ಎಸ್ ಜಾನಕಿ ಮತ್ತು ಎಸ್‌ಪಿಬಿ ಕಾಂಬಿನೇಷನ್ ಅಂದರೆ ಅದು ಕೇವಲ ಹಾಡಲ್ಲ, ಅದೊಂದು ಎಮೋಷನ್. ಕನ್ನಡದ ‘ಜೋತೆಯಲಿ ಜೊತೆ ಜೊತೆಯಲಿ’ ಇರಲಿ ಅಥವಾ ತೆಲುಗು-ತಮಿಳಿನ ನೂರಾರು ಮೆಲೋಡಿಗಳಿರಲಿ, ಅವರಿಬ್ಬರ ಧ್ವನಿ ಒಂದಾದರೆ ಅಲ್ಲಿ ಸ್ವರ್ಗವೇ ಧರೆಗಿಳಿಯುತ್ತಿತ್ತು.

ಎಸ್‌ ಜಾನಕಿ-ಎಸ್‌ಪಿಬಿ ಜೋಡಿ: ಎಂಜಿನಿಯರ್ ಆಗಬೇಕಿದ್ದ ಎಸ್‌ಪಿಬಿ ಗಾಯಕರಾಗಿದ್ದು ಜಾನಕಮ್ಮನಿಂದಲೇ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಗೀತ ಲೋಕದ 'ಅಮ್ಮ', ಎಲ್ಲರ ಮೆಚ್ಚಿನ 'ಜಾನಕಮ್ಮ' ಎನಿಸಿಕೊಂಡಿದ್ದ, ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ ಎಸ್. ಜಾನಕಿ (S. Janaki) ಅವರು ಕೊನೆಯುಸಿರು ಎಳೆದಿದ್ದಾರೆ. ಜುಲೈ 11ರ ಈ ಸಂಜೆ ಭಾರತೀಯ ಕಲಾ ಲೋಕಕ್ಕೆ ಒಂದು ಕರಾಳ ದಿನ. ಸುಮಾರು ಆರು ದಶಕಗಳ ಕಾಲ ತನ್ನ ಕಂಠಸಿರಿಯಿಂದ ಜಗತ್ತನ್ನೇ ಆಳಿದ ಜಾನಕಮ್ಮ, ಇಂದು ನೆನಪು ಮಾತ್ರ. ಆದರೆ, ಅವರ ಅಗಲಿಕೆಯ ಈ ಸಂದರ್ಭದಲ್ಲಿ ಒಂದು ರೋಚಕ ಮತ್ತು ಭಾವುಕ ಕಥೆ ಮತ್ತೆ ಮುನ್ನೆಲೆಗೆ ಬಂದಿದೆ. ಅದು- ಗಾನಗಂಧರ್ವ ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ನಡುವಿನ ಅಪರೂಪದ ಸಂಬಂಧ!

ಎಂಜಿನಿಯರ್ ಕೈಗೆ ಮೈಕ್ ಕೊಟ್ಟ ‘ಗುರು’:

ಹಲವರಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ.. ಒಂದು ವೇಳೆ ಎಸ್. ಜಾನಕಿ ಅಮ್ಮ ಅಂದು ಆ ಒಂದು ಮಾತನ್ನು ಹೇಳದಿದ್ದರೆ, ನಮಗೆ ಮತ್ತೊಬ್ಬ ಶ್ರೇಷ್ಠ ‘ಹಾಡುವ ಕೋಗಿಲೆ’ ಎಸ್‌ಪಿಬಿ (SP Balasubrahmanyam ) ಸಿಗುತ್ತಲೇ ಇರಲಿಲ್ಲವೇನೋ! ಹೌದು, ಎಸ್‌ಪಿಬಿ ಅವರು ಆರಂಭದಲ್ಲಿ ಒಬ್ಬ ಗೆಜೆಟೆಡ್ ಶ್ರೇಣಿಯ ಇಂಜಿನಿಯರ್ ಆಗಬೇಕೆಂದು ಕನಸು ಕಂಡು ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೆ, ವಿಧಿಯ ಆಟವೇ ಬೇರೆಯಿತ್ತು. ಆಂಧ್ರಪ್ರದೇಶದಲ್ಲಿ ನಡೆದ ಒಂದು ಲಘು ಸಂಗೀತ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಬಂದಿದ್ದ ಜಾನಕಿ ಅಮ್ಮ, ಎಳೆಯ ಹುಡುಗ ಬಾಲಸುಬ್ರಹ್ಮಣ್ಯಂ ಹಾಡನ್ನು, ಅವರ ಧ್ವನಿಯ ಮಾಧುರ್ಯ ಹಾಗೂ ಸಂಗೀತದ ಪ್ರತಿಭೆ ಕಂಡು ದಂಗಾಗಿ ಹೋದರು.

