ರಣಬೀರ್, ದೀಪಿಕಾ ಮತ್ತೆ ಜೊತೆಯಾಗಿ ನಟಿಸ್ತಾರಾ? 'ಯೇ ಜವಾನಿ ಹೈ ದಿವಾನಿ' ಪಾರ್ಟ್ 2 ತೆರೆಗೆ?
10 ವರ್ಷಗಳ ಹಿಂದೆ ಬಿಡುಗಡೆಯಾಗಿರುವ ಯೇ ಜವಾನಿ ಹೈ ದಿವಾನಿ ಸೀಕ್ವೆಲ್ ರೆಡಿ ಆಗಲಿದೆಯಾ? ನಟ ರಣಬೀರ್ ಕಪೂರ್ ಹೇಳಿದ್ದೇನು?
ರಣಬೀರ್ ಕಪೂರ್ (Ranbir Kapoor) ಅವರ 2013 ರ ಚಲನಚಿತ್ರ ಯೇ ಜವಾನಿ ಹೈ ದಿವಾನಿ (YJHD) ಇದುವರೆಗೆ ಹೆಚ್ಚು ಇಷ್ಟಪಟ್ಟ ಚಿತ್ರಗಳಲ್ಲಿ ಒಂದಾಗಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸಿರುವವರು ಕರಣ್ ಜೋಹರ್. ಪ್ರಣಯ ಪ್ರಧಾನ ಹಾಸ್ಯ ಚಲನಚಿತ್ರವಿದು. ಚಿತ್ರದಲ್ಲಿ ರಣ್‍ಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇದು 2008ರಲ್ಲಿ ಬಿಡುಗಡೆಗೊಂಡ ಬಚ್‍ನಾ ಎ ಹಸೀನೋ ನಂತರ ರಣಬೀರ್ ಮತ್ತು ದೀಪಿಕಾ ಅವರ ಎರಡನೆಯ ಸೂಪರ್ಹಿಟ್ ಚಿತ್ರವಾಗಿದೆ. ಚಾರಣ ಪ್ರವಾಸದ ಸಮಯದಲ್ಲಿ ಭೇಟಿಯಾಗುವ ನಾಯಕ-ನಾಯಕಿಯ ಸುತ್ತ ಇದರ ಕಥಾಹಂದರವಿದೆ. ಇಬ್ಬರೂ ಸ್ನೇಹಿತರಾಗಿ ಪ್ರೀತಿಯಲ್ಲಿ ಬೀಳುತ್ತಾರೆ, ಆದರೆ ಇಬ್ಬರೂ ಅದನ್ನು ವ್ಯಕ್ತಪಡಿಸುವುದಿಲ್ಲ. ನಂತರ ಕಾರಣಾಂತರಗಳಿಂದ ಇಬ್ಬರೂ ದೂರವಾಗುತ್ತಾರೆ. ಆದರೆ ಸ್ನೇಹಿತನ ಮದುವೆಯಲ್ಲಿ ಮತ್ತೆ ಭೇಟಿಯಾದಾಗ ಪ್ರೇಮ ಮುಂದುವರೆಯುವ ಕಥಾವಸ್ತು ಹೊಂದಿದೆ ಈ ಚಿತ್ರ.
