‘ನನ್ನ ಮದುವೆ ಯಾರಿಗಾದರೂ ಏಕೆ ಅಷ್ಟು ದೊಡ್ಡ ವಿಷಯವಾಗಿದೆಯೋ ನನಗೆ ತಿಳಿಯುತ್ತಿಲ್ಲ. ಯಾರೂ ಸಂಬಂಧವನ್ನಾಗಲಿ ಅಥವಾ ಮದುವೆಯನ್ನಾಗಲಿ ಅಡಗಿಸಿಡಲು ಸಾಧ್ಯವಿಲ್ಲ. ಇದು ಸೂಕ್ಷ್ಮ ವಿಷಯವಾಗಿದ್ದು, ಜನರು ಅದನ್ನು ಸಂವೇದನಾಶೀಲತೆಯಿಂದ ನಿರ್ವಹಿಸಬೇಕು’ ಎಂದು ಅವರು ವಿನಂತಿಸಿದ್ದರು.

ನಟಿ ಅನುಷ್ಕಾ ಶೆಟ್ಟಿ ಮದುವೆ ಗಾಸಿಪ್; ವದಂತಿಗಳಿಗೆ ಬ್ರೇಕ್ ಹಾಕಿದ ನಟಿ ಟೀಮ್: ಸೋಷಿಯಲ್ ಮೀಡಿಯಾ, ಮಾಧ್ಯಮಗಳ ವಿರುದ್ಧ ಗರಂ!

ದಕ್ಷಿಣ ಭಾರತದ ಖ್ಯಾತ ನಟಿ, ಅಸಂಖ್ಯಾತ ಅಭಿಮಾನಿಗಳ ಪಾಲಿನ 'ಜೇಜಮ್ಮ' ಅನುಷ್ಕಾ ಶೆಟ್ಟಿ ಅವರ ಮದುವೆಯ ವಿಷಯ ಸದಾ ಸುದ್ದಿಯಲ್ಲಿರುತ್ತದೆ. ಬಾಹುಬಲಿ ಚಿತ್ರದ ನಂತರ ಅವರ ಮದುವೆಯ ಬಗ್ಗೆ ಹತ್ತಾರು ವದಂತಿಗಳು ಹರಿದಾಡುತ್ತಲೇ ಇವೆ. ಇತ್ತೀಚೆಗೆ ಅನುಷ್ಕಾ ಅವರು ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿತ್ತು. ಆದರೆ, ಈ ಬಾರಿ ಈ ವದಂತಿಗಳಿಗೆ ಅನುಷ್ಕಾ ಶೆಟ್ಟಿ ಅವರ ಅಧಿಕೃತ ತಂಡ (Team Anushka Shetty) ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಖಡಕ್ ಉತ್ತರ ನೀಡಿದೆ.

ನೈತಿಕತೆ ಪಾಠ

ಅನುಷ್ಕಾ ಅವರ ಮದುವೆಯ ಬಗ್ಗೆ ವರದಿ ಮಾಡುತ್ತಿರುವ ಕೆಲವು ಮಾಧ್ಯಮ ಸಂಸ್ಥೆಗಳ ವಿರುದ್ಧ ತಂಡವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. "ಅನುಷ್ಕಾ ಶೆಟ್ಟಿ ಅವರ ಮದುವೆಯ ಬಗ್ಗೆ ಸತತವಾಗಿ ಪೋಸ್ಟ್ ಮಾಡುತ್ತಿರುವ ಸೋಷಿಯಲ್ ಮೀಡಿಯಾಗಳಿಗೆ, ಕೆಲವು ಮಾಧ್ಯಮಗಳಿಗೆ ವಿನಂತಿ; ಯಾರೊಬ್ಬರ ವೈಯಕ್ತಿಕ ಜೀವನವನ್ನು ದಿನನಿತ್ಯದ ಮುಖ್ಯಾಂಶಗಳನ್ನಾಗಿ ಮಾಡುವ ಮೊದಲು ಅಧಿಕೃತ ದೃಢೀಕರಣಕ್ಕಾಗಿ ಕಾಯಿರಿ. ಕೇವಲ ಊಹೆ ಮತ್ತು ಪರಿಶೀಲಿಸದ ಮಾಹಿತಿಯನ್ನು ಪ್ರಕಟಿಸುವುದು ಪತ್ರಿಕೋದ್ಯಮವಲ್ಲ, ಅದು ಬೇರೆಯವರ ಖಾಸಗಿತನದ ಮೇಲಿನ ಹಲ್ಲೆ" ಎಂದು ತಂಡವು ಕಿಡಿಕಾರಿದೆ.