ಹಾಡು ಮುಗಿದ ತಕ್ಷಣ ಆ ಹುಡುಗನನ್ನು ಹತ್ತಿರ ಕರೆದ ಜಾನಕಮ್ಮ, "ಮಗನೇ, ನಿನ್ನ ಧ್ವನಿಯಲ್ಲಿ ಏನೋ ಒಂದು ಮ್ಯಾಜಿಕ್ ಇದೆ. ನೀನು ಯಾರನ್ನೂ ನಕಲು ಮಾಡದೆ ನಿನ್ನದೇ ಶೈಲಿಯಲ್ಲಿ ಹಾಡುತ್ತಿದ್ದೀಯಾ. ನೀನು ಚಿತ್ರರಂಗಕ್ಕೆ ಬಾ, ನೀನು ದೊಡ್ಡ ಗಾಯಕನಾಗುತ್ತೀಯಾ" ಎಂದು ಆಶೀರ್ವದಿಸಿದ್ದರು. ಅದೇ ಮಾತು ಎಸ್‌ಪಿಬಿ ಅವರ ಜೀವನದ ದಿಕ್ಕನ್ನೇ ಬದಲಿಸಿತು. ಮುಂದೆ ಎಸ್‌ಪಿಬಿ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ, "ನಾನು ಇಂದು ಈ ಮಟ್ಟಕ್ಕೆ ಬರಲು ಜಾನಕಿ ಅಮ್ಮನ ಆ ಅಂದಿನ ಆಶೀರ್ವಾದವೇ ಕಾರಣ" ಎಂದು ಪ್ರತಿ ವೇದಿಕೆಯಲ್ಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ಬಾಲು ಅಗಲಿದಾಗ ಜಾನಕಮ್ಮ ಬರೆದಿದ್ದ ಆ ‘ಕಣ್ಣೀರಿನ ಪತ್ರ’:

ಕೆಲವು ವರ್ಷಗಳ ಹಿಂದೆ ಎಸ್‌ಪಿಬಿ ಅವರು ನಿಧನರಾದಾಗ ಇಡೀ ಜಗತ್ತೇ ಕಣ್ಣೀರು ಸುರಿಸಿತ್ತು. ಆಗ ಜಾನಕಿ ಅಮ್ಮ ಅವರು ಒಂದು ಸುದೀರ್ಘ ಪತ್ರ ಬರೆದಿದ್ದರು. ಅದರಲ್ಲಿ ಅವರು ತಮ್ಮ ವಿನಯವಂತಿಕೆಯನ್ನು ಮೆರೆದಿದ್ದರು. "ನಾನು ಎಷ್ಟೋ ಮಕ್ಕಳಿಗೆ ನೀನು ದೊಡ್ಡ ಗಾಯಕನಾಗುತ್ತೀಯಾ ಎಂದು ಆಶೀರ್ವದಿಸಿದ್ದೇನೆ. ಆದರೆ ಎಲ್ಲರೂ ಎಸ್‌ಪಿಬಿ ತರಹ ಆಗಲು ಸಾಧ್ಯವಾಗಲಿಲ್ಲ. ಅವನಲ್ಲಿ ದೈವದತ್ತವಾದ ಪ್ರತಿಭೆ ಇತ್ತು. ಯಾವುದೇ ಕಠಿಣ ರಾಗವನ್ನಾದರೂ ಅವನು ಕ್ಷಣಾರ್ಧದಲ್ಲಿ ಗ್ರಹಿಸುತ್ತಿದ್ದ. ನಾವು ಪ್ರತಿದಿನ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ರೆಕಾರ್ಡಿಂಗ್ ರೂಮ್‌ನಲ್ಲಿ ಕಳೆಯುತ್ತಿದ್ದೆವು. ನಾವಿಬ್ಬರೂ ಸಾವಿರಾರು ಯುಗಳ ಗೀತೆಗಳನ್ನು ಹಾಡಿದ್ದೇವೆ. ಅವನು ನನ್ನ ಪಾಲಿಗೆ ಮಗನಂತಿದ್ದ" ಎಂದು ಬರೆದಿದ್ದರು.

ಮುಕ್ತಾಯಗೊಂಡ ಸುವರ್ಣ ಯುಗ:

ಜಾನಕಿ ಮತ್ತು ಎಸ್‌ಪಿಬಿ ಕಾಂಬಿನೇಷನ್ ಅಂದರೆ ಅದು ಕೇವಲ ಹಾಡಲ್ಲ, ಅದೊಂದು ಎಮೋಷನ್. ಕನ್ನಡದ ‘ಜೋತೆಯಲಿ ಜೊತೆ ಜೊತೆಯಲಿ’ ಇರಲಿ ಅಥವಾ ತೆಲುಗು-ತಮಿಳಿನ ನೂರಾರು ಮೆಲೋಡಿಗಳಿರಲಿ, ಅವರಿಬ್ಬರ ಧ್ವನಿ ಒಂದಾದರೆ ಅಲ್ಲಿ ಸ್ವರ್ಗವೇ ಧರೆಗಿಳಿಯುತ್ತಿತ್ತು. ಇಂದು ಜಾನಕಮ್ಮ ಕೂಡ ಇಹಲೋಕ ತ್ಯಜಿಸುವ ಮೂಲಕ ಸಂಗೀತ ಲೋಕದ ಆ ಸುವರ್ಣ ಯುಗಕ್ಕೆ ಅಂತಿಮ ತೆರೆ ಬಿದ್ದಿದೆ.

ಜಾನಕಿ ಅಮ್ಮ, ನೀವು ಹಾಗೂ ಎಸ್‌ಪಿಬಿ ನಮ್ಮನ್ನಗಲಿದ್ದರೂ ನಿಮ್ಮ ಹಾಡುಗಳು, ನಿಮ್ಮಿಬ್ಬರ ಜೋಡಿಯ ಹಾಡುಗಳು ಹಾಗೂ ನೀವೇ ಬೆಳೆಸಿದ ಎಸ್‌ಪಿಬಿ ಹಾಡುಗಳು ನಮ್ಮೊಂದಿಗೆ ಸದಾ ಕಾಲ ಇರುತ್ತವೆ. ಅವು ಎಂದೆಂದೂ ಅಮರ. ಕೋಟಿ ಕನ್ನಡಿಗರ ಪರವಾಗಿ ಗಾನ ಕೋಗಿಲೆಯಾಗಿದ್ದ ನಿಮಗಿದೋ ಕೋಟಿಕೋಟಿ ಭಾವಪೂರ್ಣ ಶ್ರದ್ಧಾಂಜಲಿ.