ಈ ಚಿತ್ರ ಬಿಡುಗಡೆಯಾಗಿ 10 ವರ್ಷಗಳ ಬಳಿಕ ಮತ್ತೆ ಈ ಸಿನಿಮಾ ಮುನ್ನೆಲೆಗೆ ಬರಲು ಕಾರಣ, ಈ ಚಿತ್ರದ ಪಾರ್ಟ್-2 ಅಂದರೆ ಸೀಕ್ವೆಲ್ ಬರುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ ನಟ ರಣಬೀರ್ ಕಪೂರ್. ಅವರು ಇತ್ತೀಚಿಗೆ ತಮ್ಮ ಫ್ಯಾನ್ಸ್ ಜೊತೆ ನಡೆಸಿದ ವರ್ಚುವಲ್ ಚಾಟ್‌ನಲ್ಲಿ, ಈ ಚಿತ್ರವು ಉತ್ತಮ ಸೀಕ್ವೆಲ್ ಮಾಡುತ್ತದೆ ಎಂದು ನಾನು ಬಯಸಿದ್ದೇನೆ ಎನ್ನುವ ಮೂಲಕ ಇದರ ಸೂಚನೆ ನೀಡಿದ್ದಾರೆ. ಚಾಟ್ (Chat) ಸಂದರ್ಭದಲ್ಲಿ ಒಬ್ಬರು ಬ್ರಹ್ಮಾಸ್ತ್ರವನ್ನು ಹೊರತುಪಡಿಸಿ ಅವರ ಯಾವ ಚಲನಚಿತ್ರದ ಸೀಕ್ವೆಲ್ ಮಾಡಬಹುದು ಎಂದಾಗ ಈ ವಿಷಯವನ್ನು ರಣಬೀರ್ ಪ್ರಸ್ತಾಪಿಸಿದ್ದಾರೆ.
ಪ್ಯಾಂಟ್ ಮಧ್ಯೆ ಟೀ ಚೆಲ್ಲಿ ಪೇಚಿಗೆ ಸಿಲುಕಿದ ನಟ Ranbir Kapoor
ಯೇ ಜವಾನಿ ಹೈ ದೀವಾನಿ (Yeh Jawaani Hai Deewani ) ಉತ್ತಮ ಸೀಕ್ವೆಲ್ ಮಾಡುವ ಎಲ್ಲಾ ಅರ್ಹತೆ ಪಡೆದುಕೊಂಡಿದೆ. ನಿರ್ದೇಶಕ ಅಯನ್ ಮುಖರ್ಜಿ ಅವರಿಗೆ ಒಳ್ಳೆಯ ಕಥೆ ಬರೆಯುವ ಗುಣವಿದೆ ಎಂದು ನಟ ಹೇಳಿದ್ದಾರೆ. ಆದರೆ ಸದ್ಯ ತಾವು ಬ್ರಹ್ಮಾಸ್ತ್ರ ಸರಣಿಯ ಮೇಲೆ ಕೇಂದ್ರೀಕರಿಸಿರುವುದಾಗಿ ಹೇಳಿದ್ದಾರೆ. ಕಳೆದ ಏಳು ವರ್ಷಗಳ ಕಾಲ ಬ್ರಹ್ಮಾಸ್ತ್ರ ತಯಾರಿಕೆಯಲ್ಲಿತ್ತು, ಮತ್ತು ಅಯಾನ್ ಅವರು YJHD ಚಿತ್ರೀಕರಣದ ಸಮಯದಲ್ಲಿ ಚಿತ್ರದ ಕಲ್ಪನೆಯನ್ನು ಹೊಂದಿದ್ದರು ಎಂದಿದ್ದಾರೆ ರಣಬೀರ್. ಯೇ ಜವಾನಿ ಹೈ ದಿವಾನಿ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಅದು ಬಿಡುಗಡೆಯಾಗಿ 10 ವರ್ಷಗಳಾಗಿವೆ. ಈಗ ಸೀಕ್ವೆಲ್ ಮಾಡುವಲ್ಲಿ ಯಾವುದೇ ತೊಂದರೆಯಿಲ್ಲ. ಅದರಲ್ಲಿ ಬರುವ ಅವಿ ಮತ್ತು ಅದಿತಿ ಪಾರ್ಟ್ ವಿಷಯಕ್ಕೆ ಬರುವುದಾದರೆ, 10 ವರ್ಷಗಳ ನಂತರ ಅವರ ಜೀವನದಲ್ಲಿ ಏನಾಗಬಹುದು ಎನ್ನುವುದನ್ನು ತೋರಿಸಬಹುದು ಎಂದಿದ್ದಾರೆ.
