್ದರು. ಅದಕ್ಕೆ ರಿಲೇಟ್ ಆಗುವಂತೆ ಇದೀಗ ರಿತೇಶ್ ಮತ್ತು ಜೆನಿಲಿಯಾ ಫೋಟೊ ಹಂಚಿಕೊಂಡಿದ್ದಾರೆ.
ರಾಹುಲ್ ಅವರ ಸ್ಟೋರಿಯಲ್ಲಿ ಏನಿದೆ ವಿಶೇಷ?
ರಾಹುಲ್ ಗಾಂಧಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬಾಲಿವುಡ್ ಜೋಡಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಿತೇಶ್ ದೇಶಮುಖ್ ಅವರ ಮಡಿಲಲ್ಲಿ ಅವರ ಪತ್ನಿ ಜೆನೆಲಿಯಾ ಕುಳಿತಿದ್ದಾರೆ. ಅಲ್ಲದೆ, ಅವರು ನಗುತ್ತಾ ರಿತೇಶ್ಗೆ ಏನೋ ತಿನ್ನಿಸುತ್ತಿರುವುದು ಕಾಣಿಸುತ್ತದೆ. ದಂಪತಿಯ ಈ ರೊಮ್ಯಾಂಟಿಕ್ ಕ್ಷಣಗಳು ರಾಹುಲ್ ಅವರಿಗೆ ತುಂಬಾ ಇಷ್ಟವಾಗಿವೆ. ಹೀಗಾಗಿ ಅವರು ಈ ಫೋಟೋವನ್ನು ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಫೋಟೋ ಜೊತೆಗೆ ಯಾವುದೇ ಕ್ಯಾಪ್ಷನ್ ಬರೆದಿಲ್ಲ.
ಈ ಹಿಂದೆ ತಂದೆ-ತಾಯಿಯ ಸಂಬಂಧದ ಬಗ್ಗೆ ಮಾತನಾಡಿದ್ದ ರಾಹುಲ್
ಕಳೆದ ನವೆಂಬರ್ 16ರಂದು ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘Belonging: A Journey of Love’ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ರಾಹುಲ್ ಗಾಂಧಿ ಪೋಷಕರ ಸಂಬಂಧದ ಬಗ್ಗೆ ಮಾತನಾಡಿದ್ದರು. ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾ, ತಮ್ಮ ತಂದೆ-ತಾಯಿ ಬಹಿರಂಗವಾಗಿಯೇ ಪ್ರೀತಿ ವ್ಯಕ್ತಪಡಿಸುತ್ತಿದ್ದರು ಎಂದು ರಾಹುಲ್ ಹೇಳಿದ್ದರು. ಕುಟುಂಬದೊಂದಿಗೆ ಊಟ ಮಾಡುವಾಗ ತಮ್ಮ ತಾಯಿ ತಂದೆಯ ಮಡಿಲಲ್ಲಿ ಕುಳಿತುಕೊಳ್ಳುತ್ತಿದ್ದರು ಎಂದೂ ಅವರು ನೆನಪಿಸಿಕೊಂಡಿದ್ದರು. ಆ ಹೇಳಿಕೆಗೆ ಟಿಕೆಗಳು ವ್ಯಕ್ತವಾಗಿದ್ದವು. ಇದೀಗ ಜೆನಿಲಿಯಾ ಮತ್ತು ರಿತೇಶ್ ದೇಶ್ ಮುಖ್ ಅದೇ ರೀತಿಯ ಪೋಸ್ಟ್ ಹಂಚಿಕೊಂಡಿದ್ದು, ಈ ಸಂದರ್ಭದಲ್ಲಿ ರಾಹುಲ್ ಈ ಫೋಟೊ ಶೇರ್ ಮಾಡುವ ಮೂಲಕ, ಟಿಕಾಕಾರರಿಗೆ ಉತ್ತರ ಕೊಟ್ಟಂತಿದೆ.
ಪೋಸ್ಟ್ ಬಗ್ಗೆ ಟೀಕೆ ವ್ಯಕ್ತವಾಗಿತ್ತು
ತಮ್ಮ ತಾಯಿ ತಂದೆಯ ಪೋಸ್ಟ್ ಜೊತೆಗೆ ಎಲಿಫೆಂಟಾ ಗುಹೆಗಳಲ್ಲಿ ಕೆತ್ತಲಾಗಿರುವ ಶಿವ ಮತ್ತು ಪಾರ್ವತಿಯರ ಅರ್ಧನಾರೀಶ್ವರ ರೂಪದ ಪ್ರತಿಮೆಯ ಫೋಟೋವನ್ನೂ ಅವರು ಹಂಚಿಕೊಂಡಿದ್ದರು. ಇದನ್ನು ಅರ್ಧನಾರೀಶ್ವರ ಸ್ವರೂಪ ಎಂದು ಕರೆಯಲಾಗುತ್ತದೆ. ತಮ್ಮ ತಂದೆ-ತಾಯಿಯ ಸಂಬಂಧದ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ಬಳಿಕ ಅವರು ಸಾಕಷ್ಟು ಟ್ರೋಲಿಂಗ್ ಮತ್ತು ಟೀಕೆಗಳನ್ನು ಎದುರಿಸಬೇಕಾಯಿತು. ರಾಜಕೀಯ ವಲಯದಲ್ಲಿ ಕೂಡ ಚರ್ಚೆ ಶುರುವಾಗಿತ್ತು. ಅವರ ವಿರೋಧಿಗಳು ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ರಾಹುಲ್ ವಿರುದ್ಧ ಟೀಕೆ ಮಾಡಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡ ರಾಹುಲ್ ಗಾಂಧಿ ಅವರನ್ನು ವ್ಯಂಗ್ಯವಾಡಿದ್ದರು.
















