12 ಎಕರೆ ಜಾಗದಲ್ಲಿ ರಜನೀಕಾಂತ್ ಆಸ್ಪತ್ರೆ: ರಾಜಕೀಯದಿಂದ ದೂರವಿದ್ದು ಬಡವರಿಗೆ ಉಚಿತ ಚಿಕಿತ್ಸೆ ಗುರಿ
ತಮಿಳುನಾಡಿನಲ್ಲಿ 12 ಎಕರೆ ಜಾಗ ಖರೀದಿ ಮಾಡಿರುವ ಸೂಪರ್‌ಸ್ಟಾರ್ ರಜನೀಕಾಂತ್, ಅಲ್ಲಿ ಬಡವರಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಬಡವರಿಗಾಗಿ ಚೆನ್ನೈನಲ್ಲಿ ಬೃಹತ್ ಆಸ್ಪತ್ರೆ ನಿರ್ಮಿಸಲು ಹೊರಟಿದ್ದು ಈ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. ತಮ್ಮ ಸರಳತೆ, ಅಧ್ಯಾತ್ಮಿಕ ಆಸಕ್ತಿಯಿಂದಲೂ ನಟ ಸದಾ ಗುರುತಿಸಲ್ಪಡುತ್ತಾರೆ. ಜನರ ಬಗ್ಗೆ ವಿಶೇಷ ಕಾಳಜಿಯುಳ್ಳ ಇವರು ಸಮಾಜಸೇವೆ ಮಾಡುತ್ತಲೇ ಇರುತ್ತಾರೆ. ರಾಜಕೀಯಕ್ಕೆ ಬಂದು ಜನಸೇವೆ ಮಾಡುವ ಆಸೆ ಇತ್ತೀಚೆಗೆ ರಜನೀಕಾಂತ್ ವ್ಯಕ್ತಪಡಿಸಿದ್ದರು. ಆದರೆ ಪದೇ ಪದೇ ಕಾಡುವ ಅನಾರೋಗ್ಯದ ಕಾರಣ ರಾಜಕೀಯ ಪ್ರವೇಶದಿಂದ ಹಿಂದೆ ಸರಿಯುವ ಮನಸ್ಸು ಮಾಡಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡದಿದ್ದರೆ ಏನಂತೆ? ಒಬ್ಬ ಒಳ್ಳೆಯ ನಟನಾಗಿಯೇ ಬಡವರಿಗೆ ಅನುಕೂಲ ಕಲ್ಪಿಸಬಹುದಲ್ಲ ಎಂದಿರುವ ನಟ, ಇದೀಗ ಬಡವರ ಪ್ರಯೋಜನಕ್ಕಾಗಿ ಆಸ್ಪತ್ರೆಯೊಂದರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗೆ ರಜನೀಕಾಂತ್ ಅವರು, ತಮ್ಮ ರಾಜಕೀಯ ಪಕ್ಷವನ್ನು ಸಮಾಜ ಸೇವಾ ಸಂಘವನ್ನಾಗಿ ಬದಲಾವಣೆ ಮಾಡಿದ್ದಾರೆ. ರಾಜಕೀಯ ಪ್ರವೇಶ ಮಾಡದಿದ್ದರೂ ಜನಸೇವೆಯನ್ನು ಮುಂದುವರೆಸುವುದಾಗಿ ಹೇಳಿರುವ ನಟ, ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಬೃಹತ್ ಆಸ್ಪತ್ರೆ ಕಟ್ಟಲು ಮುಂದಾಗಿದ್ದಾರೆ. ಅಷ್ಟಕ್ಕೂ ನಟ ಈ ಆಸ್ಪತ್ರೆ ಕಟ್ಟುತ್ತಿರುವುದು ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪುರೂರದಲ್ಲಿ. ಅಲ್ಲಿ 12 ಎಕರೆ ಜಾಗವನ್ನು ಖರೀದಿ ಮಾಡಿದ್ದಾರೆ ರಜನಿಕಾಂತ್. ಚೆನ್ನೈ ಹಾಗೂ ತಿರುಪ್ಪುರೂರು ನಡುವೆ ಸುಮಾರು 45 ಕಿ.ಮೀ ಅಂತರವಿದ್ದು ಇಲ್ಲಿ ಜಮೀನು ಖರೀದಿಸಿದ್ದಾರೆ. ಈಚೆಗೆ ಅವರು ಈ ಜಮೀನನ್ನು ನೋಂದಣಿ ಕೂಡ ಮಾಡಿಸಿದ್ದರು. ಅಲ್ಲಿಯೇ ಆಸ್ಪತ್ರೆ ಕಟ್ಟುತ್ತಾರೆ ಎಂದು ಹೇಳಲಾಗುತ್ತಿದೆ. ಜಾಗದ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರಬರಲಿಲ್ಲವಾದರೂ ಆಸ್ಪತ್ರೆ ಕಟ್ಟುವ ಉದ್ದೇಶಕ್ಕಾಗಿಯೇ ಈ ಜಮೀನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
ರಜನೀಕಾಂತ್ ‘ಸಂಘಿ‘ ವಿವಾದ: ಅಪ್ಪ-ಅಮ್ಮಗಳ ಮಾತಿನ ಮಧ್ಯೆ ಬಂದ ನಟ ಅಹಿಂಸಾ ಚೇತನ್!
ಆಸ್ಪತ್ರೆ ಕಟ್ಟುವ ಕಾರ್ಯ ಬಹುತೇಕ ಮುಗಿಯುತ್ತಾ ಬಂದಿದೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಇಲ್ಲಿ ಭೂಮಿ ಪೂಜೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. ಇಲ್ಲಿ ಬಡವರಿಗಾಗಿ ಏನೇನು ಸೌಲಭ್ಯಗಳು ಸಿಗಲಿವೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಆದರೆ ನಟನ ಈ ಕಾರ್ಯಕ್ಕೆ ಇದಾಗಲೇ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಇನ್ನು ರಜನೀಕಾಂತ್ ಅವರ ಸಿನಿಮಾದ ವಿಷಯಕ್ಕೆ ಬರುವುದಾದರೆ, ಇಲ್ಲಿಯವರೆಗೆ ಇವರು ಕೊಟ್ಟಿರುವ ಬ್ಲಾಕ್ಬಸ್ಟರ್ ಚಿತ್ರಗಳಿಗೆ ಲೆಕ್ಕವೇ ಇಲ್ಲ. ಆದರೆ ಈಚೆಗೆ ಇವರ ಪುತ್ರಿ ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ ಯಾಕೋ ಯಶಸ್ಸು ಕಾಣಿಸಲಿಲ್ಲ. ಇದರಲ್ಲಿ ರಜನೀಕಾಂತ್ ನಟಿಸಿದ್ದರು. ಆದರೆ ನಟನೆಯ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿತು. ಆದರೆ ಇನ್ನೂ ಕೆಲವು ಚಿತ್ರಗಳು ಇವರ ಕೈಯಲ್ಲಿ ಇವೆ. ಟಿಜೆ ಜ್ಞಾನವೇಲು ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಬಳಿಕ ‘ಜೈಲರ್ 2’ ಸಿನಿಮಾ ಹಾಗೂ ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾವಾಲಾ ನಿರ್ಮಿಸುತ್ತಿರುವ ಭಾರಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾನಲ್ಲಿ ರಜನೀಕಾಂತ್ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ.
ಬಾಲಿವುಡ್ ಇಂಡಸ್ಟ್ರಿ ತೆಗಳಿ, ದಕ್ಷಿಣದ ಚಿತ್ರೋದ್ಯಮ ಹೊಗಳಿದ ನಟ ಇಮ್ರಾನ್ ಹಶ್ಮಿ ಹೇಳಿದ್ದೇನು?