'ಶಾಕುಂತಲಂ' ಹೀನಾಯ ಸೋಲು: ಭಗವದ್ಗೀತೆಯ ಸಾಲು ಹಂಚಿಕೊಂಡ ನಟಿ ಸಮಂತಾ
'ಶಾಕುಂತಲಂ' ಹೀನಾಯ ಸೋಲಿನ ಬಳಿಕ ನಟಿ ಸಮಂತಾ ಭಗವದ್ಗೀತೆಯ ಸಾಲು ಹಂಚಿಕೊಂಡಿದ್ದಾರೆ.
ಸೌತ್ ಸ್ಟಾರ್ ಸಮಂತಾ ರುತ್ ಪ್ರಭು ಸಕ್ಸಸ್‌ಗಾಗಿ ಎದುರು ನೋಡುತ್ತಿದ್ದಾರೆ. ಇತ್ತೀಚೆಗಷ್ಟೆ ರಿಲೀಸ್ ಆದ ಶಾಕುಂತಲಂ ಮೇಲೆ ಸ್ಯಾಮ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು, ದೊಡ್ಡ ಸಕ್ಸಸ್‌ನ ಕನಸು ಕಂಡಿದ್ದರು. ಆದರೆ ಶಾಕುಂತಲಂ ಹೀನಾಯ ಸೋಲು ಕಂಡಿದೆ. ಇದು ಸಮಂತಾಗೆ ದೊಡ್ಡ ಹಿನ್ನಡೆಯಾಗಿದೆ. ವಿಚ್ಛೇದನ, ಅನಾರೋಗ್ಯ ಅಂತ ತೀವ್ರ ನೋವುತಿಂದಿದ್ದ ಸಮಂತಾಗೆ ಈಗ ಸಿನಿಮಾ ಸೋಲು ಮತ್ತಷ್ಟು ಕುಗ್ಗಿಸಿದೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆದ ‘ಶಾಕುಂತಲಂ’ ಬಾಕ್ಸ್ ಆಫೀಸ್ ಗಳಿಕೆ ನೀರಸವಾಗಿದೆ. ‘ಶಾಕುಂತಲಂ’ ಸೋಲಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಸ್ಯಾಮ್ ಸಾಮಾಜಿಕ ಜಾಲತಾಣದಲ್ಲಿ ಭಗವದ್ಗೀತೆಯ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಸಮಂತಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಸಮಂತಾ ಬಗ್ಗೆ ಇತ್ತೀಚೆಗೆ ಕೆಲವರು ಚುಚ್ಚು ಮಾತುಗಳನ್ನು ಆಡಿದ್ದರು. ಸಮಂತಾ ಸ್ಟಾರ್ ಗಿರಿ ಹೋಗಿದೆ, ಚೀಪ್ ಗಿಮಿಕ್ ಮಾಡುತ್ತಿದ್ದಾರೆ ಅಂತ ಸಮಂತಾ ಅವರನ್ನು ಜರಿದಿದ್ದರು. ಇದೀಗ ಸಮಂತಾ ಹಂಚಿಕೊಂಡಿರುವ ಭಗವದ್ಗೀತೆಯ ಸಾಲುಗಳು ಅಂಥವರಿಗೆ ತಿರುಗೇಟು ನೀಡಿದಂತೆ ಇದೆ. ಅಷ್ಟಕ್ಕೂ ಸಮಂತಾ ಯಾವ ಸಾಲನ್ನು ನೆನಪಿಸಿಕೊಂಡಿದ್ದಾರೆ ನೋಡಿ.
‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ. ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ’ ಎಂದು ಸಮಂತಾ ಬರೆದುಕೊಂಡಿದ್ದಾರೆ. ಹೀಗೆಂದರೆ ‘ನೀನು ನಿನ್ನ ಕರ್ತವ್ಯವನ್ನು ತಿಳಿದು ಅದನ್ನು ಮಾಡುವುದರಲ್ಲಿ ಮನಸ್ಸಿಡಬೇಕು. ಫಲದ ಚಿಂತೆ ಮಾಡದೆ ಕರ್ತವ್ಯ ಮಾಡುವುದರಲ್ಲಿ ಶ್ರದ್ಧೆ ಇಡಬೇಕು. ನಿನ್ನ ಕರ್ತವ್ಯ ಮಾಡದೇ ಇರುವ ವಿಚಾರ ನಿನಗೆ ಬಾರದೇ ಇರಲಿ’ ಎಂದು ಈ ಸಾಲುಗಳ ಅರ್ಥವಿದೆ.
Shaakuntalam: ಬಾಕ್ಸ್ ಆಫೀಸ್‌ನಲ್ಲಿ ಸೋತ ಸಮಂತಾ ಸಿನಿಮಾ: 2ನೇ ದಿನ ಗಳಿಸಿದ್ದಷ್ಟು?
ಸಮಂತಾ ಅವರ ಈ ಪೋಸ್ಟ್ ಅಭಿಮಾನಿಗಳ ಹೃದಯ ಗೆದ್ದಿದೆ. ಅನೇಕರು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಶ್ರಮವಹಿಸಿ ಮಾಡುವುದು ಮಾತ್ರ ಅವರ ಕೈಯಲ್ಲಿದೆ. ಫಲ ಅವರ ಕೈಯಲ್ಲಿಲ್ಲ. ಶಾಕುಂತಲಂ ಸಿನಿಮಾಗೆ ಸಮಂತಾ ಸಾಕಷ್ಟು ಶ್ರಮ ಹಾಕಿದ್ದರು. ಆದರೆ ನಿರೀಕ್ಷೆಯ ಫಲ ಸಿಕ್ಕಿಲ್ಲ. ಹಾಗಾಗಿ ಸಮಂತಾ ಈ ಪೋಸ್ಟ್ ಶೇರ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಶಾಕುಂತಲಂ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಿದೆ. ತೆಲುಗು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಶಾಕುಂತಲಂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮೊದಲ ದಿನ 5 ರೂಪಾಯಿ ಗಳಿಸಿದ್ದ ಶಾಕುಂತಲಂ 2ನೇ ದಿನ ಇದರ ಅರ್ಧದಷ್ಟು ಕಲೆಕ್ಷನ್ ಮಾಡಲು ವಿಫಲವಾಗಿದೆ. ಹೌದು 2ನೇ ದಿನ ಶಾಕುಂತಲಂ ಕೇವಲ 1.5 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂರದೆ ದಿನ 1.5 ಕೋಟಿ ಗಳಿಸಿದೆ. ವೀಕೆಂಡ್ ನಲ್ಲಿ ಉತ್ತಮ ಕಲೆಕ್ಷನ್ ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಕೂಡ ವಿಫಲವಾಗಿದೆ.
ಆಕೆಯ ಕರಿಯರ್ ಮುಗೀತು, ಮತ್ತೆ ಸ್ಟಾರ್ ಆಗಲು ಸಾಧ್ಯವೇ ಇಲ್ಲ; ಸಮಂತಾ ವಿರುದ್ಧ ನಿರ್ಮಾಪಕ ಕಿಡಿ
ದೊಡ್ಡ ಬಜೆಟ್‌ನಲ್ಲಿ ಬಂದ ಶಾಕುಂತಲಂ ಸೋಲು ಸಿನಿಮಾತಂಡಕ್ಕೆ ದೊಡ್ಡ ನಷ್ಟವಾಗಿದೆ. ಗುಣಶೇಖರ್ ಸಾರಥ್ಯದಲ್ಲಿ ಬಂದ ಈ ಸಿನಿಮಾದಲ್ಲಿ ಸಮಂತಾ ಶಾಕುಂತಲೆಯಾಗಿ ನಟಿಸಿದ್ರೆ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದಾರೆ. ಸಮಂತಾ ಮಗಳ ಪಾತ್ರದಲ್ಲಿ ಅಲ್ಲುಅರ್ಜುನ್ ಪುತ್ರಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ.