ಇಸ್ರೇಲ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ತಲುಪಿದ ಬಾಲಿವುಡ್ ನಟಿ ನುಶ್ರತ್ ಭರುಚಾ
ಇಸ್ರೇಲ್ ಮೇಲೆ ಹಮಾಸ್ ಉಗ್ರರ ಗುಂಪು ಸಾವಿರಾರು ರಾಕೆಟ್‌ಗಳ ಸುರಿಮಳೆ ಸುರಿಸಿ, ದಿಢೀರ್ ಯುದ್ಧ ಸಾರಿದೆ. ಇಸ್ರೇಲ್–ಪ್ಯಾಲೆಸ್ತೇನ್ ಅಕ್ಷರಶಃ ಯುದ್ಧ ಭೂಮಿಯಾಗಿದೆ. ಇಸ್ರೇಲ್‌ಗೆ ತೆರಳಿದ್ದ ಬಾಲಿವುಡ್ ನಟಿಯೊಬ್ಬರ ಸಂಪರ್ಕ ಕಡಿತಗೊಂಡಿತ್ತು. ಸದ್ಯ ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಸಂಘರ್ಷ ಏರ್ಪಟ್ಟಿದೆ. ಪ್ಯಾಲೆಸ್ತೀನಿ ಉಗ್ರರು ಶನಿವಾರ 5000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿ, ಇಸ್ರೇಲ್‌ಗೆ ಪ್ರವೇಶಿಸುವುದರೊಂದಿಗೆ ಎರಡೂ ದೇಶಗಳ ನಡುವಣ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರುವಂತಾಗಿದೆ. ಪರಸ್ಪರ ದಾಳಿಯಲ್ಲಿ ಅಪಾರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದೆಲ್ಲದರ ಮಧ್ಯೆ ಇಸ್ರೇಲ್‌ಗೆ ತೆರಳಿದ್ದ ಬಾಲಿವುಡ್ ನಟಿಯೊಬ್ಬರ ಸಂಪರ್ಕ ಕಡಿತಗೊಂಡಿತ್ತು. ಸದ್ಯ ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಹೈಫಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ಗೆ ತೆರಳಿದ್ದ ಬಾಲಿವುಡ್ ನಟಿ ನುಶ್ರತ್ ಭರುಚ್ಚ ಅವರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದರು. 'ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ನುಶ್ರತ್, ಇಸ್ರೇಲ್‌ಗೆ ತೆರಳಿದ್ದರು. ದುರದೃಷ್ಟವಶಾತ್ ಅಲ್ಲಿ ಸಿಲುಕಿಕೊಂಡಿದ್ದಾರೆ. ಇವತ್ತು ಕೊನೆಯ ಬಾರಿ ಮಾತನಾಡಿದ್ದೆವು. ನಾವು ಕರೆ ಮಾಡಿದ್ದ ವೇಳೆ ಅವರು ಸುರಕ್ಷಿತ ಸ್ಥಳದಲ್ಲಿದ್ದರು. ಆ ಬಳಿಕ ಸಂಪರ್ಕ ಸಾಧ್ಯವಾಗಿಲ್ಲ. ನಾವು ನುಶ್ರತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಯಾವುದೇ ಅಪಾಯಕ್ಕೆ ಸಿಲುಕದೆ ಅವರು ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ' ಎಂದು ನಟಿಯ ತಂಡದ ಸದಸ್ಯರು ಹೇಳಿದ್ದರು.
ಸುರಕ್ಷಿತವಾಗಿ ವಿಮಾನ ನಿಲ್ದಾಣ ತಲುಪಿದ ಬಾಲಿವುಡ್ ನಟಿ
ನಟಿಯ ತಂಡ ನೀಡಿರುವ ಇತ್ತೀಚಿನ ಅಪ್‌ಡೇಟ್‌ನ ಪ್ರಕಾರ, ನಟಿ ಸುರಕ್ಷಿತವಾಗಿ ಭಾರತಕ್ಕೆ ತಲುಪಿದ್ದಾರೆ. ನುಶ್ರತ್ ಬರೂಚಾ ತಾಯಿ, 'ಮಗಳು ವಾಪಸ್ ಬರುತ್ತಿದ್ದು, ಸುರಕ್ಷಿತವಾಗಿದ್ದಾರೆ' ಎಂದು ತಿಳಿಸಿದ್ದಾರೆ.
ನಟಿಯ ತಂಡ ಈ ಬಗ್ಗೆ ಮಾತನಾಡಿ, 'ನಾವು ಅಂತಿಮವಾಗಿ ನುಶ್ರತ್ ಅವರನ್ನು ಸಂಪರ್ಕಿಸಲು ಯಶಸ್ವಿಯಾಗಿದ್ದೇವೆ. ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ಅವಳನ್ನು ಸುರಕ್ಷಿತವಾಗಿ ಮನೆಗೆ ಕರೆತರಲಾಗುತ್ತಿದೆ. ನೇರ ವಿಮಾನ ಸಿಗದ ಕಾರಣ ನಟಿ ಸಂಪರ್ಕ ವಿಮಾನದ ಮೂಲಕ ಬರುತ್ತಿದ್ದಾರೆ. ಆಕೆಯ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದಿಲ್ಲ ಆದರೆ ಅವರು ಭಾರತಕ್ಕೆ ಬಂದ ತಕ್ಷಣ, ನಾವು ನಿಮಗೆ ತಿಳಿಸುತ್ತೇವೆ' ಎಂದಿದ್ದರು.
38 ವರ್ಷದ ನಟಿ ಪ್ರಣಯ್ ಮೆಶ್ರಾಮ್ ನಿರ್ದೇಶನದ ಥ್ರಿಲ್ಲರ್ ಮೂವಿ 'ಅಕೇಲಿ'ಯಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಚಿತ್ರದಲ್ಲಿ, ಅವರು ಸಾಮಾನ್ಯ ಭಾರತೀಯ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರಲ್ಲಿ ಅವರು ಯುದ್ಧ ವಲಯದಲ್ಲಿ ಸಿಕ್ಕಿಹಾಕಿಕೊಂಡು ಸುರಕ್ಷಿತವಾಗಿ ಹೊರಬರಲು ಹೆಣಗಾಡುವ ಪಾತ್ರ ಮಾಡಿದ್ದಾರೆ.
ಭಾರಿ ಪೂರ್ವ ತಯಾರಿಯೊಂದಿಗೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದ ಹಮಾಸ್ ಉಗ್ರರು
ಹಮಾಸ್ ಬಂಡುಕೋರರು 5,000ಕ್ಕೂ ಅಧಿಕ ರಾಕೆಟ್ ದಾಳಿಯನ್ನು ಇಸ್ರೇಲ್ ಮೇಲೆ ನಡೆಸಿದ ಪರಿಣಾಮ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಕೂಡ ಪ್ಯಾಲೆಸ್ತೇನ್ ಮೇಲೆ ದಾಳಿ ನಡೆಸಿದೆ.