ಆ ಪಾತ್ರಗಳನ್ನು ಅನ್ವೇಷಿಸುವುದು ತುಂಬಾ ಕುತೂಹಲಕಾರಿಯಾಗಿದೆ. ಇದು ಸಾಕಷ್ಟು ಆಸಕ್ತಿದಾಯಕ ಮತ್ತು ಸಂತೋಷವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಬಾಲಿವುಡ್ ಹಂಗಾಮಾದೊಂದಿಗಿನ 2018 ರ ಸಂದರ್ಶನದಲ್ಲಿ, ರಣಬೀರ್ ಚಿತ್ರದ ಸಂಭವನೀಯ ಮುಂದಿನ ಭಾಗದ ಬಗ್ಗೆ ಮಾತನಾಡಿದ್ದರು ಮತ್ತು ಬ್ರಹ್ಮಾಸ್ತ್ರ ಭಾಗ 1 ಮತ್ತು ಭಾಗ 2 ರ ನಡುವೆ ಅದನ್ನು ಮಾಡಬಹುದು ಎಂದು ಹೇಳಿದರು. ಆಗಲೂ ಅವರು ಯೇ ಜವಾನಿ ಹೈ ದಿವಾನಿ 2ರ ಬಗ್ಗೆ ಮಾತನಾಡಿದ್ದರು. ಬ್ರಹ್ಮಾಸ್ತ್ರ ಭಾಗ 1 ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆಯಾಯಿತು ಮತ್ತು ಏಪ್ರಿಲ್ 2023 ರಲ್ಲಿ, ಫ್ರ್ಯಾಂಚೈಸ್‌ನ ಎರಡನೇ ಮತ್ತು ಮೂರನೇ ಭಾಗವನ್ನು ಒಟ್ಟಿಗೆ ಚಿತ್ರೀಕರಿಸುವುದಾಗಿ ಅಯಾನ್ ಘೋಷಿಸಿದರು. ಎರಡನೇ ಭಾಗವನ್ನು ಈಗ ಡಿಸೆಂಬರ್ 2026 ರಲ್ಲಿ ಬಿಡುಗಡೆ (Release) ಮಾಡಲು ನಿರ್ಧರಿಸಲಾಗಿದೆ ಮತ್ತು ಮೂರನೇ ಭಾಗವು ಡಿಸೆಂಬರ್ 2027 ರಲ್ಲಿ ಬಿಡುಗಡೆಯಾಗಲಿದೆ.
ಅಂದಹಾಗೆ ಯೇ ಜವಾನಿ ಹೈ ದಿವಾನಿ ಚಿತ್ರವು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಮಾರ್ಚ್ 2012 ರಿಂದ ಜನವರಿ 2013 ರವರೆಗೆ ಹಿಮಾಚಲ ಪ್ರದೇಶ , ರಾಜಸ್ಥಾನ , ಪ್ಯಾರಿಸ್ , ಮುಂಬೈ ಮತ್ತು ಕಾಶ್ಮೀರದಲ್ಲಿ ವ್ಯಾಪಕವಾಗಿ ಚಿತ್ರೀಕರಿಸಲಾಗಿತ್ತು. ಚಲನಚಿತ್ರ ಸಂಗೀತ ಮತ್ತು ಧ್ವನಿಪಥದ ಆಲ್ಬಂ ಅನ್ನು ವಿ. ಮಣಿಕಂದನ್ (V.Manikandan) ಅವರ ಛಾಯಾಗ್ರಹಣದೊಂದಿಗೆ ಪ್ರೀತಮ್ ಸಂಯೋಜಿಸಿದ್ದಾರೆ. ಹಾಡುಗಳ ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ಮತ್ತು ಕುಮಾರ್ ಬರೆದಿದ್ದಾರೆ.
Deepika Padukone: ಹಾಲಿವುಡ್ಡಲ್ಲೂ ಮಿಂಚುತ್ತಿರೋ ನಟಿ ಕಲಿತದ್ದೆಷ್ಟು ಗೊತ್ತಾ? ಹೌಹಾರಿದ ಫ್ಯಾನ್ಸ್!