Alia Bhatt: '30'ರ ಕೇಕ್ ಜೊತೆ ಬಾಲಿವುಡ್ ಕ್ವೀನ್ ಬರ್ತಡೇ ಸೆಲಬ್ರೇಷನ್
ಇಂದು 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಆಲಿಯಾ ಭಟ್, ಹುಟ್ಟುಹಬ್ಬದ ಸಂಭ್ರಮದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಈಚೆಗಷ್ಟೇ ಮುದ್ದಾದ ಹೆಣ್ಣುಮಗುವಿನ ತಾಯಿಯಾಗಿರುವ ನಟಿ ಆಲಿಯಾ ಭಟ್ ಅವರಿಗೆ ಇಂದು 30ನೇ ಹುಟ್ಟುಹಬ್ಬದ ಸಂಭ್ರಮ. ನಿರ್ಮಾಪಕ ಮಹೇಶ್ ಭಟ್ ಮತ್ತು ನಟಿ ಸೋನಿ ರಜ್ದಾನ್ ಅವರ ಪುತ್ರಿ ಆಲಿಯಾ ಭಟ್ (Alia Bhatt). ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಎನ್ನುವ ಖ್ಯಾತಿಯನ್ನೂ ಗಳಿಸಿದ್ದಾರೆ. 1999ರರ ಥ್ರಿಲ್ಲರ್ ಸಂಘರ್ಷ ಚಿತ್ರದಲ್ಲಿ ಬಾಲ್ಯನಟಿಯಾಗಿ ನಟಿಸಿದ್ದ ಆಲಿಯಾ, ನಂತರ, ಭಟ್ ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್(2012) ನಲ್ಲಿ ನಾಯಕಿಯಾಗಿ ನಟಿಸಿದರು. 2 ಸ್ಟೇಟ್ಸ್ (2014), ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ (2014), ಮತ್ತು ಬದ್ರಿನಾಥ್ ಕಿ ದುಲ್ಹಾನಿಯಾ (2017) ಸೇರಿದಂತೆ ಜೋಹರ್ ಅವರ ಸ್ಟುಡಿಯೋ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ನಟಿಸಿದ ಪಾತ್ರಗಳೊಂದಿಗೆ ಅವರು ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಡಿಯರ್ ಜಿಂದಗಿ (2016) , ಹೈವೇ (2014) ಚಿತ್ರದಲ್ಲಿ ಅಪಹರಣಕ್ಕೊಳಗಾದವರ ಪಾತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ಆಲಿಯಾ ಭಟ್ಗೆ ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿ ದಕ್ಕಿತ್ತು. ಇದೇ ಸಮಾರಂಭದಲ್ಲಿ ಮೂರು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನೂ ಅವರು ಗೆದ್ದರು. ಇದಾದ ಬಳಿಕ ಅವರಿಗೆ ಇನ್ನಷ್ಟು ಕೀರ್ತಿ ಕೊಟ್ಟ ಚಿತ್ರ ಉಡ್ತಾ ಪಂಜಾಬ್ (2016), ರಾಜಿ (2018) ಮತ್ತು ಗಲ್ಲಿ ಬಾಯ್ (2019) (Galli Boys) ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.
ಭಾರತೀಯ ಮೂಲದ ಮತ್ತು ಬ್ರಿಟಿಷ್ ಪೌರತ್ವದ ಈ ನಟಿಗೆ ಇದಾಗಲೇ ಮೂರು ಫಿಲ್ಮ್‌ಫೇರ್ (Filmfare) ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳೂ ದೊರೆತಿವೆ. ಈಕೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಈಚೆಗೆ ಬಿಡುಗಡೆಯಾದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ’(Gangubai Kathiawadi) ಯಲ್ಲಿನ ಆಲಿಯಾ ಅಭಿನಯಕ್ಕೆ ಮನಸೋಲದವರೇ ಇಲ್ಲ. ಮುಂಬೈನ ಕಾಮಾಟಿಪುರದ ವೇಶ್ಯೆ, ಮಾಫಿಯಾ ಡಾನ್ ಗಂಗೂಬಾಯಿ ಅವರ ಜೀವನಚರಿತ್ರೆಯೇ ಈ ಚಿತ್ರ. ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಮ್ಯಾಜಿಕ್ ಮಾಡಿತ್ತು. ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರ ಬರೋಬ್ಬರಿ 10.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ನಟಿ ಆಲಿಯಾ ಭಟ್ ತೆಗೆದುಕೊಂಡ್ರು ಬಹುದೊಡ್ಡ ನಿರ್ಧಾರ: ಅಭಿಮಾನಿಗಳು ಶಾಕ್
ಇಂತಿಪ್ಪ ಬೆಡಗಿಗೆ, ಇಂದು 30 ನೇ ಹುಟ್ಟುಹಬ್ಬದ ಸಂಭ್ರಮ. ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಜಾ ಹಣ್ಣುಗಳು ಮತ್ತು ಹೂವುಗಳನ್ನು ಹೊಂದಿರುವ 30 ಎಂದು ಬರೆದಿರುವ ಕೇಕ್ನೊಂದಿಗೆ ಈ ಬ್ಯೂಟಿ ಕಂಗೊಳಿಸುತ್ತಿದ್ದಾರೆ. ಆಲಿಯಾ ಅವರು ತಮ್ಮ ಪ್ರೀತಿಪಾತ್ರರ ಜೊತೆ ಮಧ್ಯರಾತ್ರಿಯ ಸಂಭ್ರಮಾಚರಣೆ ಮಾಡಿದ್ದು, ಅದರ ಫೋಟೋಗಳನ್ನು Instagram ನಲ್ಲಿ ಪಾಪರಾಜಿ ಮತ್ತು ಅಭಿಮಾನಿಗಳ ಪುಟಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋದಲ್ಲಿ ಆಲಿಯಾ ಕೆಂಪು ಮತ್ತು ಬಿಳಿ ಪೈಜಾಮ ಸೆಟ್ ಧರಿಸಿರುವುದನ್ನು ನೋಡಬಹುದು. ಬಿಳಿ ಮಂಚದ ಮೇಲೆ ಕುಳಿತುಕೊಂಡಿರುವ ನಟಿ ಕೈಮುಗಿಯುವ ಫೋಟೋ ವೈರಲ್ ಆಗಿದೆ.
3 ಮತ್ತು 0 ಸಂಖ್ಯೆಗಳ ಆಕಾರದಲ್ಲಿರುವ ತನ್ನ ಎರಡು ಚಾಕೊಲೇಟ್ ಹುಟ್ಟುಹಬ್ಬದ ಕೇಕ್‌ಗಳನ್ನು ಕತ್ತರಿಸುವ ಮೊದಲು ಆಲಿಯಾ ತಮ್ಮ ಕೈಗಳನ್ನು ಮಡಚಿ ಕಣ್ಣುಗಳನ್ನು ಮುಚ್ಚಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಮಗಳು ರಾಹಾ ಕಪೂರ್ ಹುಟ್ಟಿದ ನಂತರ ಇದು ಆಲಿಯಾಳ ಮೊದಲ ಹುಟ್ಟುಹಬ್ಬವಾಗಿದೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಟ-ಪತಿ ರಣಬೀರ್ ಕಪೂರ್ ಜೊತೆ ಆಲಿಯಾ ಕಾಣಿಸಿಕೊಂಡಿದ್ದರು. ನಟರು ಲಂಡನ್‌ನಲ್ಲಿದ್ದಾರೆ ಎಂದು ವರದಿಯಾಗಿದೆ, ಅಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಆಲಿಯಾ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ ಎನ್ನಲಾಗುತ್ತಿದೆ.
ನಾಲ್ಕು ತಿಂಗಳ ಮಗುವಿಗೆ 30 ಶೂಸ್ಗಳು: ಮಗಳ ಗುಟ್ಟೊಂದು ಹೇಳಿದ ನಟ ರಣಬೀರ್ ಕಪೂರ್
ಕಳೆದ ವರ್ಷ, ಆಲಿಯಾ ತಮ್ಮ ಜನ್ಮದಿನದಂದು ತಾಯಿ ಸೋನಿ ರಜ್ದಾನ್ ಮತ್ತು ಸಹೋದರಿ ಶಾಹೀನ್ ಭಟ್ (Shahin Bhatt) ಅವರೊಂದಿಗೆ ಮಾಲ್ಡೀವ್ಸ್‌ನಲ್ಲಿದ್ದರು. ಬ್ರಹ್ಮಾಸ್ತ್ರ: ಭಾಗ 1 - ಶಿವ (2022) ನಲ್ಲಿ ಕೊನೆಯದಾಗಿ ಕಾಣಿಸಿಕೊಂಡ ನಟಿ, 29 ನೇ ಹುಟ್ಟುಹಬ್ಬವನ್ನು ಶೇರ್ ಮಾಡಿಕೊಂಡಿದ್ದರು. ಆಲಿಯಾ, RRR ಸೇರಿದಂತೆ ನಾಲ್ಕು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ರಣವೀರ್ ಸಿಂಗ್ (Ranbir Singh) ಜೊತೆಗಿನ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮತ್ತು ಗಾಲ್ ಗಡೋಟ್ ಮತ್ತು ಜೇಮಿ ಡೋರ್ನನ್ ಜೊತೆಗಿನ ಹಾರ್ಟ್ ಆಫ್ ಸ್ಟೋನ್ ಸೇರಿವೆ.