Hanuman Ansh OTT Release: ಈ ವರ್ಷದ ಅತಿ ಹೆಚ್ಚು ಲಾಭ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 'ಹನುಮಾನ್ ಅಂಶ್' ಚಿತ್ರ ಇದೀಗ ಒಟಿಟಿಯಲ್ಲೂ ಹೊಸ ಯಶಸ್ಸು ಸಾಧಿಸಿದೆ. ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ಈ ಭಕ್ತಿಪ್ರಧಾನ ಸಿನಿಮಾ ಚಿತ್ರಮಂದಿರಗಳ ಬಳಿಕ ಡಿಜಿಟಲ್ ವೇದಿಕೆಯಲ್ಲೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಥಿಯೇಟರ್ ಬಳಿಕ ಒಟಿಟಿಯಲ್ಲೂ 'ನೀಮ್ ಕರೋಲಿ ಬಾಬಾ' ಹವಾ
ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ಬಯೋಪಿಕ್ ಡ್ರಾಮಾ ಸಿನಿಮಾ 'ಹನುಮಾನ್ ಅಂಶ್' ಚಿತ್ರಮಂದಿರಗಳಿಂದ ಹಿಡಿದು ಬಾಕ್ಸ್ ಆಫೀಸ್ವರೆಗೆ ಉತ್ತಮ ಯಶಸ್ಸು ಕಂಡಿತ್ತು. ಇದೀಗ ಬಹುದಿನಗಳ ಕಾಯುವಿಕೆಯ ನಂತರ ಈ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ 'ಹನುಮಾನ್ ಅಂಶ್' (Hanuman Ansh) ಸಿನಿಮಾದ ಬೇಡಿಕೆ ಹೆಚ್ಚಾಗಿದೆ. ಈ ಭಕ್ತಿಪ್ರಧಾನ ಕಥೆಯ ಸಿನಿಮಾ ಆನ್ಲೈನ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಟ್ರೆಂಡಿಂಗ್ ಪಟ್ಟಿಯಲ್ಲೂ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಚಿತ್ರ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದೆ.
ಒಟಿಟಿಯಲ್ಲೂ ಅಬ್ಬರಿಸುತ್ತಿದೆ 'ಹನುಮಾನ್ ಅಂಶ್' ಸಿನಿಮಾ!
ನವೆಂಬರ್ 27ರಂದು 'ಹನುಮಾನ್ ಅಂಶ್' ಸಿನಿಮಾವನ್ನು ಸೋನಿ ಲಿವ್ (SonyLIV) ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಒಟಿಟಿಗೆ ಬರಲು ಸಾಕಷ್ಟು ಸಮಯ ತೆಗೆದುಕೊಂಡಿತ್ತು. ಇದೀಗ ಅದರ ಫಲ ಚಿತ್ರತಂಡಕ್ಕೆ ಸಿಗುತ್ತಿದೆ. ಸದ್ಯ ಸೋನಿ ಲಿವ್ ಒಟಿಟಿ ವೇದಿಕೆಯಲ್ಲಿ ನಂಬರ್ 1 ಟ್ರೆಂಡಿಂಗ್ ಸಿನಿಮಾಗಳ ಪಟ್ಟಿಯಲ್ಲಿ 'ಹನುಮಾನ್ ಅಂಶ್' ಹೆಸರು ಕಾಣಿಸಿಕೊಂಡಿದೆ. ಇದರಿಂದಾಗಿ ಚಿತ್ರವು ಬಾಕ್ಸ್ ಆಫೀಸ್ ಮಾತ್ರವಲ್ಲದೆ ಒಟಿಟಿಯಲ್ಲೂ ತನ್ನ ಪ್ರಾಬಲ್ಯ ಸಾಧಿಸಿದೆ.
ಅತ್ಯುತ್ತಮ ಕಥೆ ಮತ್ತು ಭಕ್ತಿಯ ಭಾವನೆಯನ್ನು ಒಳಗೊಂಡಿರುವ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರವನ್ನು ವಿಶಾಲ್ ಚತುರ್ವೇದಿ ನಿರ್ದೇಶನ ಮಾಡಿದ್ದಾರೆ. ನಟ ಸೋಭಿನವ್ ಸತ್ಯ ಅವರು 'ಹನುಮಾನ್ ಅಂಶ್' ಸಿನಿಮಾದಲ್ಲಿ ನೀಮ್ ಕರೋಲಿ ಬಾಬಾ ಅವರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ಸಿನಿಮಾ ಸುಮಾರು ಮೂರು ತಿಂಗಳ ಕಾಲ ಚಿತ್ರಮಂದಿರಗಳಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಂಡು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು.
ಇನ್ನು 'ಹನುಮಾನ್ ಅಂಶ್' ಚಿತ್ರದ ದೊಡ್ಡ ಯಶಸ್ಸಿನ ಬಳಿಕ ಚಿತ್ರತಂಡ ಇದರ ಸೀಕ್ವೆಲ್ ಮಾಡುವುದಾಗಿ ಈಗಾಗಲೇ ಅಧಿಕೃತವಾಗಿ ಘೋಷಿಸಿದೆ. ಅಷ್ಟೇ ಅಲ್ಲ, ಚಿತ್ರದ ಪೋಸ್ಟ್ ಕ್ರೆಡಿಟ್ ದೃಶ್ಯದಲ್ಲೂ ಎರಡನೇ ಭಾಗದ ಬಗ್ಗೆ ಸುಳಿವು ನೀಡಲಾಗಿದೆ.
ನೆಟ್ಫ್ಲಿಕ್ಸ್ನಲ್ಲೂ ಬಿಡುಗಡೆಯಾದ 'ಹನುಮಾನ್ ಅಂಶ್' ಸಿನಿಮಾ!
ಸದ್ಯ ಸೋನಿ ಲಿವ್ ಒಟಿಟಿ ವೇದಿಕೆಯಲ್ಲಿ 'ಹನುಮಾನ್ ಅಂಶ್' ಸಿನಿಮಾ ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರೆ ಇತರ ಭಾಷೆಗಳ ಪ್ರೇಕ್ಷಕರಿಗೂ ಈ ಸಿನಿಮಾ ವೀಕ್ಷಿಸುವ ಅವಕಾಶ ಸಿಗಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಗುಜರಾತಿ ಭಾಷೆಗಳಲ್ಲಿ ನೆಟ್ಫ್ಲಿಕ್ಸ್ (Netflix) ಒಟಿಟಿ ವೇದಿಕೆಯಲ್ಲಿ ನವೆಂಬರ್ 29ರಿಂದ ಸ್ಟ್ರೀಮಿಂಗ್ ಆಗಲಿದೆ. ಈ ಬಗ್ಗೆ ಚಿತ್ರತಂಡ ಈಗಾಗಲೇ ಅಧಿಕೃತ ಘೋಷಣೆ ಮಾಡಿದೆ. ಹೀಗಾಗಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಪ್ರೇಕ್ಷಕರು ಕೂಡ ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಈ ಸಿನಿಮಾವನ್ನು ತಮ್ಮ ಭಾಷೆಯಲ್ಲಿ ವೀಕ್ಷಿಸಬಹುದು ಎನ್ನುವ ನಿರೀಕ್ಷೆ ಇದೆ.


