ನಟಿ-ನಿರ್ದೇಶಕಿ ರೂಪಾ ಅಯ್ಯರ್ ಅವರ ನೇತಾಜಿ ಸುಭಾಷ್‌ಚಂದ್ರ ಬೋಸ್ ಕುರಿತ 'ಆಜಾದ್‌ ಭಾರತ್‌' ಹಿಂದಿ ಚಿತ್ರವು ಸಂಸತ್ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರವು ಬೋಸ್ ಸ್ಥಾಪಿಸಿದ ಮೊದಲ ಮಹಿಳಾ ಸೈನ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಅವರ ಕಥೆಯನ್ನು ಹೇಳುತ್ತದೆ.

  • ನೇತಾಜಿ ಜೀವನಾಧರಿತ ‘ಆಜಾದ್‌ ಭಾರತ್‌’ ಚಿತ್ರ
  •  ಸ್ವತಃ ನಟಿಸಿ ನಿರ್ದೇಶಿಸಿರುವ ರೂಪಾ ಅಯ್ಯರ್‌

ನವದೆಹಲಿ (ಮಾ.31): ಕನ್ನಡದ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರು ನಟಿಸಿ, ನಿರ್ದೇಶಿಸಿರುವ ಹಿಂದಿ ಸಿನಿಮಾ ‘ಆಜಾದ್‌ ಭಾರತ್‌’ ಏ.1ರಂದು ದೆಹಲಿಯ ಸಂಸತ್‌ ಭವನದ ಸಿ.ಎಂ.ಸಿ. ಬಾಲಯೋಗಿ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಮುಂಗಡ ಟಿಕೆಟ್‌ ರಾಜ್ಯಸಭಾ ಕಾರ್ಯಾಲಯದ ಸ್ವಾಗತ ಕಚೇರಿಯಲ್ಲಿ ದೊರೆಯಲಿದೆ.

ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು, ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರು ಚಿತ್ರವನ್ನು ವೀಕ್ಷಿಸಲಿದ್ದಾರೆ. ಈ ಚಿತ್ರ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಅವರ ಕುರಿತಾದ ಕಥಾಹಂದರ ಹೊಂದಿದೆ. ಬೋಸ್ ಸ್ಥಾಪಿಸಿದ ಮೊದಲ ಮಹಿಳಾ ಸೈನ್ಯದ ಬಗೆಗಿನ ಆಸಕ್ತಿದಾಯಕ ವಿಚಾರಗಳನ್ನು ತೆರೆಮೇಲೆ ತರಲಾಗಿದೆ. ಈ ಚಿತ್ರವನ್ನು ನೇತಾಜಿ ಬೋಸ್‌ ಅವರಿಗೆ ಅರ್ಪಣೆ ಮಾಡಲಾಗಿದೆ.

ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್‌ ತಲ್ಪಡೆ ಬಣ್ಣ ಹಚ್ಚಿದ್ದಾರೆ. 3 ಪ್ರಮುಖ ಮಹಿಳಾ ಪಾತ್ರಗಲಿದ್ದು, ನೀರಾ ಆರ್ಯ ಪಾತ್ರದಲ್ಲಿ ಸ್ವತಃ ರೂಪಾ ಅಯ್ಯರ್‌, ದುರ್ಗಾ ಪಾತ್ರದಲ್ಲಿ ಹಿತಾ ಚಂದ್ರಶೇಖರ್‌ ಹಾಗೂ ಸರಸ್ವತಿ ರಾಜಾಮಣಿ ಪಾತ್ರದಲ್ಲಿ ಇನ್ನೊಬ್ಬ ಜನಪ್ರಿಯ ನಟಿ ನಟಿಸಿದ್ದಾರೆ. ಸುರೇಶ್ ಓಬೇರಾಯ್‌, ಬಿರಾದಾರ್‌, ಸುಚೇಂದ್ರ ಪ್ರಸಾದ್‌ ಮೊದಲಾದವರ ತಾರಾಗಣವಿದೆ. ಚಿತ್ರದಲ್ಲಿ 7 ಹಾಡುಗಳಿವೆ. ವಿಶೇಷವೆಂದರೆ, ಒಂದು ಹಾಡನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌ ಹಾಡಿದ್ದಾರೆ.