ವಯಸ್ಸಿನ ಬಗ್ಗೆ ಟೀಕಿಸುವವರಿಗೆ ತಪರಾಕಿ:

ಅನುಷ್ಕಾ ಅವರ ಮದುವೆಯ ಸುದ್ದಿಯಲ್ಲಿ ಅವರ ವಯಸ್ಸನ್ನು (44) ಹೈಲೈಟ್ ಮಾಡುತ್ತಿರುವುದಕ್ಕೆ ತಂಡವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. "ಪ್ರತಿ ಪೋಸ್ಟ್‌ನಲ್ಲಿ '44' ಎಂದು ಹೈಲೈಟ್ ಮಾಡುವುದು ವಯಸ್ಸಿನ ಅವಮಾನ (Age-shaming) ಮಾಡಿದಂತೆ ಕಾಣುತ್ತಿದೆ. ಪುರುಷ ನಟರ ವಿಷಯದಲ್ಲಿ ಈ ರೀತಿ ವಯಸ್ಸನ್ನು ದೊಡ್ಡದು ಮಾಡದ ಮಾಧ್ಯಮಗಳು, ಮಹಿಳಾ ನಟಿಯರ ವಿಷಯದಲ್ಲಿ ಮಾತ್ರ ಯಾಕೆ ವಿಭಿನ್ನವಾಗಿ ನಡೆದುಕೊಳ್ಳುತ್ತಿವೆ?" ಎಂದು ತಂಡವು ಪ್ರಶ್ನಿಸಿದೆ. ಅನುಷ್ಕಾ ಶೆಟ್ಟಿ ಅವರು ಯಾವುದೇ PR ಸ್ಟಂಟ್ ಅಥವಾ ಸೋಷಿಯಲ್ ಮೀಡಿಯಾ ಪ್ರಚಾರವಿಲ್ಲದೆ ಗೌರವಯುತವಾಗಿ ವೃತ್ತಿಜೀವನ ಕಟ್ಟಿಕೊಂಡಿದ್ದಾರೆ, ಅದನ್ನು ಗೌರವಿಸಿ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಸಂವೇದನಾಶೀಲತೆ ಇರಲಿ:

ಈ ಹಿಂದೆ 2020ರಲ್ಲಿ ಉತ್ತರ ಭಾರತದ ಕ್ರಿಕೆಟಿಗನ ಜೊತೆ ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿದಾಗ ಸ್ವತಃ ಅನುಷ್ಕಾ ಪ್ರತಿಕ್ರಿಯಿಸಿದ್ದರು. "ನನ್ನ ಮದುವೆ ಯಾರಿಗಾದರೂ ಏಕೆ ಅಷ್ಟು ದೊಡ್ಡ ವಿಷಯವಾಗಿದೆಯೋ ನನಗೆ ತಿಳಿಯುತ್ತಿಲ್ಲ. ಯಾರೂ ಸಂಬಂಧವನ್ನಾಗಲಿ ಅಥವಾ ಮದುವೆಯನ್ನಾಗಲಿ ಅಡಗಿಸಿಡಲು ಸಾಧ್ಯವಿಲ್ಲ. ಇದು ಸೂಕ್ಷ್ಮ ವಿಷಯವಾಗಿದ್ದು, ಜನರು ಅದನ್ನು ಸಂವೇದನಾಶೀಲತೆಯಿಂದ ನಿರ್ವಹಿಸಬೇಕು" ಎಂದು ಅವರು ವಿನಂತಿಸಿದ್ದರು.

ವೃತ್ತಿಜೀವನದ ಅಪ್‌ಡೇಟ್:

ಸದ್ಯ ಅನುಷ್ಕಾ ಶೆಟ್ಟಿ ಅವರು ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಜಯಸೂರ್ಯ ಅವರೊಂದಿಗೆ 'ಕಥನಾರ್: ದಿ ವೈಲ್ಡ್ ಸೋರ್ಸೆರರ್' (Kathanar: The Wild Sorcerer) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಅವರ ಸಂಪೂರ್ಣ ಗಮನ ಸಿನಿಮಾದ ಮೇಲಿದ್ದು, ಮದುವೆಯ ಬಗ್ಗೆ ಯಾವುದೇ ಅಧಿಕೃತ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರ ತಂಡ ಸ್ಪಷ್ಟಪಡಿಸಿದೆ.

ಒಟ್ಟಿನಲ್ಲಿ, ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಕುತೂಹಲವಿರುವುದು ಸಹಜವಾದರೂ, ಅದು ಅವರ ಘನತೆಗೆ ಧಕ್ಕೆ ತರುವಂತಿರಬಾರದು ಎಂಬುದು ಅನುಷ್ಕಾ ತಂಡದ ವಾದವಾಗಿದೆ. ಮದುವೆ ಫಿಕ್ಸ್ ಆದರೆ ನಾವೇ ಅಧಿಕೃತವಾಗಿ ತಿಳಿಸುತ್ತೇವೆ ಅಲ್ಲಿಯವರೆಗೆ ಕಾಯಿರಿ ಎನ್ನುವ ಮೂಲಕ ಎಲ್ಲಾ ಗಾಸಿಪ್‌ಗಳಿಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ.