ಅತ್ಯಂತ ಯೋಜಿತ ರೀತಿಯಲ್ಲಿ ನಿನ್ನೆ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಗೆ ‘ಆಪರೇಷನ್‌ ಅಲ್‌ ಅಕ್ಸಾ ಸ್ಟಾರ್ಮ್‌’ (Operation Al Aqsa Storm) ಎಂಬ ಹೆಸರು ನೀಡಿದ್ದಾರೆ.

ಜೆರುಸಲೇಂ: ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನ ಹೊಂದಿರುವ, ಹಲವಾರು ರಹಸ್ಯ ಮಿಲಿಟರಿ ರಹಸ್ಯ ಕಾರ್ಯಾಚರಣೆ ಮೂಲಕ ವಿಶ್ವವನ್ನೇ ಚಕಿತಗೊಳಿಸಿದ್ದ ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ಶನಿವಾರ ಕಂಡುಕೇಳರಿಯದ ರೀತಿಯಲ್ಲಿ ಅಚ್ಚರಿಯ ದಾಳಿ ನಡೆಸಿದ್ದಾರೆ. ತನ್ಮೂಲಕ ಇಸ್ರೇಲ್‌ ಅನ್ನೇ ನಡುಗಿಸಿದ್ದಾರೆ.

ಶನಿವಾರ ಬೆಳ್ಳಂಬೆಳಗ್ಗೆ ಗಾಜಾಪಟ್ಟಿಯಿಂದ 7000ಕ್ಕೂ ಹೆಚ್ಚು ರಾಕೆಟ್‌ ಉಡಾವಣೆ ಮಾಡಿರುವ ಹಮಾಸ್‌ ಉಗ್ರರು, ಬಳಿಕ ನೆಲ, ಜಲ ಹಾಗೂ ವಾಯುಮಾರ್ಗವಾಗಿ ಇಸ್ರೇಲ್‌ನ ಹಲವು ಕಡೆಗೆ ಲಗ್ಗೆ ಇಟ್ಟಿದ್ದಾರೆ. ಇಸ್ರೇಲ್‌ನ ಮಿಲಿಟರಿ ವಾಹನಗಳನ್ನು ಕಸಿದು ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಇಸ್ರೇಲ್‌ನ ಹಲವು ಕಡೆ ಗುಂಡಿನ ದಾಳಿ ನಡೆಸಿದ್ದಾರೆ. ಇಸ್ರೇಲ್‌ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಘಟನೆಯಲ್ಲಿ 100 ಇಸ್ರೇಲಿಗರು ಸಾವಿಗೀಡಾಗಿದ್ದಾರೆ. 750ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ.

ಹಮಾಸ್‌ ಉಗ್ರರ (Hamas militants) ಈ ಅನಿರೀಕ್ಷಿತ ಹಾಗೂ ಅಚ್ಚರಿಯ ದಾಳಿಗೆ ತಕ್ಷಣವೇ ಇಸ್ರೇಲ್‌ ಕೂಡ ಪ್ರತ್ಯುತ್ತರ ನೀಡಿದ್ದು, ಪ್ಯಾಲೆಸ್ತೀನ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ವೇಳೆ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 1600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ನಡುವೆ ದೇಶವನ್ನುದ್ದೇಶಿಸಿ ಮಾತನಾಡಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇದು ಆಪರೇಷನ್‌ ಅಲ್ಲ, ಯುದ್ಧ. ಈ ದಾಳಿಗೆ ಶತ್ರು ಐತಿಹಾಸಿಕ ಬೆಲೆಯನ್ನು ತೆರಬೇಕಾಗುತ್ತದೆ. ಶತ್ರು ಊಹಿಸಲಾಗದಂತಹ ಬೆಂಕಿಯನ್ನು ವಾಪಸ್‌ ಕೊಡುತ್ತೇವೆ ಎಂದು ಗುಡುಗಿದ್ದಾರೆ. ಇಸ್ರೇಲ್‌ ಮೇಲಿನ ದಾಳಿಯನ್ನು ಜಾಗತಿಕ ಸಮುದಾಯ ತೀವ್ರವಾಗಿ ಖಂಡಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕೂಡಾ, ಇಸ್ರೇಲ್‌ನ ಈ ಸಂಕಷ್ಟದ ಹೊತ್ತಿನಲ್ಲಿ ಅವರ ಜೊತೆ ಇರುವುದಾಗಿ ಘೋಷಿಸಿದ್ದಾರೆ.

ಇಸ್ರೇಲ್‌- ಪ್ಯಾಲೆಸ್ತೀನ್‌ ಸಂಘರ್ಷ : ಅಮೆರಿಕ ಮಧ್ಯಪ್ರವೇಶಕ್ಕೂ ಬಗೆಹರಿಯದ ಯಹೂದಿ ಅರಬ್ಬರ ಬಿಕ್ಕಟ್ಟು

ಆಪರೇಷನ್‌ ಅಲ್‌ ಅಕ್ಸಾ ಸ್ಟಾರ್ಮ್‌

ಅತ್ಯಂತ ಯೋಜಿತ ರೀತಿಯಲ್ಲಿ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಗೆ ‘ಆಪರೇಷನ್‌ ಅಲ್‌ ಅಕ್ಸಾ ಸ್ಟಾರ್ಮ್‌’ (Operation Al Aqsa Storm) ಎಂಬ ಹೆಸರು ನೀಡಿದ್ದಾರೆ. ಬೆಳಗ್ಗೆ 6.30ರಿಂದಲೇ 7000ಕ್ಕೂ ಹೆಚ್ಚು ರಾಕೆಟ್‌ಗಳನ್ನು ತಮ್ಮ ವಶದಲ್ಲಿರುವ ಗಾಜಾದಿಂದ ಇಸ್ರೇಲ್‌ನತ್ತ ಹಾರಿಸಿದ ಹಮಾಸ್‌ ಉಗ್ರರು, ಗಡಿಯಲ್ಲಿ ಇಸ್ರೇಲ್‌ ನಿರ್ಮಿಸಿದ್ದ ಬೇಲಿಯನ್ನು ಕಿತ್ತೆಸೆದಿದ್ದಾರೆ. ಪ್ಯಾರಾಗ್ಲೈಡಿಂಗ್ ಮಾಡಿಕೊಂಡು ವಾಯುಮಾರ್ಗದಲ್ಲಿ ಇಸ್ರೇಲ್‌ ಪ್ರವೇಶಿಸಿದ್ದಾರೆ. ಮತ್ತೊಂದೆಡೆ ಸಮುದ್ರ ಮಾರ್ಗದ ಮೂಲಕವೂ ಇಸ್ರೇಲ್‌ಗೆ ನುಗ್ಗಿದ್ದಾರೆ. ಸದ್ಯ 7 ಸ್ಥಳಗಳಲ್ಲಿ ಉಗ್ರರು- ಇಸ್ರೇಲ್‌ ಯೋಧರ ನಡುವೆ ಕಾಳಗ ನಡೆಯುತ್ತಿದೆ.

ಯುದ್ಧ ಪೀಡಿತ ಇಸ್ರೇಲ್‌ಗೆ ಏರ್‌ಇಂಡಿಯ ವಿಮಾನ ರದ್ದು: ಹಮಾಸ್‌ ಉಗ್ರರ ಕೃತ್ಯಕ್ಕೆ ಜಾಗತಿಕ ಖಂಡನೆ

ಇಸ್ರೇಲ್‌- ಪ್ಯಾಲೆಸ್ತೀನ್‌ ಉಗ್ರರ ನಡುವೆ ಘೋರ ಸಂಘರ್ಷಗಳು ನಡೆದಿವೆಯಾದರೂ ಇಷ್ಟೊಂದು ತೀವ್ರತೆಯ ಉಗ್ರ ದಾಳಿಯನ್ನು ಇಸ್ರೇಲ್‌ ಇತ್ತೀಚಿನ ವರ್ಷಗಳಲ್ಲಿ ಕಂಡೇ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹಮಾಸ್‌ ಉಗ್ರರು ನಡೆಸಿದ ರಾಕೆಟ್‌ ದಾಳಿಯ ಪರಿಣಾಮ ಹಲವು ನಗರಗಳಲ್ಲಿ ಕಟ್ಟಡಗಳು, ವಾಹನಗಳಿಗೆ ಬೆಂಕಿ ಬಿದ್ದು ಭಾರೀ ಪ್ರಮಾಣದಲ್ಲಿ ಹೊಗೆ ಮೇಲೆದ್ದ ದೃಶ್ಯಗಳು ಭೀಕರತೆಯನ್ನು ಸಾರಿ ಹೇಳಿವೆ.

ಹಮಾಸ್‌ ಉಗ್ರರು ಇಸ್ರೇಲ್‌ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿರುವ, ಜನರತ್ತ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡುತ್ತಿರುವ, ಇಸ್ರೇಲ್‌ ಸೇನೆಯ ವಾಹನ ಕದ್ದು ಓಡಾಡುತ್ತಿರುವ, ಇಸ್ರೇಲ್‌ ಯೋಧರನ್ನು ಥಳಿಸಿ ಅವರನ್ನು ಒತ್ತೆ ಹಿಡಿದು ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಇಸ್ರೇಲ್‌ಗೆ ಉಗ್ರರು ನುಗ್ಗಿರುವ ವಿಷಯ ತಿಳಿದು ಪ್ಯಾಲೆಸ್ತೀನಿ ನಾಗರಿಕರು ರಸ್ತೆಗೆ ಇಳಿದು ಸಂಭ್ರಮಾಚರಣೆ ಮಾಡಿದ್ದಾರೆ.

ಇಸ್ರೇಲ್‌ ಸರ್ಕಾರದ ಜೊತೆ ನಿಂತ ವಿರೋಧ ಪಕ್ಷ, 'ಟೀಕಿಸುವ ಸಮಯವಲ್ಲ, ಎಮರ್ಜೆನ್ಸಿ ಸರ್ಕಾರ ರಚಿಸಿ' ಎಂದ ಲಾಪಿಡ್‌!

ಹಮಾಸ್ ದಾಳಿ ಏಕೆ?

ಜೆರುಸಲೇಂನಲ್ಲಿರುವ ಅಲ್‌-ಅಕ್ಸಾ ಮಸೀದಿ (Al-Aqsa Mosque) ಹಾಗೂ ಇಸ್ರೇಲ್‌-ಗಾಜಾ ಪಟ್ಟಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ಯಾಲೆಸ್ತೀನಿಗಳನ್ನು ವರ್ಷಾರಂಭದಲ್ಲಿ ಇಸ್ರೇಲ್‌ ಬಂಧಿಸಿತ್ತು. ಹೀಗಾಗಿ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪ್ಯಾಲೆಸ್ತೀನ್‌ (Palestine) ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ, ದಶಕಗಳಿಂದ ಇಸ್ರೇಲ್‌ ನಡೆಸಿರುವ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಗಾಜಾ ಹಾಗೂ ಅಲ್‌- ಅಕ್ಸಾದಂತಹ ಪವಿತ್ರ ಸ್ಥಳಗಳಲ್ಲಿ ಪ್ಯಾಲೆಸ್ತೀನಿಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಅಂತಾರಾಷ್ಟ್ರೀಯ ಸಮುದಾಯ ತಡೆಯಬೇಕಿದೆ. ಇದೇ ಕಾರಣಕ್ಕೆ ಈ ಸಮರ ಆರಂಭಿಸಿದ್ದೇವೆ ಎಂದು ಹಮಾದ್‌ ವಕ್ತಾರ ಖಾಲೀದ್‌ ಖದೋಮಿ ತಿಳಿಸಿದ್ದಾನೆ.

'ಉಗ್ರರಿಗೆ ಇದೇ Swords of Iron ಗಿಫ್ಟ್‌' ಫೈಟರ್‌ ಜೆಟ್‌ಗೆ ಬಾಂಬ್‌ ಜೋಡಿಸುವ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್‌!

ಎಲ್ಲಿ?

ಇಸ್ರೇಲ್‌ನ ಟೆಲ್‌ ಅವಿವ್‌, ಗೆಡೆರಾ, ಅಶ್ಕೋಲನ್‌, ಖಾನ್‌ ಯೋನಸ್‌, ಪ್ಯಾಲೆಸ್ತೀನ್‌ನ ಗಾಜಾಪಟ್ಟಿ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಕಾಳಗ.

ಯಾವಾಗ?

ನಿನ್ನೆ ಇಸ್ರೇಲ್‌ ಕಾಲಮಾನ ಬೆಳಗ್ಗೆ 6 ಗಂಟೆ ಸುಮಾರಿಗೆ

ಏನಾಯ್ತು?

ಹಮಾಸ್‌ ಉಗ್ರರಿಂದ ಏಕಾಏಕಿ ಇಸ್ರೇಲ್ ಪಟ್ಟಣಗಳ ಮೇಲೆ ರಾಕೆಟ್‌ ದಾಳಿ. ಬಳಿಕ ಭೂಮಿ, ಆಗಸ, ಸಮುದ್ರ ಮಾರ್ಗಗಳ ಮೂಲಕವೂ ಇಸ್ರೇಲ್‌ನೊಳಗೆ ಪ್ರವೇಶ. ಜನರ ಹತ್ಯೆ. ಒತ್ತೆ ಹಿಡಿದು ಪರಾರಿ. ಬಳಿಕ ಇಸ್ರೇಲ್‌ನಿಂದಲೂ ಪ್ರತಿದಾಳಿ. ಭಾರೀ ಸಾವು, ನೋವು. ಆಸ್ತಿಪಾಸ್ತಿಗೆ ಹಾನಿ.

ಕಂಡುಕೇಳದ ಉತ್ತರ ಕೊಡ್ತೀವಿ

ನಾವೀಗ ಯುದ್ಧದಲ್ಲಿದ್ದೇವೆ. ದೇಶದ ಮೀಸಲು ಸೈನಿಕರ ಪಡೆಯನ್ನು ಜಮಾವಣೆ ಮಾಡುತ್ತೇವೆ. ಇದು ಆಪರೇಷನ್‌ ಅಲ್ಲ. ಯುದ್ಧ. ದಾಳಿ ಮಾಡಿರುವ ಶತ್ರು ಕಂಡುಕೇಳರಿಯದ ಬೆಲೆಯನ್ನು ತೆರಬೇಕಾಗುತ್ತದೆ.

 ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಪ್ರಧಾನಿ

ಇಸ್ರೇಲ್‌ಗೆ ಭಾರತದ ಬೆಂಬಲ

ಇಸ್ರೇಲ್‌ ಮೇಲೆ ಉಗ್ರರು ದಾಳಿ ಮಾಡಿದ್ದಾರೆ ಎಂಬ ಸುದ್ದಿಯನ್ನು ಕೇಳಿ ಆಘಾತವಾಗಿದೆ. ನಮ್ಮ ಎಲ್ಲಾ ಯೋಜನೆಗಳು ಮತ್ತು ಪ್ರಾರ್ಥನೆಗಳು ಇಸ್ರೇಲ್‌ನ ಮುಗ್ಧ ಸಂತ್ರಸ್ತರ ಜೊತೆ ಇವೆ. ಇಂತಹ ಸಂಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ ಜೊತೆ ನಿಲ್ಲುತ್ತೇವೆ.

- ನರೇಂದ್ರ ಮೋದಿ, ಭಾರತದ ಪ್ರಧಾನಿ